ಹುಬ್ಬಳ್ಳಿ: 2023ನೇ ಸಾಲಿನ ಸಾಮಾನ್ಯ ಕೋರಿಕೆ, ಪರಸ್ಪರ ವರ್ಗಾವಣೆ ಹಾಗೂ ಪತಿ-ಪತ್ನಿ ಮತ್ತಿತರ ವಿಶೇಷ ಪ್ರಕರಣಗಳು ಸೇರಿದಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಒಟ್ಟು 368 ಚಾಲಕ ನಿರ್ವಾಹಕರುಗಳನ್ನು ವರ್ಗಾವಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಆದೇಶ ಹೊರಡಿಸಿದ್ದಾರೆ.
ವಾ.ಕ.ರ.ಸಾ.ಸಂಸ್ಥೆಯಲ್ಲಿ ಒಟ್ಟಾರೆ ಹಾಗೂ ಕೆಲವು ವಿಭಾಗಗಳಲ್ಲಿ ಬಹಳಷ್ಟು ಚಾಲನಾ ಸಿಬ್ಬಂದಿಗಳ ಕೊರತೆ ಇದ್ದಾಗ್ಯೂ ಸಹ ವರ್ಗಾವಣೆ ನಿರೀಕ್ಷಣೆಯಲ್ಲಿದ್ದ ಅರ್ಹ ನೌಕರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 2023ರ ಸಾಲಿಗೆ ಸಂಬಂಧಿಸಿದತೆ ಆನ್‌ಲೈನ್ ಮೂಲಕ ವರ್ಗಾವಣೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆಗಸ್ಟ್ 23ರಿಂದ ಸೆಪ್ಟೆಂಬರ್ 4ರವರೆಗೆ ಒಟ್ಟು 1,003 ಚಾಲಕರು, ನಿರ್ವಾಹಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 727 ಅರ್ಹರಿದ್ದರು. ಸಂಸ್ಥೆಯ ಒಂಬತ್ತು ವಿಭಾಗಗಳಲ್ಲಿ ಚಾಲನಾ ಸಿಬ್ಬಂದಿಗಳ ಮಂಜೂರಾತಿ, ಲಭ್ಯತೆ ಹಾಗೂ ಖಾಲಿ ಸ್ಥಾನ ಪರಿಗಣಿಸಿ 309 ಸಾಮಾನ್ಯ, 34 ಪರಸ್ಪರ ಹಾಗೂ 25 ವಿಶೇಷ ಪ್ರಕರಣಗಳು ಸೇರಿದಂತೆ ಒಟ್ಟು 368 ಅರ್ಹ ಚಾಲನಾ ಸಿಬ್ಬಂದಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.
ಆನ್‌ಲೈನ್ ಮೂಲಕ ಸಲ್ಲಿಕೆಯಾದ ಸಾಮಾನ್ಯ ವರ್ಗಾವಣೆ ಕೋರಿಕೆಗಳಲ್ಲಿ ಹೆಚ್ಚಿನವರು ಉತ್ತರ ಕನ್ನಡ ವಿಭಾಗದಿಂದ ಬೇರೆ ವಿಭಾಗಗಳಿಗೆ ವರ್ಗಾವಣೆ ಬಯಸಿದ್ದಾರೆ. ಅದೇ ರೀತಿ ಬೇರೆ ವಿಭಾಗಗಳಿಂದ ಬಾಗಲಕೋಟೆ ವಿಭಾಗಕ್ಕೆ ವರ್ಗಾವಣೆ ಕೋರಿದ್ದಾರೆ. ಉತ್ತರ ಕನ್ನಡ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಕೊರತೆ ಹೆಚ್ಚಾಗಿರುವುದರಿಂದ ಹಾಗೂ ಬಾಗಲಕೋಟೆ ವಿಭಾಗದಲ್ಲಿ ಚಾಲನಾ ಸಿಬ್ಬಂದಿ ಚಾಲನಾ ಸಿಬ್ಬಂದಿ ಲಭ್ಯತೆ ಹೆಚ್ಚಾಗಿದ್ದರಿಂದ ಈ ಅರ್ಜಿಗಳಲ್ಲಿ ಪ್ರಸುತ ವಿಭಾಗದಲ್ಲಿ 8 ವರ್ಷ ಹಾಗೂ 8 ವರ್ಷಕ್ಕಿಂತ ಹೆಚ್ಚಿನ ಅವಧಿಯವರೆಗೆ ಕಾರ್ಯ ನಿರ್ವಹಿಸಿದ ಚಾಲನಾ ಸಿಬ್ಬಂದಿಗಳ ಕೋರಿಕೆಗಳನ್ನು ಮಾತ್ರ ಪರಿಗಣಿಸಲಾಗಿದೆ. ಹಾವೇರಿ ವಿಭಾಗದಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇರುವುದರಿಂದ ಹಾಗೂ ಗದಗ ವಿಭಾಗದಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇಲ್ಲದಿರುವುದರಿಂದ ಹಾವೇರಿಯಿಂದ ಗದಗ ವಿಭಾಗದ ಕೋರಿಕೆಗಳನ್ನು ಪರಿಗಣಿಸಿಲ್ಲ.
ಪರಸ್ಪರ ವರ್ಗಾವಣೆ ಹಾಗೂ ವಿಶೇಷ ಪ್ರಕರಣಗಳಲ್ಲಿ ಪರಿಗಣಿಸಲಾದ ನೌಕರರನ್ನು ಕೂಡಲೆ ಪ್ರಸ್ತುತ ಸ್ಥಳದಿಂದ ಬಿಡುಗಡೆ ಗೊಳಿಸಲಾಗುವುದು. ಆದರೆ, ಬಸ್ ಗಳ ಕಾರ್ಯಾಚರಣೆಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಸಾಮಾನ್ಯ ವರ್ಗಾವಣೆಯಲ್ಲಿ ಪರಿಗಣಿಸಲಾದ 309 ಚಾಲನಾ ಸಿಬ್ಬಂದಿಗಳ ತಕ್ಷಣ ಬಿಡುಗಡೆಗೊಳಿಸಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಉತ್ತರ ಕನ್ನಡ, ಹಾವೇರಿ, ಧಾರವಾಡ(ಗ್ರಾ), ಚಿಕ್ಕೋಡಿಯಂತಹ ಹೆಚ್ಚು ಚಾಲನಾ ಸಿಬ್ಬಂದಿಗಳ ಕೋರಿಕೆ ಇರುವ ವಿಭಾಗಗಳಿಗೆ ಚಾಲನಾ ಸಿಬ್ಬಂದಿಗಳನ್ನು ಪರ್ಯಾಯವಾಗಿ ಒದಗಿಸುವವವರೆಗೆ ವರ್ಗಾವಣೆಗೊಂಡ ಚಾಲನಾ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸುವುದು ಕಷ್ಟಸಾಧ್ಯ. ಈ ಹಿನ್ನಲೆಯಲ್ಲಿ ವರ್ಗಾವಣೆಗೊಂಡ ಚಾಲನಾ ಸಿಬ್ಬಂದಿಗಳು ಪ್ರಸ್ತುತ ವಿಭಾಗದಲ್ಲಿಯೇ ಮುಂದಿನ ಆದೇಶದವರೆಗೆ ಮುಂದುವರಿಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.