ಹುಬ್ಬಳ್ಳಿ: ಗದಗ ಜಿಲ್ಲೆಯ ಶಿರಹಟ್ಟಿಯ ಭಾವೈಕ್ಯ ಸಂಸ್ಥಾನ ಮಹಾಪೀಠದ ಫಕೀರ ಸಿದ್ಧರಾಮ ಸ್ವಾಮೀಜಿಯವರ ಅಮೃತ ಮಹೋತ್ಸವದ ಪ್ರಯುಕ್ತ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಗುರುವಾರ ಆನೆಯಂಬಾರಿ ಸಹಿತ ಸ್ವಾಮೀಜಿಗೆ 5,555 ಕೆಜಿ ನಾಣ್ಯಗಳಿಂದ ಭಕ್ತರು ತುಲಾಭಾರ ನೆರವೇರಿಸಿದರು.
ವಿಶೇಷವಾಗಿ ನಿರ್ಮಿತ ತಕ್ಕಡಿಯಲ್ಲಿ ಒಂದು ಬದಿ ಆನೆಯಂಬಾರಿಯಲ್ಲಿದ್ದ ಸ್ವಾಮೀಜಿ, ಇನ್ನೊಂದು ಬದಿ ನಾಣ್ಯಗಳನ್ನು ಇಡುತ್ತಿದ್ದಂತೆ ಅಪಾರ ಸಂಖ್ಯೆ ಭಕ್ತರು ‘ಫಕೀರೇಶ್ವರ ಮಹಾರಾಜಕೀ ಜೈ’ ಎಂಬ ಘೋಷಣೆ ಹಾಕಿದರು.
ಎರಡು ಕ್ವಿಂಟಲ್ ತೇಗದ ಕಟ್ಟಿಗೆ ತಯಾರಿಸಲಾಗಿದ್ದ ಅಂಬಾರಿಯಲ್ಲಿ ಸ್ವಾಮೀಜಿ ಜತೆಗೆ ಧರ್ಮಗ್ರಂಥಗಳನ್ನು ಇಡಲಾಗಿತ್ತು. ತುಲಾಭಾರ ಮಾಡಿದ ನಾಣ್ಯಗಳ ಮೊತ್ತ ₹ 73.40 ಲಕ್ಷ. ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಭಕ್ತರು ದಾನವಾಗಿ ನೀಡಿದ 3 ಕೆಜಿ ಚಿನ್ನವನ್ನು ಸ್ವಾಮಿಜಿಗೆ ಸಮರ್ಪಿಸಲಾಯಿತು.
ತುಲಾಭಾರ ಸ್ವೀಕರಿಸಿದ ಫಕೀರ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಆನೆಯಂಬಾರಿ ಸಹಿತ ತುಲಾಭಾರ ಮಾಡಬೇಕು ಎಂದು 2001ರಲ್ಲಿ ಪಕೀರೇಶ್ವರರ ಸಂಕಲ್ಪ ಈ ವರ್ಷ ನೆರವೇರಿದೆ. ದ್ವೇಷ ಬಿಟ್ಟರೆ ಸಮಾಜದಲ್ಲಿ ನೆಮ್ಮದಿ ನೆಲೆಸುತ್ತದೆ. ಎಲ್ಲರೂ ಪ್ರೀತಿಸೋಣ’ ಎಂದರು.
ಶಿರಹಟ್ಟಿ–ಬಾಲೆಹೊಸೂರಿನ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ಸ್ವಾಮೀಜಿಯವರಿಗೆ 63 ಕೆಜಿ ಚಿನ್ನದ ತುಲಾಭಾರ, ಕಿರೀಟ ಧಾರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಹುಬ್ಬಳ್ಳಿಯ ಭಕ್ತರು ನೀಡಿದ ಚಿನ್ನ, ದೇಣಿಗೆಯನ್ನು ಅದಕ್ಕೆ ಬಳಸಲಾಗುವುದು. ತುಲಾಭಾರ ಮಾಡಿದ ಚಿನ್ನದಿಂದ ಸ್ಥಾಯಿನಿಧಿ ಸ್ಥಾಪಿಸಿ ಬಡ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸುವ ಚಿಂತನೆ ಇದೆ’ ಎಂದರು.
ಇದಕ್ಕೂ ಮುನ್ನ ಹುಬ್ಬಳ್ಳಿಯ ಮೂರುಸಾವಿರ ಮಠದಿಂದ ನೆಹರೂ ಮೈದಾನದವರೆಗೆ ಫಕೀರ ಸಿದ್ಧರಾಮ ಸ್ವಾಮೀಜಿಯವರ ಪಲ್ಲಕ್ಕಿ ಮಹೋತ್ಸವ ಮತ್ತು ಫಕೀರೇಶ್ವರರ ಬೆಳ್ಳಿ ಮೂರ್ತಿಯ ಆನೆಯಂಬಾರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ತುಲಾಭಾರ ಸಮಾರಂಭದಲ್ಲಿ 60ಕ್ಕೂ ಹೆಚ್ಚು ಮಠಾಧೀಶರು, ವಿವಿಧ ರಾಜಕೀಯ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.