ADVERTISEMENT

ಹುಬ್ಬಳ್ಳಿ | ಪಾಸ್‌ಪೋರ್ಟ್‌: ಅರ್ಜಿದಾರರ ಸಂಖ್ಯೆ ದುಪ್ಪಟ್ಟು

ಜಿಲ್ಲಾ ಪಾಸ್‌ಪೋರ್ಟ್‌ ಸೇವಾ ಕೇಂದ್ರದಲ್ಲಿ ತ್ವರಿತ ಕಾರ್ಯ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:04 IST
Last Updated 4 ಜುಲೈ 2024, 5:04 IST
ಪಾಸ್‌ಪೋರ್ಟ್‌
ಪಾಸ್‌ಪೋರ್ಟ್‌   

ಹುಬ್ಬಳ್ಳಿ: ನಗರದ ಐಟಿ ಪಾರ್ಕ್‌ನಲ್ಲಿರುವ ಪಾಸ್‌ಪೋರ್ಟ್‌ ಸೇವಾ ಕೇಂದ್ರದಲ್ಲಿ (ಪಿಎಸ್‌ಕೆ) ಹೊಸದಾಗಿ ಪಾಸ್‌ಪೋರ್ಟ್‌ ಮಾಡಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 

ಸಾಮಾನ್ಯ ಪಾಸ್‌ಪೋರ್ಟ್‌ಗಾಗಿ ಕೆಲ ದಿನಗಳ ಹಿಂದೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ 250 ರಿಂದ 300 ಜನರ ದಾಖಲೆಗಳ ಪರಿಶೀಲನೆ ಹುಬ್ಬಳ್ಳಿಯ ಸೇವಾ ಕೇಂದ್ರದಲ್ಲಿ ಪ್ರತಿದಿನ ನಡೆಯುತಿತ್ತು. ಈಗ ಅರ್ಜಿದಾರರ ಸಂಖ್ಯೆ 450ಕ್ಕೆ ಏರಿಕೆಯಾಗಿದೆ. ತತ್ಕಾಲ್‌ ಪಾಸ್‌ಪೋರ್ಟ್‌ ಬಯಸಿ ಅರ್ಜಿ ಸಲ್ಲಿಸಿದವರ ದಾಖಲೆಗಳ ಪರಿಶೀಲನೆಯೂ ನಡೆದಿದೆ.

‘ಬೆಂಗಳೂರಿನ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲಿ ಹಲವು ದಿನಗಳವರೆಗೆ ಕಾಯಬೇಕು. ಆದರೆ, ಹುಬ್ಬಳ್ಳಿ ಸೇವಾ ಕೇಂದ್ರದಲ್ಲಿ ಅಂತಹ ಪ್ರಮೇಯ ಇಲ್ಲ. ಪಾಸ್‌ಪೋರ್ಟ್ ಬೇಗ ಸಿಗತ್ತದೆ ಮತ್ತು ನವೀಕರಣ ಪ್ರಕ್ರಿಯೆ ವೇಗವಾಗಿ ನೆರವೇರುತ್ತದೆ ಎಂಬ ನಂಬಿಕೆಯೊಂದಿಗೆ ಬಹುತೇಕ ಮಂದಿ ಹುಬ್ಬಳ್ಳಿ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸುತ್ತಾರೆ’ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಹೊಸ ಪಾಸ್‌ಪೋರ್ಟ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದವರು ಹೆಚ್ಚು ಕಾಯುವ ಅಗತ್ಯವಿಲ್ಲದೇ ಹುಬ್ಬಳ್ಳಿಯ ಸೇವಾ ಕೇಂದ್ರದ ಅಧಿಕಾರಿಗಳು ಸೂಚಿಸಿದ ದಿನ, ಸಮಯಕ್ಕೆ ಅಗತ್ಯ ದಾಖಲೆಗಳೊಂದಿಗೆ ಹಾಜರಾದರೆ ಸಾಕು. ಪೊಲೀಸ್ ಠಾಣೆ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತದೆ. ನಂತರ ಕೆಲವೇ ದಿನಗಳಲ್ಲಿ ಅರ್ಜಿದಾರರ ವಿಳಾಸಕ್ಕೆ ರಿಜಿಸ್ಟೆರ್ ಅಂಚೆ ಮೂಲಕ ಪಾಸ್‌ಪೋರ್ಟ್‌ ತಲುಪುತ್ತದೆ.

ಉದ್ಯೋಗ, ಪ್ರವಾಸ:

‘ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಹೆಚ್ಚಾಗಿ ಮುಸ್ಲಿಂ ಸಮುದಾಯದವರಾಗಿದ್ದು, ಬಹುತೇಕ ಮಂದಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಕೆಲವರು ಪ್ರವಾಸಕ್ಕೆ, ಇನ್ನೂ ಕೆಲವರು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ’ ಎಂದು ಪಾಸ್‌ಪೋರ್ಟ್‌ ಸೇವಾ ಕೇಂದ್ರದ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಸಾಮಾನ್ಯ ಪಾಸ್‌ಪೋರ್ಟ್‌ ಅರ್ಜಿ ಶುಲ್ಕ ₹1,500. ತತ್ಕಾಲ್‌ ಪಾಸ್‌ಪೋರ್ಟ್‌ ಪಡೆಯಲು ಹೆಚ್ಚುವರಿಯಾಗಿ ₹2 ಸಾವಿರ ಶುಲ್ಕ ಪಾವತಿಸಬೇಕು. ಅದು ಕೂಡ ಪಾಸ್‌ಪೋರ್ಟ್‌ ಬುಕ್‌ನ ಪುಟಗಳ ಸಂಖ್ಯೆ, ಮಾನ್ಯತೆ ಅವಧಿ ಹಾಗೂ ಅರ್ಜಿದಾರರ ವಯಸ್ಸಿನ ಆಧಾರದ ಮೇಲೆ ಶುಲ್ಕ ಬೇರೆ ಬೇರೆ ಇರುತ್ತದೆ’ ಎಂದು ಅವರು ತಿಳಿಸಿದರು.

‘ಸಾಮಾನ್ಯ ಪಾಸ್‌ಪೋರ್ಟ್‌ಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದರೆ, ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಒಂದು ತಿಂಗಳಲ್ಲಿ ಮತ್ತು ತತ್ಕಾಲ್‌ನಲ್ಲಿ ಅರ್ಜಿ ಸಲ್ಲಿಸಿದರೆ ವಾರದೊಳಗೆ ಪಾಸ್‌ಪೋರ್ಟ್‌ ಸಿಗುತ್ತದೆ. ತತ್ಕಾಲ್‌ ಪಾಸ್‌ಪೋರ್ಟ್‌ ಪಡೆಯಲು ಇಚ್ಛಿಸುವವರು ನಿಗದಿತ ಹೆಚ್ಚುವರಿ ಶುಲ್ಕ ಪಾವತಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.