ADVERTISEMENT

ನವಲಗುಂದ | ಸಾರ್ವಜನಿಕರಿಗೆ ಸಿಗದ ಅಧಿಕಾರಿಗಳು: ತಪ್ಪದ ಅಲೆದಾಟ

​ಪ್ರಜಾವಾಣಿ ವಾರ್ತೆ
Published 28 ಮೇ 2024, 5:47 IST
Last Updated 28 ಮೇ 2024, 5:47 IST
ನವಲಗುಂದ ಪತ್ರಾಂಕಿತ ಉಪ ಖಜಾನೆ ಕಚೇರಿಯಲ್ಲಿ ಸಿಬ್ಬಂದಿಯಿಲ್ಲದೆ ಖಾಲಿ ಇರುವ ಕುರ್ಚಿಗಳು
ನವಲಗುಂದ ಪತ್ರಾಂಕಿತ ಉಪ ಖಜಾನೆ ಕಚೇರಿಯಲ್ಲಿ ಸಿಬ್ಬಂದಿಯಿಲ್ಲದೆ ಖಾಲಿ ಇರುವ ಕುರ್ಚಿಗಳು   

ನವಲಗುಂದ: ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿರುವ ಪತ್ರಾಂಕಿತ ಉಪ ಖಜಾನೆ ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಸಾರ್ವಜನಿಕರು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.

ಸೋಮವಾರ (ಮೇ 27) ಬೆಳಿಗ್ಗೆ 10.30ಕ್ಕೆ ಹಾಜರಾಗಬೇಕಿದ್ದ ಅಧಿಕಾರಿಗಳು ಮಧ್ಯಾಹ್ನ 12 ಗಂಟೆಯಾದರೂ ಬಾರದೆ, ಕುರ್ಚಿಗಳು ಖಾಲಿಯಿದ್ದವು. ಸಾರ್ವಜನಿಕರು ಕೆಲಸಕ್ಕಾಗಿ ಅಲೆದಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಸಿಬ್ಬಂದಿ ಕೇಳಿದರೆ, ಮೇಲಧಿಕಾರಿಗಳು ಇನ್ನೇನು ಬರುತ್ತಾರೆ ಎಂಬ ಉತ್ತರ ಮಾಮೂಲು. ಇದು ನಿತ್ಯದ ಸಮಸ್ಯೆ.

ಹಾಜರಾತಿಗಾಗಿ ಇರಬೇಕಾದ ಬಯೊ ಮೆಟ್ರಿಕ್ ವ್ಯವಸ್ಥೆಯೂ ಇಲ್ಲದಿರುವುದರಿಂದ ಅಧಿಕಾರಿಗಳಿಗೆ ಕಡಿವಾಣ ಇಲ್ಲದಂತಾಗಿದೆ.

ADVERTISEMENT

‘ಸರ್ಕಾರದಿಂದ ಪ್ರತಿತಿಂಗಳು ಜಮೆಯಾಗಬೇಕಾದ ಪಿಂಚಣಿ ಸರಿಯಾಗಿ ಜಮೆಯಾಗುತ್ತಿಲ್ಲವೆಂದು ಕೇಳಲು ಹೋದರೆ ಸಂಬಂಧಿಸಿದ ಪತ್ರಾಂಕಿತ ಉಪ ಖಜಾನೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ವೃದ್ಧರು, ಅಂಗವಿಕಲರು, ವಿಧವೆಯರು ಅಲೆದಾಡಿ ಕಣ್ಣೀರಿಡುತ್ತಿದ್ದರೂ ಮೇಲಧಿಕಾರಿಗಳು ಕಣ್ಣು ಕಾಣದ, ಕಿವಿ ಕೇಳದವರಂತೆ ಇರುತ್ತಾರೆ’ ಎಂದು ಗ್ರಾಮಸ್ಥ ಸಿದ್ದು ಕುಲಕರ್ಣಿ ಆರೋಪಿಸುತ್ತಾರೆ.

ಬಸವೇಶ್ವರ, ಅಂಬೇಡ್ಕರ್, ಶಂಕರಾಚಾರ್ಯ, ಹೇಮರಡ್ಡಿ ಮಲ್ಲಮ್ಮ, ವೇಮನ, ವಾಲ್ಮೀಕಿ, ಅಂಬಿಗರ ಚೌಡಯ್ಯ ಸೇರಿದಂತೆ ಇನ್ನಿತರ ಮಹನೀಯರ ಜಯಂತಿ ಆಚರಣೆಗೂ ಇಲ್ಲಿನ ಸಿಬ್ಬಂದಿ–ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಾರೆ ಎಂಬ ದೂರುಗಳೂ ಇವೆ.

ಕರ್ತವ್ಯಲೋಪ ಎಸಗುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಎದುರಾಗುತ್ತಿರುವ ತೊಂದರೆಯನ್ನು ನಿವಾರಿಸಬೇಕು ಎಂಬುದು ಜನರ ಬೇಡಿಕೆ ಆಗಿದೆ.

ನವಲಗುಂದ ಪತ್ರಾಂಕಿತ ಉಪ ಖಜಾನೆ ಕಚೇರಿಯಲ್ಲಿ ಸಿಬ್ಬಂದಿಯಿಲ್ಲದೆ ಖಾಲಿ ಇರುವ ಕುರ್ಚಿಗಳು
ತರಬೇತಿ ಅನಾರೋಗ್ಯದ ಕಾರಣ ಕಚೇರಿಗೆ ಹೋಗಲಾಗಿಲ್ಲ. ಉಸ್ತುವಾರಿಯನ್ನು ಉಪ ಅಧಿಕಾರಿಗಳಿಗೆ ವಹಿಸಿದ್ದೇನೆ. ಕರ್ತವ್ಯಕ್ಕೆ ಹಾಜರಾದ ಕೂಡಲೇ ಮಾಹಿತಿ ಪಡೆದು ಸಮಸ್ಯೆ ಪರಿಹರಿಸುತ್ತೇನೆ
ಜೈಶೀಲಾ ಸೋಮೇಶ್ವರ ಪತ್ರಾಂಕಿತ ಉಪ ಖಜಾನೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.