ಹುಬ್ಬಳ್ಳಿ: ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ‘ರೈತರಿಂದ ನೇರ ಗ್ರಾಹಕರಿಗೆ’ ಎಂಬಆನ್‌ಲೈನ್ ವೇದಿಕೆಯು ಹೊಸ ಮಾರುಕಟ್ಟೆ ಒದಗಿಸಿದೆ.
ಖರೀದಿಸುವವರು ಇಲ್ಲದೆ, ಇತ್ತ ಮಾರುಕಟ್ಟೆಗೂ ಒಯ್ಯಲಾಗದೇ ಹೊಲ, ಗದ್ದೆ ಹಾಗೂ ತೋಟದಲ್ಲೇ ಬೆಳೆ ಬಿಡುತ್ತಿರುವ ಹಲವು ರೈತರು ಈ ಪರ್ಯಾಯ ವೇದಿಕೆ ಬಳಸಿಕೊಂಡು, ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ರೈತರು ಸ್ವತಃ ಮಾರುಕಟ್ಟೆ ಕಂಡುಕೊಂಡು ಸ್ವಾವಲಂಬಿಯಾಗಲು ನೆರವಾಗುತ್ತಿರುವ ಈ ವೇದಿಕೆ ಹಿಂದಿರುವವರು ಪಚ್ಚೆ ನಂಜುಂಡಸ್ವಾಮಿ. ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಅವರು ‘ರೈತರಿಂದ ನೇರ ಗ್ರಾಹಕರಿಗೆ’ ಗ್ರೂಪ್ ಆರಂಭಿಸಿದರು. 24 ಸಾವಿರ ಸಕ್ರಿಯ ಸದಸ್ಯರಿರುವ ಈ ಗ್ರೂಪ್‌ನ ಪುಟಕ್ಕೆ ಪ್ರತಿ ತಿಂಗಳು ಅಂದಾಜು 2 ಲಕ್ಷ ಮಂದಿ ಭೇಟಿ ನೀಡುತ್ತಿದ್ದಾರೆ.
ಆ ಘಟನೆ ಕಾರಣ
‘ಕಳೆದ ವರ್ಷ ಕೋಲಾರದಲ್ಲಿ ರೈತರೊಬ್ಬರು, ಮಾರುಕಟ್ಟೆಗೆ ಟ್ರ್ಯಾಕ್ಟರ್‌ನಲ್ಲಿ ತಂದಿದ್ದ ಟೊಮೆಟೊವನ್ನು ಬೆಲೆ ಕುಸಿತದ ಕಾರಣ ರಸ್ತೆಗೆ ಸುರಿದಿದ್ದರು. ಹಾಕಿದ ಬಂಡವಾಳವೂ ಕೈಸೇರದಿದ್ದುದು ರೈತನ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಘಟನೆ ಆನ್‌ಲೈನ್
ನಲ್ಲಿ ಪರ್ಯಾಯ ಮಾರುಕಟ್ಟೆ ಸೃಷ್ಟಿಗೆ ಕಾರಣವಾಯಿತು’ ಎಂದು ಪಚ್ಚೆ ನಂಜುಂಡಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರೂಪ್‌ನಲ್ಲಿ ಬೆಳೆ ಮಾರಾಟ ಕುರಿತ ಪೋಸ್ಟ್‌ಗೆ ಶುಲ್ಕ ವಿಧಿಸುವುದಿಲ್ಲ. ರೈತರು ನಿಗದಿಪಡಿಸಿದ ಬೆಲೆ ವೈಜ್ಞಾನಿಕವಾಗಿದೆಯೇ ಎಂದು ಪರಿಶೀಲಿಸಿ ವಿವರವನ್ನು ಗ್ರೂಪ್‌ನಲ್ಲಿ ಹಾಕಲು ಒಪ್ಪಿಗೆ ನೀಡುತ್ತೇವೆ.ರಾಜ್ಯವಷ್ಟೇ ಅಲ್ಲದೆ, ದೇಶ–ವಿದೇಶಗಳ ಸದಸ್ಯರು ಗ್ರೂಪ್‌ನಲ್ಲಿ ಇದ್ದಾರೆ. ಒಂದು ವರ್ಷದಲ್ಲಿ ಈ ವೇದಿಕೆಯಡಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿದೆ. ಗ್ರಾಹಕರಿಗೆ ರೈತರೇ ಉತ್ಪನ್ನ ತಲುಪಿಸುವರು. ಕ್ಯಾಶ್ ಅಂಡ್ ಕ್ಯಾರಿ ಆಧಾರದಲ್ಲಿ ವ್ಯವಹಾರ ನಡೆಯುತ್ತದೆ’ ಎಂದು ಹೇಳಿದರು.
