ಹುಬ್ಬಳ್ಳಿ: ಕೋವಿಡ್ ಕಾರಣದಿಂದ ತತ್ತರಿಸಿರುವ ಟ್ಯಾಕ್ಸಿ ಉದ್ಯಮ, ಅನ್‌ಲಾಕ್ ಘೋಷಣೆಯಾದ ಬಳಿಕವೂ ಚೇತರಿಸಿಕೊಂಡಿಲ್ಲ. ಇದರಿಂದ ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕರು ತಮ್ಮ ವಾಹನಗಳನ್ನು ಮಾರಾಟ ಮಾಡುವ ಸಂಕಷ್ಟಕ್ಕೆ ತಲುಪಿದ್ದಾರೆ. ಉದ್ಯೋಗ ಕಳೆದುಕೊಂಡಿರುವ ಚಾಲಕರು ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಟ್ಯಾಕ್ಸಿ ಉದ್ಯಮ ನಂಬಿಕೊಂಡಿರುವ ಒಂದು ಸಾವಿರಕ್ಕೂ ಹೆಚ್ಚು ಉದ್ಯಮಿಗಳಿದ್ದಾರೆ. ಅವರು ಹುಬ್ಬಳ್ಳಿ–ಧಾರವಾಡ ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಸಂಘದಲ್ಲಿ ನೋಂದಾಯಿಸಿದ್ದಾರೆ. ಹೆಸರು ನೋಂದಾಯಿಸದ ಒಂದು ಹಾಗೂ ಎರಡು ಟ್ಯಾಕ್ಸಿಗಳನ್ನು ಹೊಂದಿರುವ ಮಾಲೀಕರು ಕೂಡ ಇದ್ದಾರೆ. ಇವರೆಲ್ಲರಿಗೂ ಪ್ರತಿ ವರ್ಷ ಜನವರಿಯಿಂದ ಜೂನ್ ತನಕ ಭರ್ಜರಿ ದುಡಿಮೆ ಇರುತ್ತಿತ್ತು. ಜಿಲ್ಲೆ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದರು. ನೆರೆಯ ಮಹಾರಾಷ್ಟ್ರದ ಧಾರ್ಮಿಕ ಸ್ಥಳಗಳಿಗೆ ಮತ್ತು ಗೋವಾಕ್ಕೆ ಹೋಗುವವರ ಸಂಖ್ಯೆ ಹೆಚ್ಚಿತ್ತು.
ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ ಟ್ಯಾಕ್ಸಿ ಬಳಸುವ, ವಾಣಿಜ್ಯ ನಗರಿಗೆ ಹೊರ ರಾಜ್ಯಗಳಿಂದ ಬರುವ ಉದ್ಯಮಿಗಳು ಸಂಖ್ಯೆಯೂ ದೊಡ್ಡದಿತ್ತು. ನಿತ್ಯ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಗೆ ಹೋಗುವವರ ಸಂಖ್ಯೆಯೂ ಬಹಳಷ್ಟಿತ್ತು. ಕೋವಿಡ್ ಕಾರಣದಿಂದ ಎಲ್ಲಿಯೂ ಅವರಿಗೆ ದುಡಿಮೆಯಿಲ್ಲದಂತಾಗಿದೆ. ಜಿಲ್ಲೆಯ ಟ್ಯಾಕ್ಸಿ ಬಾಡಿಗೆಯ ಉದ್ಯಮ ಶೇ 10ಕ್ಕೆ ಕುಸಿದಿದೆ ಎನ್ನುತ್ತಾರೆ ಟ್ರಾವೆಲ್ಸ್ ಹಾಗೂ ಟ್ಯಾಕ್ಸಿ ಎಜೆನ್ಸಿಗಳ ಮಾಲೀಕರು.
ನಗರದಲ್ಲಿ ಸಮೀರ್ ಟೂರ್ಸ್ ಅಂಡ್ ಟ್ರಾವೆಲ್ಸ್ ಹೊಂದಿರುವ ಸಮೀರ್ ಅವರ ಬಳಿ 12 ವಾಹನಗಳಿವೆ. ಉದ್ಯಮ ನಷ್ಟ, ಸಾಲದ ಕಂತು ಮತ್ತು ವಿಮೆ ತುಂಬಲಾಗದೆ ಇದರಲ್ಲಿ ಮೂರು ವಾಹನಗಳನ್ನು ಮಾರಾಟ ಮಾಡಿದ್ದಾರೆ. ಇನ್ನೂ ಎರಡು ವಾಹನಗಳನ್ನು ಮಾರಾಟಕ್ಕಿಟ್ಟಿದ್ದಾರೆ.
