ನವಲಗುಂದ: ಗ್ರಾಮಸಭೆಗೆ ಎಲ್ಲ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎನ್ನುವ ನಿಯಮವಿದ್ದರೂ ಕೆಲವರಷ್ಟೇ ಹಾಜರಾಗುತ್ತಿದ್ದಾರೆ. ಇದರಿಂದಾಗಿ ಗ್ರಾಮದ ಸಮಸ್ಯೆಗಳು ಇತ್ಯರ್ಥವಾಗುತ್ತಿಲ್ಲ. ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ ಎಂದು ಗ್ರಾಮಸ್ಥ ಬಸವರಾಜ ಮಾದರ ದೂರಿದರು.
ಬುಧವಾರ ಜಾವೂರ ಗ್ರಾಮ ಪಂಚಾಯ್ತಿಯಿಂದ ನಡೆದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು ‘ಮಾದಿಗರ ಓಣಿಯ ಹತ್ತಿರವೇ ದನಕರುಗಳ ಶವ ಎಸೆಯಲಾಗುತ್ತಿದೆ. ಇದರಿಂದಾಗ ದುರ್ವಾಸನೆ ಸಹಿಸಲಾಗದೇ ತೊಂದರೆಯಾಗುತ್ತಿದೆ. ಈ ಕುರಿತು ತುರ್ತು ಕ್ರಮ ಕೈಗೊಳ್ಳಬೇಕು’ ಎಂದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂ.ಕೆ.ಹೂಳಿ ‘ರಾಜ್ಯ ಸರ್ಕಾರದ ಮಾಹಿತಿ ಖಣಜ ದತ್ತಾಂಶದಲ್ಲಿ 62 ಇಲಾಖೆಯ ಎಲ್ಲ ಮಾಹಿತಿ ಲಭ್ಯವಿರುತ್ತದೆ. ಸಾರ್ವಜನಿಕರೂ ಮೊಬೈಲ್ ಮೂಲಕವೇ ಮಾಹಿತಿ ಪಡೆಯಬಹುದಾಗಿದೆ’ ಎಂದು ತಿಳಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಾನಂದ ಅವಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಯಲ್ಲವ್ವ ನಾಯ್ಕರ್, ಪಂಚಾಯ್ತಿ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.