ADVERTISEMENT

ಅಪರಾಧ ಜಾಗೃತಿಗೆ ಗೋಡೆ ಚಿತ್ರ, ಬೆಂಡಿಗೇರಿ ಠಾಣೆ ಪೊಲೀಸರಿಂದ ಹೊಸ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2018, 15:34 IST
Last Updated 27 ಸೆಪ್ಟೆಂಬರ್ 2018, 15:34 IST
ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಕಾಂಪೌಂಡ್ ಮೇಲೆ ಬಿಡಿಸಿರುವ ಯುವತಿಯರನ್ನು ಚುಡಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಸಾರುವ ಚಿತ್ರ.
ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯ ಕಾಂಪೌಂಡ್ ಮೇಲೆ ಬಿಡಿಸಿರುವ ಯುವತಿಯರನ್ನು ಚುಡಾಯಿಸುವುದು ಶಿಕ್ಷಾರ್ಹ ಅಪರಾಧ ಎಂದು ಸಾರುವ ಚಿತ್ರ.   

ಹುಬ್ಬಳ್ಳಿ: ಆನ್‌ಲೈನ್ ವಂಚನೆ ಸೇರಿದಂತೆ ವಿವಿಧ ಅಪರಾಧಗಳ ಬಗ್ಗೆ ಜನ ಜಾಗೃತಿ ಮೂಡಿಸಲು ಬೆಂಡಿಗೇರಿ ಪೊಲೀಸರು ಠಾಣೆಯ ಕಾಂಪೌಂಡ್ ಮೇಲೆ ಬಿಡಿಸಿರುವ ಚಿತ್ರಗಳು ಗಮನ ಸೆಳೆಯುತ್ತಿವೆ.

ಯುವತಿಯರನ್ನು ಚುಡಾಯಿಸಿದರೆ ಏನು ಶಿಕ್ಷೆ, ಮಾದಕ ವಸ್ತುಗಳ ದುಷ್ಪರಿಣಾಮಗಳೇನು, ಆಭರಣ ಪ್ರದರ್ಶನ ಮಾಡಿ ಕಳ್ಳರಿಗೆ ಪ್ರಚೋದನೆ ನೀಡುವುದು ಬೇಡ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಆಗುವ ಅಪಾಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಹೆಣ್ಣು ಮಕ್ಕಳ ಪಾಲನೆ– ಪೋಷಣೆ ರಕ್ಷಣೆಯ ಮಹತ್ವವನ್ನು ಸಹ ಚಿತ್ರಗಳ ಮೂಲಕ ಸಾರಲಾಗಿದೆ.

‘ಮಹಿಳೆಯರನ್ನು ಚುಡಾಯಿಸುವ ಪ್ರಕರಣಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ನಂತರ ಪೊಲೀಸ್ ಕಮಿಷನರ್ ಅವರು ‘ಚನ್ನಮ್ಮ ಪಡೆ’ ರಚಿಸಿದ್ದರು. ಆ ನಂತರ ಹಲವಾರು ಯುವಕರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಈಗ ಆನ್‌ಲೈನ್ ವಂಚನೆ ಜಾಲಕ್ಕೆ ಜನರು ಬೀಳುವುದು ಸಾಮಾನ್ಯವಾಗಿದೆ. ಆದ್ದರಿಂದ ಆ ಬಗ್ಗೆ ಚಿತ್ರದ ಮೂಲಕ ಮಾಹಿತಿ ನೀಡಲಾಗಿದೆ. ಇಂತಹ ಚಿತ್ರಗಳು ದುಷ್ಕರ್ಮಿಗಳ ಮೇಲೆ ಪರಿಣಾಮ ಬೀರುತ್ತವೆ, ಭಯ ಉಂಟು ಮಾಡುತ್ತವೆ’ ಎಂದು ಬೆಂಡಿಗೇರಿ ಠಾಣೆ ಇನ್‌ಸ್ಪೆಕ್ಟರ್ ಸಂತೋಷ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಾದಕ ವಸ್ತು ಮಾರಾಟಗಾರರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ₹2 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಯುವಕರು ಅದರಿಂದ ದೂರ ಇರಬೇಕು ಎಂಬ ಉದ್ದೇಶದಿಂದ ಚಿತ್ರದ ಮೂಲಕವೇ ಸಂದೇಶ ನೀಡಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.