ಹುಬ್ಬಳ್ಳಿ: ಮಳೆಯ ಆಸರೆಯಲ್ಲಿ ಹಣ್ಣು, ತರಕಾರಿ, ಹೂವು, ಔಷಧ ಹಾಗೂ ಸುಗಂಧ ಸಸ್ಯಗಳನ್ನು ಬೆಳೆಸುವುದೇ ಖುಷ್ಕಿ ಬೆಳೆ. ಇಂತಹ ಬೆಳೆ ಬೆಳೆಯುವಲ್ಲಿ ಇಂದು ಭಾರತವೂ ಮುಂದಿದೆ. ಸಾಮಾನ್ಯವಾಗಿ ತೋಟದ ಬೆಳೆಗಳನ್ನು ಫಲವತ್ತಾದ ಮಣ್ಣಿನಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಖುಷ್ಕಿ ಬೆಳೆಗಳನ್ನು ಒಣ ಮತ್ತು ಅರೆ ಒಣ ಪ್ರದೇಶಗಳಲ್ಲೂ ಬೆಳೆ ಬಹುದಾಗಿದೆ.
ಕಡಿಮೆ ಮಳೆಯಾಗುವ, ಕಡಿಮೆ ಫಲವತ್ತತೆ ಇರುವ ಜಲಾನಯನ ಪ್ರದೇಶಗಳ ಅಂಚಿನ ಜಮೀನನ್ನು ಖುಷ್ಕಿ ಬೆಳೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಸಂಪೂರ್ಣವಾಗಿ ಮಳೆ ಆಶ್ರಯದಲ್ಲಿ ಬೆಳೆಯುವಂತಹ ಮಾವು, ಸಪೋಟ, ಹಲಸು, ಗೋಡಂಬಿ, ನೇರಳೆ ಹಾಗೂ ಇತರೆಖುಷ್ಕಿ ಹಣ್ಣಿನ ಬೆಳೆಗಳಲ್ಲಿ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.
ಮೊದಲಿಗೆ ಶಾಶ್ವತ ತೋಟಗಾರಿಕೆ ಬೆಳೆಗಳಾದ ಸಪೋಟ, ಹಲಸು, ಹುಣಸೆಯನ್ನು ಅವುಗಳ ವಯಸ್ಸು, ಬೆಳವಣಿಗೆ ಹಾಗೂ ಮಳೆಯಾಧರಿಸಿ ನೆಡಬೇಕು. ನಂತರ 15–20 ದಿನಗಳ ನಂತರ ಮುಂದಿನ ಮಳೆ ಆರಂಭವಾದ ಮೇಲೆ, ದ್ವಿದಳ ಧಾನ್ಯದ ಬೆಳೆಗಳಾದ ಅಲಸಂದೆ, ಸೆಣಬು, ಹುರುಳಿ ಬೆಳೆಗಳನ್ನು ಬಿತ್ತನೆ ಮಾಡಬಹುದು.
‘ಖುಷ್ಕಿ ತೋಟಗಾರಿಕಾ ಬೆಳೆಗಳ ವಿಶೇಷ ಗುಣಗಳೆಂದರೆ, ಈ ಬೆಳೆಗಳು ಬರಗಾಲವನ್ನೂ ಯಶಸ್ವಿಯಾಗಿ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಗಡುಸು ಮಣ್ಣು, ಎಂತಹ ಹವಾಮಾನವಿದ್ದರೂ ಬೆಳೆಯುತ್ತವೆ. ಒಣ ಹವೆಯಲ್ಲೂ, ಪೂರಕ ನೀರಾವರಿ ಇಲ್ಲದಿದ್ದರೂ, ಅವುಗಳ ಫಸಲು ಉತ್ಕೃಷ್ಟ ಮಟ್ಟದಲ್ಲಿರುತ್ತದೆ’ ಎನ್ನುತ್ತಾರೆ ಭಾರತೀಯ ತೋಟಗಾರಿಕಾ ಸಂಶೋಧನಾ ಪರಿಷತ್ (ಐಸಿಎಆರ್) ಕೃಷಿ ವಿಜ್ಞಾನ ಕೇಂದ್ರದ ಡಾ. ಐರಾದೇವಿ ಪಿ. ಅಂಗಡಿ.
‘ಸಾವಯವ ಕೃಷಿಯನ್ನು ಖುಷ್ಕಿಯಲ್ಲಿ ಬೆಳೆದ ಹಣ್ಣಿನ ಬೆಳೆಗಳಿಗೆ ಅಳವಡಿಸಿದಾಗ ಹೆಚ್ಚು ಪರಿಣಾಮಕಾರಿಯಾಗಿ, ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು. ಸಾವಯವ ಕೃಷಿಕರು ಖುಷ್ಕಿಯಲ್ಲಿ ಬೆಳೆದ ಹಣ್ಣಿನ ಬೆಳೆಗಳ ಕಡೆ ಗಮನಹರಿಸಿ ಅದರ ನಿರ್ವಹಣೆ ಬಗ್ಗೆ ಕಾಳಜಿ ವಹಿಸಿದರೆ, ಪ್ರತಿ ವರ್ಷ ಶಾಶ್ವತ ಆದಾಯ ಪಡೆಯಬಹುದು’ ಎನ್ನುತ್ತಾರೆ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ.
ಅಂತರ ಬೆಳೆಗಳು
ತರಕಾರಿ ಬೆಳೆ: ಚವಳೆಕಾಯಿ, ಹೀರೆಕಾಯಿ, ಪಾಲಕ್ ಸೊಪ್ಪು, ಮೆಂತೆ ಸೊಪ್ಪು, ಸೋರೆಕಾಯಿ, ಕಲ್ಲಂಗಡಿ
ಸಂಬಾರು ಪದಾರ್ಥ: ಕೋತಂಬರಿ ಕಾಳು, ಅಜವಾನ, ಮೆಂತೆಕಾಳು, ಜೀರಿಗೆ, ಬಡೆಸೋಂಪು
ದ್ವಿದಳ ಧಾನ್ಯ: ಹೆಸರು, ಅಲಸಂದಿ, ಕಡಲೆ, ಶೇಂಗಾ, ಮಡಕೆಕಾಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.