ಹುಬ್ಬಳ್ಳಿ: ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವವಿದ್ಯುತ್‌ಚಾಲಿತ ಮಗ್ಗಗಳ ನೇಕಾರರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪರಿಹಾರವು ಶೇ 8.5ರಷ್ಟು ಫಲಾನುಭವಿಗಳಿಗೆ ಮಾತ್ರ ತಲುಪಿದೆ.
ರಾಜ್ಯದಲ್ಲಿರುವ 1.25 ಲಕ್ಷ ವಿದ್ಯುತ್‌ಚಾಲಿತ ಮಗ್ಗಗಳ ನೇಕಾರರಲ್ಲಿ ನೆರವು ಕೋರಿ 42,451 ಅರ್ಜಿಗಳು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಸಲ್ಲಿಕೆಯಾಗಿದ್ದರೂ ಈವರೆಗೆ 10,544 ಮಂದಿಗೆ ನೆರವು ನೀಡಲಾಗಿದೆ.
ಕೈಮಗ್ಗ ನೇಕಾರರಿಗಾಗಿ ರಾಜ್ಯ ಸರ್ಕಾರ ‘ನೇಕಾರ ಸಮ್ಮಾನ’ ಯೋಜನೆಯಡಿ ಪ್ರತಿ ವರ್ಷ ₹2,000 ನೆರವು ನೀಡುತ್ತಿದೆ. ಕೋವಿಡ್‌ನಿಂದಾಗಿ ಸೀರೆಗಳ ತಯಾರಿಕೆ ಹಾಗೂ ಮಾರಾಟ ಇಲ್ಲದೆ ನಷ್ಟ ಅನುಭವಿಸಿದ ವಿದ್ಯುತ್ ಮಗ್ಗಗಳ ನೇಕಾರರಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಅವರಿಗೆ ಒಂದು ಬಾರಿ ಮಾತ್ರ ₹2,000 ಸಾವಿರ ಆರ್ಥಿಕ ಬೆಂಬಲದ ತೀರ್ಮಾನ ಕೈಗೊಳ್ಳಲಾಗಿದೆ.
ತೊಡಕು ಹಲವು: ವಿದ್ಯುತ್ ಮಗ್ಗಗಳ ನೇಕಾರರ ಸಮಗ್ರ ಮಾಹಿತಿ ಇಲಾಖೆ ಬಳಿ ಇಲ್ಲದಿರುವುದೇ ಪರಿಹಾರ ವಿತರಣೆಗೆ ದೊಡ್ಡ ತೊಡಕಾಗಿದೆ. ಆಯಾ ಘಟಕಗಳ ಮಾಲೀಕರು ಕಾರ್ಮಿಕರ ಬ್ಯಾಂಕ್ ಖಾತೆ ವಿವರವನ್ನು ಸಲ್ಲಿಸಬೇಕಾಗಿದೆ. ಇದನ್ನು ಪರಿಶೀಲಿಸಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ.
ಮೂರು ತಿಂಗಳಾದರೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಚುರುಕು ಪಡೆದಿಲ್ಲ. ಆಯಾ ಘಟಕಗಳ ಮಾಲೀಕರು ಕಾರ್ಮಿಕರ ವಿವರ ಇನ್ನೂ ನೀಡಿಲ್ಲ. ಅರ್ಜಿ ಜತೆಗೆ ವಿದ್ಯುತ್ ಸಹಾಯಧನದ ಮಾಹಿತಿ, ಕಾರ್ಮಿಕರ ಸಂಖ್ಯೆ, ಮಜೂರಿಯ ಪ್ರತಿ, ನೇಕಾರರ ಗ್ರೂಪ್ ಫೊಟೊ ಇತ್ಯಾದಿ ವಿವರ ಸಲ್ಲಿಸಬೇಕಾಗಿದೆ.
‘ಲಾಕ್‌ಡೌನ್‌ಗೂ ಮುನ್ನ ಹಾಗೂ ನಂತರ ಉತ್ಪಾದನೆಯಾದ ಸರಕಿನ ವಿವರವನ್ನು ಸಲ್ಲಿಸಬೇಕು ಎಂಬ ವದಂತಿ ಹರಡಿದೆ. ಮಾರ್ಗಸೂಚಿಯಲ್ಲಿ ಅಂತಹ ಯಾವುದೇ ಷರತ್ತು ಇಲ್ಲ. ಈ ಗೊಂದಲ ನಿವಾರಣೆಗಾಗಿಯೇ ನೇಕಾರ ಮುಖಂಡರಿಗೆ ತಿಳಿವಳಿಕೆ ನೀಡಲಾಗುತ್ತಿದೆ‘ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸಿ.ಎಸ್.ಯೋಗೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಮಗ್ಗಗಳಿವೆ. ಸೀಲ್‌ಡೌನ್, ಲಾಕ್‌ಡೌನ್‌ನಿಂದಾಗಿ ಬಹಳಷ್ಟು ನೇಕಾರರು ಹೊರಬರಲು ಆಗಿಲ್ಲ’ ಎನ್ನುತ್ತಾರೆ ಅವರು.
ನೇಕಾರರು ಹೇಳುವುದೇನು: ‘1ರಿಂದ 5 ಮಗ್ಗಗಳ ಸಣ್ಣ ಯುನಿಟ್ ನಡೆಸುವವರು ಸಾಮಾನ್ಯವಾಗಿ ಒಂದೇ ಕುಟುಂಬದ ಸದಸ್ಯರಾಗಿರುತ್ತಾರೆ. 10ಕ್ಕಿಂತ ಹೆಚ್ಚು ಮಗ್ಗಗಳನ್ನು ಹೊಂದಿರುವ ಮಾಲೀಕರು ಕಾರ್ಮಿಕರನ್ನು ಅವಲಂಬಿಸಿರುತ್ತಾರೆ. ಇವರೆಲ್ಲರ ಪರವಾಗಿ ಮಾಲೀಕರೇ ಅರ್ಜಿ ಸಲ್ಲಿಸಬೇಕಿದೆ. ಇದರ ಬದಲು ನೇರವಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬೇಕು’ ಎಂಬುದು ಹಲವರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.