ಹುಬ್ಬಳ್ಳಿ: ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದಿರುವ ಈರುಳ್ಳಿ ಫಸಲು ಮಳೆಯಿಂದ ಹಾನಿಗೀಡಾಗಿದೆ. ಇದರಿಂದ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿ 10,069 ಹೆಕ್ಟೇರ್‌ನಷ್ಟು ಬೆಳೆಗೆ ಹಾನಿ ಆಗಿದೆ. ಕೆಲವೆಡೆ ಈರುಳ್ಳಿ ಕಟಾವು ಮಾಡಿ ಒಣಗಲು ಹಾಕಿದ್ದ ವೇಳೆ ಸುರಿದ ಮಳೆಯಿಂದ ನೀರಿನಲ್ಲಿ ಕೊಚ್ಚಿ ಹೋಗಿದೆ.
ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಕುಂದಗೋಳ, ಅಣ್ಣಿಗೇರಿ ತಾಲ್ಲೂಕಿನಲ್ಲೂ ಈರುಳ್ಳಿ ಕೊಳೆತಿದೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 6,234 ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆ ಆಗಿತ್ತು. 3,250 ಹೆಕ್ಟೇರ್ ಬೆಳೆ ನಾಶವಾಗಿದೆ. ನವಲಗುಂದ ತಾಲ್ಲೂಕಿನಲ್ಲಿ ಬಿತ್ತನೆಯಾಗಿದ್ದ 3,700 ಹೆಕ್ಟೇರ್ ಪೈಕಿ, 1,700 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ.
‘ನಾಲ್ಕು ಎಕರೆಯಲ್ಲಿ ಈರುಳಿ ಬಿತ್ತನೆ ಮಾಡಿದ್ದೆ. ಮಳೆಯಿಂದ ₹4 ಲಕ್ಷ ನಷ್ಟವಾಗಿದೆ. ಮತ್ತೊಮ್ಮೆ ಬಿತ್ತನೆ ಮಾಡಿದ್ದೇನೆ. ತೇವಾಂಶದಿಂದ ಅರ್ಧದಷ್ಟು ಜಮೀನಿನಲ್ಲಿ ಬೀಜ ಮೊಳಕೆಯೊಡೆದಿಲ್ಲ’ ಎಂದು ನವಲಗುಂದ ತಾಲ್ಲೂಕಿನ ತೆಲೆಮಡುಬಾ ಗ್ರಾಮದ ರೈತ ರಮೇಶ ಬಾಳಗಿ ತಿಳಿಸಿದರು.
ಹುಬ್ಬಳ್ಳಿ ನಗರ ಸೇರಿ ತಾಲ್ಲೂಕಿನಲ್ಲಿ ನಿಗದಿತ ಗುರಿಗಿಂತ (373 ಹೆಕ್ಟೇರ್) ಹೆಚ್ಚಿನ (514 ಹೆಕ್ಟೇರ್) ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದ್ದು, ಬೆಳೆ ಸಮರ್ಪಕವಾಗಿ ರೈತರ ಕೈ ಸೇರಿಲ್ಲ.
ಗದಗ ಜಿಲ್ಲೆಯಲ್ಲಿ ಈ ಬಾರಿ 14 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿತ್ತು. ಮಳೆಯಿಂದ 4 ಸಾವಿರ ಹೆಕ್ಟೇರ್‌ನಲ್ಲಿ ಹಾನಿಯಾಗಿದೆ.
‘ಗದಗ ಜಿಲ್ಲೆಯ ವಿವಿಧೆಡೆ ನಾಲ್ಕು ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆ ಹಾನಿಯಾಗಿದೆ. ಕೆಲವೆಡೆ ಜಮೀನಿನಲ್ಲೇ ಕೊಳೆತಿದೆ. ಇನ್ನು ಕೆಲವೆಡೆ ಸ್ವಚ್ಛಗೊಳಿಸುವಾಗ ಹಾನಿಯಾಗಿದೆ. ಬೆಳೆಹಾನಿ ಸಮೀಕ್ಷೆ ಪ್ರಗತಿಯಲ್ಲಿದ್ದು, ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ರೈತರಿಗೆ ಪರಿಹಾರ ನೀಡಲಾಗುವುದು’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಶಶಿಕಾಂತ ಕೋಟಿಮನಿ ತಿಳಿಸಿದರು.