‘ಸಹಕಾರ ತತ್ವದಡಿ ವಿಸ್ತರಣೆ’
‘ರೈತರಿಂದ ನೇರ ಗ್ರಾಹಕರಿಗೆ’ ಎಂಬ ಕಲ್ಪನೆಯ ಕೃಷಿ ಉತ್ಪನ್ನಗಳಿಗಷ್ಟೇ ಅಲ್ಲದೇ ಅಡುಗೆ ವಸ್ತುಗಳು, ಹಸು, ಕೋಳಿ, ಬಿತ್ತನೆ ಬೀಜ, ಮನೆಗಳಲ್ಲಿ ತಯಾರಾಗುವ ಸಂಸ್ಕರಿತ ಆಹಾರ ಉತ್ಪನ್ನಗಳ ಮಾರಾಟಕ್ಕೂ ವೇದಿಕೆಯಾಗಿದೆ. ಇದನ್ನು ಸಹಕಾರ ತತ್ವದಡಿ ಅಮೆಜಾನ್, ಫ್ಲಿಪ್‌ಕಾರ್ಟ್ ಮಾದರಿಯಲ್ಲಿ ವಿಸ್ತರಿಸುವ ಹಾಗೂ ಅದಕ್ಕಾಗಿ ಕಾರ್ಪೊರೇಟ್ ವಲಯದಿಂದ ಸಾಮಾಜಿಕ ಹೊಣೆಗಾರಿಕೆಯಡಿ ನೆರವು ಪಡೆಯುವ ಚಿಂತನೆ ಇದೆ’ ಎಂದು ಪಚ್ಚೆ ನಂಜುಂಡಸ್ವಾಮಿ ತಿಳಿಸಿದರು.
ಫೇಸ್‌ಬುಕ್ ಪುಟದ ಲಿಂಕ್: https://bit.ly/3uDXNN0
‘ಮಾರ್ಕೆಟಿಂಗ್ ತಂತ್ರ ಗೊತ್ತಾಯ್ತು’
‘ನನಗಿರುವ 30 ಎಕರೆಯಲ್ಲಿ ವಿವಿಧ ಬಗೆಯ ಮಾವು, ಹಲಸು, ಪೇರಲ, ನಿಂಬೆ, ಬಟರ್, ಸಪೋಟಾ ಬೆಳೆದಿದ್ದೇವೆ. ಮಾರುಕಟ್ಟೆ ಲಾಕ್‌ಡೌನ್‌ನಿಂದಾಗಿ ಬಂದ್ ಆದಾಗ ಹಣ್ಣುಗಳ ಮಾರಾಟಕ್ಕೆ ಆಸರೆಯಾಗಿದ್ದು ಈ ಗ್ರೂಪ್’ ಎಂದು ಚಾಮರಾಜನಗರ ಜಿಲ್ಲೆಯ ಕೆಸ್ತೂರಿನ ರೈತ ಲೋಕೇಶ್ ಹೇಳಿದರು.
