ADVERTISEMENT

ಮೂರು ಕಡೆ 3ನೇ ಸ್ಥಾನ ಪಡೆದಿದ್ದ ‘ನೋಟಾ’

ಕಣದಲ್ಲಿದ್ದ ಯಾವ ಅಭ್ಯರ್ಥಿಯನ್ನೂ ಒಪ್ಪದೆ ‘ನೋಟಾ’ ಒತ್ತಿದ ಮತದಾರ

ಓದೇಶ ಸಕಲೇಶಪುರ
Published 5 ಮೇ 2023, 6:06 IST
Last Updated 5 ಮೇ 2023, 6:06 IST
ನೋಟಾ
ನೋಟಾ   

ಹುಬ್ಬಳ್ಳಿ: ಕಳೆದ 2018ನೇ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ‘ನೋಟಾ’ (ಯಾರಿಗೂ ಮತ ಇಲ್ಲ) ಮತಗಳು ಮೂರನೇ ಸ್ಥಾನ ಪಡೆದಿವೆ. ಕಣದಲ್ಲಿ ಎರಡಂಕಿಯ ಅಭ್ಯರ್ಥಿಗಳಿದ್ದರೂ ಯಾರನ್ನೂ ಒಪ್ಪದ ಮತದಾರ, ತನ್ನ ಮೂರನೇ ಆಯ್ಕೆಯಾಗಿ ‘ನೋಟಾ’ ಬಟನ್ ಒತ್ತಿದ್ದಾನೆ.

ಹಿಂದಿನ ಚುನಾವಣೆಯ ಫಲಿತಾಂಶವನ್ನು ಗಮನಿಸಿದಾಗ, ಜಿಲ್ಲೆಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳಲ್ಲಿ 10,603 ನೋಟಾ ಮತಗಳು ಚಲಾವಣೆಯಾಗಿವೆ. ಒಟ್ಟು ಮತಗಳಲ್ಲಿ ನೋಟಾ ಪ್ರಮಾಣ ಶೇ 6.98 ಇದೆ.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅತಿ ಹೆಚ್ಚು 1,967 ಮತಗಳು ಬಿದ್ದಿವೆ. ಉಳಿದಂತೆ, ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ 1,962  ಹಾಗೂ ನವಲಗುಂದಲ್ಲಿ 1,914 ನೋಟಾ ಮತಗಳು ಚಲಾವಣೆಯಾಗಿವೆ. ಧಾರವಾಡ ಗ್ರಾಮೀಣ, ಹು–ಧಾ ಪಶ್ಚಿಮ ಹಾಗೂ ಹು–ಧಾ ಪೂರ್ವದಲ್ಲಿ ನೋಟಾ ಗಳಿಸಿದ ಮತಗಳ ಪ್ರಮಾಣ ಮೂರನೇ ಸ್ಥಾನದಲ್ಲಿದೆ. ತಲಾ ಎರಡು ಕಡೆ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದೆ. 

ADVERTISEMENT

2013ರಲ್ಲಿ ಜಾರಿ: ಮತದಾರನ ಹಕ್ಕು ಗೌರವಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ, 2013ರ ಅಕ್ಟೋಬರ್‌ನಲ್ಲಿ ಚುನಾವಣಾ ಆಯೋಗವು ‘ನೋಟಾ’ ಜಾರಿಗೆ ತಂದಿತು. ಆರಂಭದಲ್ಲಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಮಾತ್ರ ಇದ್ದ ‘ನೋಟಾ’, ಇದೀಗ ಪಂಚಾಯಿತಿ ಚುನಾವಣೆಗಳಿಗೂ ಅನ್ವಯವಾಗಿದೆ. ವಿದ್ಯುನ್ಮಾನ ಮತಯಂತ್ರದಲ್ಲಿ ನಮೂದಾಗಿರುವ ಅಭ್ಯರ್ಥಿಗಳ ಸಾಲಿನ ಕೊನೆಯಲ್ಲಿ ಈ ನೋಟಾ ಬಟನ್ ಇರುತ್ತದೆ.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಚಲಾವಣೆಯಾಗಿದ್ದ ಒಟ್ಟು 2,07,025 ಮತಗಳಲ್ಲಿ ಶೇ 1.26ರಷ್ಟು ನೋಟಾ ಮತಗಳು. ಕಣದಲ್ಲಿದ್ದ 11 ಅಭ್ಯರ್ಥಿಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಂತರ 3ನೇ ಸ್ಥಾನವನ್ನು ನೋಟಾ ಪಡೆದಿದೆ. ಹು–ಧಾ ಪಶ್ಚಿಮದಲ್ಲಿ ಚಲಾವಣೆಯಾದ 2,55,252 ಮತಗಳ ಪೈಕಿ ಶೇ 1.24 ಮತಗಳು ನೋಟಾ ಆಗಿದ್ದು, 15 ಅಭ್ಯರ್ಥಿಗಳ ಪೈಕಿ ಇಲ್ಲಿಯೂ 3ನೇ ಸ್ಥಾನದಲ್ಲಿದೆ. ಹು–ಧಾ ಪೂರ್ವ 1,94,209 ಮತಗಳಲ್ಲಿ 1,260 ನೋಟಾ ಚಲಾವಣೆಯಾಗಿದ್ದು, ಕಣದಲ್ಲಿದ್ದ 9 ಅಭ್ಯರ್ಥಿಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಂತರದ ಸ್ಥಾನವನ್ನು ನೋಟಾ ಅಲಂಕರಿಸಿದೆ.

