ADVERTISEMENT

ಉ.ಕ. ಸಮಸ್ಯೆ ಚರ್ಚೆಯಾಗದಿರುವುದು ದುರಂತ: ಮುಖ್ಯಮಂತ್ರಿ ಚಂದ್ರು ವಿಷಾದ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 14:49 IST
Last Updated 7 ಡಿಸೆಂಬರ್ 2023, 14:49 IST
‘ಮುಖ್ಯಮಂತ್ರಿ’ ಚಂದ್ರು
‘ಮುಖ್ಯಮಂತ್ರಿ’ ಚಂದ್ರು   

ಹುಬ್ಬಳ್ಳಿ: ರಾಜ್ಯದಲ್ಲಿ ಎರಡು ರಾಜಧಾನಿ ಕೇಂದ್ರವಾಗಲಿ ಹಾಗೂ ಉತ್ತರ ಕರ್ನಾಟಕದ ಸಮಸ್ಯೆ ಕುರಿತು ಚರ್ಚಿಸಬೇಕೆಂದು ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಕಟ್ಟಲಾಗಿದೆ. ಆದರೆ, ಇದ್ಯಾವುದೂ ನಡೆಯುತ್ತಿಲ್ಲ. ಇದೊಂದು ದುರಂತದ ವಿಚಾರ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ವಿಷಾದ ವ್ಯಕ್ತಪಡಿಸಿದರು. 

ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಏನ್ಮಾಡಿದರೂ ನಡೆಯುತ್ತದೆ, ಜನ ಮತ ಹಾಕುತ್ತಾರೆ. ನಮಗಲ್ಲದಿದ್ದರೆ ಅವರಿಗೆ, ಅವರಿಗಲ್ಲದಿದ್ದರೆ ನಮಗೆ  ಎನ್ನುವ ಭಾವನೆ ಇದೆ. ಇದನ್ನು ಹೋಗಲಾಡಿಸಬೇಕಾಗಿದೆ. ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು. ಇನ್ನು ಮೇಲೆ ಪಕ್ಷ ನೋಡಬೇಡಿ, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಲ್ಲವೂ ಒಂದೇ ರೀತಿಯಾಗಿವೆ. ಮೂರು ಪಕ್ಷದ ಬಹುತೇಕರು ಕಳ್ಳರಾಗಿದ್ದಾರೆ. ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ನಾಯಕರನ್ನು ನೋಡಿ ಮತ ಹಾಕಬೇಕು ಎಂದು ಕೋರಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಆಗಿರುವ ಕಾಮಗಾರಿಗಳಲ್ಲಿ ಲೋಪ ಆಗಿದೆ. ಗುಣಮಟ್ಟದ ಕಾಮಗಾರಿಗಳಾಗಿಲ್ಲ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇವೆಲ್ಲ ವಿಚಾರಗಳನ್ನು ಹಳ್ಳಿ ಹಳ್ಳಿಗೆ ಹೋಗಿ ಜನರೊಟ್ಟಿಗೆ ಚರ್ಚಿಸುತ್ತೇವೆ ಎಂದರು.

ADVERTISEMENT

ರೈತರು ಏನ್ಮಾಡಬೇಕು: ಬರ ಪರಿಹಾರ ಕುರಿತು ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ತೋರುತ್ತಿದೆ. ರಾಜ್ಯ ಸರ್ಕಾರವೂ ಕೊಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ರೈತರು ಏನ್ಮಾಡಬೇಕು’ ಎಂದು ಪ್ರಶ್ನಿಸಿದರು.

ಅತಿವೃಷ್ಟಿಯಾಗಲಿ, ಅನಾವೃಷ್ಟಿಯಾಗಲಿ ರೈತರು ಸಂಕಷ್ಟಪಡುತ್ತಾರೆ. ಅವರ ಪರವಾಗಿ ನಾವು ಹೋರಾಟ ಮಾಡುತ್ತೇವೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.