‘ವಿಜಯನಗರ ಜಿಲ್ಲೆಯಲ್ಲಿ ಅಧಿಕ ಮಳೆಯಿಂದ 108.59 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ ಕೊಳೆತಿದೆ. ಹಗರಿಬೊಮ್ಮನಹಳ್ಳಿ ತಾಲ್ಲೂಕಿನಲ್ಲಿ 60 ಹೆಕ್ಟೇರ್, ಕೊಟ್ಟೂರಿನಲ್ಲಿ 26.73 ಹೆಕ್ಟೇರ್, ಹೂವಿನಹಡಗಲಿಯಲ್ಲಿ 18 ಹೆಕ್ಟೇರ್, ಹೊಸಪೇಟೆಯಲ್ಲಿ 2 ಹೆಕ್ಟೇರ್, ಕೂಡ್ಲಿಗಿಯಲ್ಲಿ 1.86 ಹೆಕ್ಟೇರ್‌ನಲ್ಲಿ ಈರುಳ್ಳಿ ಕೊಳೆತಿದೆ’ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಚಿದಾನಂದಪ್ಪ ತಿಳಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಆದರೆ ಯಾವುದೇ ಹಾನಿಯ ವರದಿ ಇಲಾಖೆಗೆ ಬಂದಿಲ್ಲ. ನಷ್ಟ ಸಂಭವಿಸಿಲ್ಲ.ಸಂತೋಷ್ ಸಪ್ಪಂಡಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ ಬಳ್ಳಾರಿ
ಬಾಗಲಕೋಟೆ ಜಿಲ್ಲೆಯಲ್ಲಿ ಬೆಳೆ ನಷ್ಟದ ಸಮೀಕ್ಷೆ ನಡೆದಿದೆ. ಅಂತಿಮ ವರದಿ ಬರಬೇಕಿದೆ. ಇದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದುರವೀಂದ್ರ ಹಕಾಟೆ ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ ಬಾಗಲಕೋಟೆ
ದರ ಕುಸಿತಕ್ಕೆ ಕಂಗಾಲು
ಹುಬ್ಬಳ್ಳಿಯ ಅಮರಗೋಳದಲ್ಲಿರುವ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಗೆ ಒಂದು ವಾರಕ್ಕೆ 1.10 ಲಕ್ಷ ಕ್ವಿಂಟಲ್‌ನಷ್ಟು ಈರುಳ್ಳಿ ಆವಕವಾಗುತ್ತಿದೆ. ಪ್ರತಿದಿನ 500 ಕ್ವಿಂಟಲ್ ಈರುಳ್ಳಿಯು ಮುಂಬೈನಿಂದ ಆವಕವಾಗುತ್ತಿದೆ. ಈ ಈರುಳ್ಳಿಗೆ ಕ್ವಿಂಟಲ್‌ಗೆ ₹4500 ದರವಿದೆ. ‘ವಾರದ ಹಿಂದೆ ಕ್ವಿಂಟಲ್‌ಗೆ ₹500ರಿಂದ ₹4000 ಇದ್ದ ಸ್ಥಳೀಯ ಈರುಳ್ಳಿ ದರವು ಈಗ ₹300–₹3500ಕ್ಕೆ ಕುಸಿದಿದೆ. ಗುಣಮಟ್ಟ ಇಲ್ಲದ ಕಾರಣ ಸಂಗ್ರಹಿಸಲು ಆಗುತ್ತಿಲ್ಲ. ಅಂದು ಆವಕವಾದ ಈರುಳ್ಳಿಯನ್ನು ಅಂದೇ ಮಾರಾಟ ಮಾಡಬೇಕಿದೆ’ ಎಂದು ಹುಬ್ಬಳ್ಳಿ ಎಪಿಎಂಸಿ ಈರುಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ತಿಳಿಸಿದರು. ‘ಮಳೆಯಿಂದಾಗಿ ಎಕರೆಗೆ 150 ಕ್ವಿಂಟಲ್ ಸಿಗಬೇಕಿದ್ದ ಈರುಳ್ಳಿಯು 50 ಕ್ವಿಂಟಲ್‌ಗೆ ಕುಸಿದಿದೆ. ಅಧಿಕಾರಿಗಳು ಹೊಲಗಳಿಗೆ ತೆರಳಿ ಸರಿಯಾಗಿ ಸಮೀಕ್ಷೆ ಮಾಡಬೇಕು. ಸರ್ಕಾರವು ಹೆಕ್ಟೇರ್‌ಗೆ ₹60 ಸಾವಿರ ಪರಿಹಾರ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿದ್ಧೇಶ ಎನ್.ಎಂ. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.