ಕಲಘಟಗಿಯಲ್ಲಿ ಚಲಾವಣೆಯಾದ 1,89,693 ಮತಗಳ ಪೈಕಿ ಶೇ 0.95 ನೋಟಾ ಮತಗಳಿದ್ದು, 16 ಅಭ್ಯರ್ಥಿಗಳ ಪೈಕಿ 4ನೇ ಸ್ಥಾನ ಮತ್ತು ಹು–ಧಾ ಸೆಂಟ್ರಲ್‌ನ ಒಟ್ಟು 2,42,736 ಮತಗಳಲ್ಲಿ ಶೇ 0.70ರಷ್ಟು ಮತ ನೋಟಾ ಆಗಿದ್ದು, 27 ಅಭ್ಯರ್ಥಿಗಳ ಪೈಕಿ 4ನೇ ಸ್ಥಾನದಲ್ಲಿ ನೋಟಾ ಇದೆ.

ನವಲಗುಂದ ಕ್ಷೇತ್ರದಲ್ಲಿ 2,04,041 ಮತಗಳ ಪೈಕಿ, ಶೇ 1.20ರಷ್ಟು ನೋಟಾ ಚಲಾವಣೆಯಾಗಿದ್ದು, 14 ಅಭ್ಯರ್ಥಿಗಳಲ್ಲಿ 5ನೇ ಸ್ಥಾನ ಗಳಿಸಿದೆ. ಕುಂದಗೋಳದಲ್ಲಿ 1,87,513 ಮತಗಳ ಪೈಕಿ 1,032 ಮತಗಳು ನೋಟಾ ಆಗಿದ್ದು, ಇಲ್ಲಿಯೂ 13 ಅಭ್ಯರ್ಥಿಗಳ ಪೈಕಿ 5ನೇ ಸ್ಥಾನ ಪಡೆದಿದೆ.

ಸಂತೋಷ ನರಗುಂದ
7 ಕ್ಷೇತ್ರಗಳಲ್ಲಿ ಒಟ್ಟು 10,603 ನೋಟಾ ಮತ ಚಲಾವಣೆ ಶೇಕಡವಾರು ಚಲಾವಣೆಯಾದ ಮತ ಪ್ರಮಾಣ ಶೇ 6.98 ಚುನಾವಣಾ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಅಗತ್ಯ

‘ಅಭಿಪ್ರಾಯ ದಾಖಲಿಸುವುದಕ್ಕಷ್ಟೇ ಸೀಮಿತ’ ‘ನೋಟಾ ಮತಗಳ ಸಂಖ್ಯೆ ಹೆಚ್ಚುತ್ತಿರುವುದು ಮತದಾರರು ನಿರೀಕ್ಷೆ ಮಾಡುತ್ತಿರುವಂತಹ ಅಭ್ಯರ್ಥಿಗಳು ರಾಜಕೀಯ ಪಕ್ಷಗಳಲಿಲ್ಲ ಎಂಬುದನ್ನು ತೋರಿಸುತ್ತದೆ. ಮತದಾರರು ಅಭ್ಯರ್ಥಿಗಳ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿ ಅಭಿಪ್ರಾಯ ದಾಖಲಿಸುವುದಕ್ಕಷ್ಟೇ ನೋಟಾ ಸೀಮಿತವಾಗಿದೆ’ ಎಂದು ಜನಾಗ್ರಹ ಸಂಸ್ಥೆಯ ನಾಗರಿಕ ಸಹಭಾಗಿತ್ವ ಕಾರ್ಯಕ್ರಮದ ರಾಜ್ಯ ಮುಖ್ಯಸ್ಥ ಸಂತೋಷ ನರಗುಂದ ಅಭಿಪ್ರಾಯಪಟ್ಟರು. ‘ನೋಟಾದಿಂದ ರಾಜಕೀಯ ಪಕ್ಷಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಒಂದು ವೇಳೆ ನೋಟಾ ಮತಗಳೇ ಮೊದಲ ಸ್ಥಾನ ಪಡೆದರೂ ಉಳಿದವರಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದವರೇ ಆಯ್ಕೆಯಾಗುತ್ತಾರೆ. ನೋಟಾ ನಿಜಕ್ಕೂ ಪರಿಣಾಮಕಾರಿಯಾಗಿರಬೇಕಾದರೆ ಚುನಾವಣಾ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆಯಾಗಬೇಕು. ನೋಟಾ ಮತಗಳು ಇಂತಿಷ್ಟು ಪ್ರಮಾಣ ದಾಟಿದರೆ ಮರು ಚುನಾವಣೆ ನಡೆಸುವ ಅವಕಾಶ ಸೇರಿದಂತೆ ಇತರ ಪರ್ಯಾಯಗಳ ಬಗ್ಗೆಯೂ ಚಿಂತನೆಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.