‘ಮೈಸೂರು ಭಾಗದಾದ್ಯಂತ ನನಗೆ ನೂರಾರು ಗ್ರಾಹಕರು ಸಿಕ್ಕಿದ್ದಾರೆ. ಐದು ಟನ್‌ನಷ್ಟು ಮಾವು ಖಾಲಿಯಾಗುತ್ತಾ ಬಂದಿದೆ. ಯಾವುದೇ ಹಣ್ಣನ್ನು 10 ಕೆ.ಜಿ.ಗೂ ಹೆಚ್ಚು ಖರೀದಿಸುವವರಿಗೆ ಶೇ 20ರಷ್ಟು ರಿಯಾಯಿತಿ ನೀಡುತ್ತೇನೆ. ಸ್ಥಳೀಯರಿಗೆ ಹೋಂ ಡೆಲಿವರಿ ಇದ್ದರೆ, ದೂರದವರಿಗೆ ಕೊರಿಯರ್ ಮಾಡುತ್ತೇವೆ. ಶುಲ್ಕವನ್ನು ಗ್ರಾಹಕರೇ ಭರಿಸುತ್ತಾರೆ. ಮಾರ್ಕೆಟಿಂಗ್ ತಾಕತ್ತಿದ್ದರೆ ಮಾತ್ರ ಕೃಷಿ ಮಾಡಬೇಕು’ ಎಂದು ಐ.ಟಿ ಕಂಪನಿಯಲ್ಲಿ ಉದ್ಯೋಗಿಯೂ ಆಗಿರುವ ಅವರು ಅಭಿಪ್ರಾಯಪಟ್ಟರು.
‘ಬದುಕಿಗೆ ಹೊಸ ದಾರಿ’
‘ಈ ಗ್ರೂಪ್ ಬದುಕಿಗೆ ಹೊಸ ದಾರಿ ತೋರಿಸಿದೆ. ಹೈದರಾಬಾದ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕಿದ್ದ ನಾನು, ಲಾಕ್‌ಡೌನ್‌ನಿಂದಾಗಿ ಊರಿಗೆ ಬಂದೆ. ಕಾಳು ಮೆಣಸು, ಏಲಕ್ಕಿ, ಗೋಡಂಬಿಗೆ ಮಾರುಕಟ್ಟೆ ಸಮಸ್ಯೆ ಇತ್ತು. ಸ್ನೇಹಿತರ ಸಲಹೆ ಮೇರೆಗೆ ಗ್ರೂಪ್ ಸದಸ್ಯನಾದೆ. ಬಳಿಕ, ನನ್ನ ಅದೃಷ್ಟ ಬದಲಾಯಿತು’ ಎಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗಣೇಶ ಗುನಗಾ ಹೇಳಿದರು.
‘ಮಾರುಕಟ್ಟೆ ಬೆಲೆಗಿಂತ ಶೇ 30 ಕಡಿಮೆ ಬೆಲೆಗೆ ಉತ್ಪನ್ನಗಳನ್ನು ಪೋಸ್ಟ್ ಮಾಡುತ್ತೇನೆ. ಈವರೆಗೆ ₹3 ಲಕ್ಷದಷ್ಟು ಉತ್ಪನ್ನ ಮಾರಾಟ ಮಾಡಿದ್ದೇನೆ. 500 ಸಕ್ರಿಯ ಗ್ರಾಹಕರಿದ್ದಾರೆ. ‘ಬಕುಳ ಫುಡ್ ಪ್ರಾಡಕ್ಟ್’ ಹೆಸರಿನಲ್ಲಿ ಬ್ರಾಂಡ್ ಮಾಡಿಕೊಂಡಿದ್ದೇನೆ. ಹಸಿ ಖರ್ಜೂರ, ಅಂಜಿರ್, ಕೋಕಂ, ದ್ರಾಕ್ಷಿ, ಸಿಹಿ ನೆಲ್ಲಿಕಾಯಿ, ಬಾದಾಮಿ,ಬಿಳಿ ಮೆಣಸು, ರಾಮಪತ್ರೆ, ಜಾಜಿಕಾಯಿ ಮಾರುತ್ತಿದ್ದೇನೆ. ಮತ್ತೆ ಹೈದರಾಬಾದ್‌ಗೆ ಹೋಗದೆ ಊರಲ್ಲೇ ನೆಲೆಸಲು ನಿರ್ಧರಿಸಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.