ADVERTISEMENT

ಮದುವೆಯಾಗುವುದಾಗಿ ನಂಬಿಸಿ ₹ 1.69 ಲಕ್ಷ ವಂಚನೆ

ಮ್ಯಾಟ್ರಿಮೋನಿ ಆ್ಯಪ್‌ನಲ್ಲಿ ಪರಿಚಯವಾದ ಮಹಿಳೆಯ ಮೋಸ

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 6:56 IST
Last Updated 9 ಜೂನ್ 2024, 6:56 IST

ಧಾರವಾಡ: ಸಂಗೀತಾ ಎಂಬುವರು ‘ಜೀವನ್‌ ಸಾಥಿ’ ಮ್ಯಾಟ್ರಿಮೋನಿ ಆ್ಯಪ್‌ ಮೂಲಕ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ ₹1.69 ಲಕ್ಷ ವರ್ಗಾಯಿಸಿಕೊಂಡು ವಂಚಿಸಿರುವ ಕುರಿತು ‘ಸೆನ್‌’ (ಸೈಬರ್‌, ಆರ್ಥಿಕ ಹಾಗೂ ಮಾದಕ ದ್ರವ್ಯ ನಿಯಂತ್ರಣ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಗೋಳದ ಕುಶಾಲ್‌ ಅವರು ದೂರು ನೀಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರಿನ ಸಂಗೀತಾ ಮತ್ತು ಶಿವರಾಜಕುಮಾರ ವಿರುದ್ಧ ದೂರು ನೀಡಿದ್ಧಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ (2008), ವಂಚನೆ (ಐಪಿಸಿ 419 ಹಾಗೂ 420) ಪ್ರಕರಣ ದಾಖಲಾಗಿದೆ.

ದೂರಿನಲ್ಲಿ ಏನಿದೆ?: ‘2023ರ ಡಿಸೆಂಬರ್‌ 31ರಂದು ‘ಜೀವನ್‌ ಸಾಥಿ’ ಮ್ಯಾಟ್ರಿಮೋನಿ ಆ್ಯಪ್‌ ಮೂಲಕ ಸಂಗೀತಾ ಎಂಬವರು ಪರಿಚಯವಾದರು. ಮದುವೆಯಾಗುವುದಾಗಿ ನಂಬಿಸಿದರು. ಸಹೋದರ ಶಿವರಾಜಕುಮಾರ ಎಂಬವರನ್ನು ಪರಿಚಯಿಸಿದರು. ಸಹೋದರಿಯನ್ನು ಮದುವೆ ಮಾಡಿಕೊಡುವುದಾಗಿ ಆತನೂ ನನ್ನನ್ನು ನಂಬಿಸಿದರು. ಸಲುಗೆಯಿಂದ ಮಾತನಾಡಿದರು. ನಂತರ ದೊಡ್ಡಮ್ಮಗೆ ಹೃದಯ ಶಸ್ತ್ರಚಿಕಿತ್ಸೆಗೆ ಹಣ ಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಹಂತಹಂತವಾಗಿ 2024 ಮೇ 31ರವರೆಗೆ ಫೋನ್‌ ಪೇ ಮೂಲಕ ₹ 1.69 ಲಕ್ಷವನ್ನು ನನ್ನಿಂದ ವರ್ಗಾಯಿಸಿಕೊಂಡು ಮೋಸ ಮಾಡಿದ್ಧಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಹಣ ವರ್ಗಾವಣೆ, ಪಾವತಿಸಿರುವ ವಿವರ ಪರಿಶೀಲಿಸಲಾಗುವುದು. ವಂಚಕರ ಜಾಡು ಪತ್ತೆ ನಿಟ್ಟಿನಲ್ಲಿ ಬಲೆ ಬೀಸಲಾಗಿದೆ’ ಎಂದು ಸೆನ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.