’ಕೋವಿಡ್‌ಗಿಂತ ಮೊದಲು ತಿಂಗಳಿಗೆ ಎಲ್ಲ 12 ಟ್ಯಾಕ್ಸಿಗಳು ಕನಿಷ್ಠ 20ರಿಂದ 25 ದಿನ ಹೊರಗಡೆ ಇರುತ್ತಿದ್ದವು. ಭಯದಿಂದ ಜನ ಈಗ ಎಲ್ಲಿಯೂ ಹೋಗುತ್ತಿಲ್ಲ. ಬಾಡಿಗೆಯೂ ಸಿಗುತ್ತಿಲ್ಲ. ಈಗ ತಿಂಗಳಿಗೆ ಎರಡ್ಮೂರು ದಿನ ಬಾಡಿಗೆ ಸಿಕ್ಕರೆ ಅದೇ ಹೆಚ್ಚು’ ಎಂದು ಸಮೀರ್ ಬೇಸರ ವ್ಯಕ್ತಪಡಿಸಿದರು.
ಜೈ ಭವಾನಿ ಟ್ರಾವೆಲ್ಸ್ ಮಾಲೀಕ ಸಂದೀಪ ’ಮಕ್ಕಳಿಗೆ ಏಪ್ರಿಲ್ ಹಾಗೂ ಮೇನಲ್ಲಿ ಬೇಸಿಗೆ ರಜೆ ಇರುತ್ತಿತ್ತು. ಆಗ ಬಹಳಷ್ಟು ಜನ ಪ್ರವಾಸಕ್ಕೆ ಹೋಗುತ್ತಿದ್ದರು. ಈಗ ಯಾರೂ ಬರುತ್ತಿಲ್ಲ. ನನ್ನಲ್ಲಿರುವ ನಾಲ್ಕು ವಾಹನಗಳಿಗೆ ತಿಂಗಳಿಗೆ 15ರಿಂದ 16 ಬಾಡಿಗೆ ಸಿಗುತ್ತಿವೆ. ಆದ್ದರಿಂದ ಚಾಲಕರಿಗೆ ವೇತನ ಕೊಡುವುದನ್ನು ನಿಲ್ಲಿಸಿದ್ದೇನೆ. ಬಾಡಿಗೆ ಇದ್ದ ದಿನ ಮಾತ್ರ ದಿನಗೂಲಿ ಆಧಾರದಲ್ಲಿ ಪಾವತಿಸುತ್ತಿದ್ದೇನೆ’ ಎಂದು ನೋವು ತೋಡಿಕೊಂಡರು.
ಟ್ಯಾಕ್ಸಿ ಚಾಲನೆ ನಂಬಿಕೊಂಡಿದ್ದವರ ಬದುಕು ಸಂಕಷ್ಟದಲ್ಲಿದ್ದು, ಒಪ್ಪೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಿದೆ. ಸರ್ಕಾರ ತುರ್ತಾಗಿ ನಮ್ಮ ನೆರವಿಗೆ ಬರಬೇಕು.
-ನಿಸಾರ್ ಅಹಮ್ಮದ್ ಮುಲ್ಲಾ
ಅಧ್ಯಕ್ಷರು, ಹುಬ್ಬಳ್ಳಿ–ಧಾರವಾಡ ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಸಂಘ
**
ಕೋವಿಡ್‌ನಿಂದಾಗಿ ವಹಿವಾಟು ನಡೆಯುತ್ತಿಲ್ಲ. ಒಂದು ಟ್ಯಾಕ್ಸಿಗೆ ತಿಂಗಳಿಗೆ ಎರಡ್ಮೂರು ಬಾಡಿಗೆಯಷ್ಟೇ ಸಿಗುತ್ತಿವೆ. ಆದ್ದರಿಂದ ಮಾಸಿಕ ಕಂತು ಕಟ್ಟಲು ಕೂಡ ಸಾಧ್ಯವಾಗುತ್ತಿಲ್ಲ.
-ಮಹಾಂತೇಶ ಹಿರೇಮಠ
ಲಕ್ಷ್ಮಿ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕ, ಹುಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.