ಹುಬ್ಬಳ್ಳಿ: ‘ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳ ರಸ್ತೆಯ ಎರಡೂ ಬದಿಗಳಲ್ಲಿ ವಾಹನಗಳ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶನಿವಾರದಿಂದಲೇ ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕು ಎನ್ನುವ ಪರ್ಯಾಯ ವ್ಯವಸ್ಥೆ ಮಾಡಲಾಗುವುದು’ ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದರು.
ನಗರದ ತುಳಜಾಭವಾನಿ ವೃತ್ತದ ಬಳಿ ಪಾರ್ಕಿಂಗ್ ನಿಯಂತ್ರಣದ ಕುರಿತು ವ್ಯಾಪಾರಸ್ಥರ ಹಾಗೂ ಸಾರ್ವಜನಿಕರ ಜೊತೆ ಶುಕ್ರವಾರ ಸಭೆ ನಡೆಸಿ ಮಾತನಾಡಿದ ಅವರು, ‘ಉಪನಗರ, ಘಂಟಿಕೇರಿ ಹಾಗೂ ಶಹರ ಪೊಲೀಸ್ ಠಾಣೆಯ ಪ್ರಮುಖ ಸ್ಥಳಗಳ ರಸ್ತೆಯ ಬದಿಯಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಈ ಕುರಿತು ಸುಮಾರು ಎಂಟುನೂರು ವ್ಯಾಪಾರಸ್ಥರು ಇಲಾಖೆಗೆ ದೂರು ನೀಡಿ, ವ್ಯಾಪಾರ ವಹಿವಾಟಿಗೆ ಸಮಸ್ಯೆಯಾಗುವುದಾಗಿ ತಿಳಿಸಿದ್ದಾರೆ. ಅಲ್ಲದೆ, ವಾಹನಗಳ ಸುಗಮ ಸಂಚಾರಕ್ಕೂ ಅದು ಸಮಸ್ಯೆಯಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ನಿಗದಿತ ಸ್ಥಳಗಳಲ್ಲಿ ಮಾತ್ರ ವಾಹನಗಳನ್ನು ನಿಲುಗಡೆ ಮಾಡಬೇಕು ಎಂದು ಸೂಚನಾ ಫಲಕಗಳನ್ನು ಅಳವಡಿಸುವ ಯೋಜನೆಗೆ ಚಾಲನೆ ನಿಡಲಾಗುವುದು’ ಎಂದರು.
ಆರಂಭಿಕ ಹಂತದಲ್ಲಿ ಕೋಯಿನ್ ರಸ್ತೆ, ವಿಕ್ಟೋರಿಯಾ ರಸ್ತೆ, ದಾಜೀಬಾನ್ ಪೇಟೆ, ಕೊಪ್ಪಿಕರ್ ರಸ್ತೆ, ಬಾರದಾನ್ ಸಾಲ್, ಷಹಾ ಬಝಾರ್, ಬೆಳಗಾವಿಗಲ್ಲಿ, ಶಿವಾಜಿ ವೃತ್ತ, ಮರಾಠಗಲ್ಲಿ, ಗಣೇಶಪೇಟೆ ವೃತ್ತ, ದುರ್ಗದ ಬೈಲ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಈ ಯೋಜನೆ ಜಾರಿಗೆ ತರಲಾಗುವುದು. ಈ ಭಾಗದ ಅಂಗಡಿಗಳ ಎದುರು ಕುಳಿತು ವ್ಯಾಪಾರ ಮಾಡುವವರನ್ನು ತೆರವು ಮಾಡಲಾಗುವುದು. ಯೋಜನೆ ಯಶಸ್ವಿಯಾದರೆ, ಪಾಲಿಕೆ ಸಹಕಾರದಲ್ಲಿ ನೋಟಿಫಿಕೇಷನ್ ಹೊರಡಿಸಲಾಗುವುದು. ಮುಂಬರುವ ದಿನಗಳಲ್ಲಿ ಹುಬ್ಬಳ್ಳಿಯ ಇತರ ಭಾಗಗಳು ಸೇರಿದಂತೆ ಧಾರವಾಡದಲ್ಲೂ ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.
ಆಟೊ ಚಾಲಕರ ಸಂಘದ ಅಧ್ಯಕ್ಷ ಮಠಪತಿ ಮಾತನಾಡಿ, ‘ಅವಳಿನಗರಕ್ಕೆ ಇನ್ನೂ ಎರಡು–ಮೂರು ಠಾಣೆಗಳ ಅವಶ್ಯಕತೆ ಇದೆ. ಸಂಚಾರ ನಿರ್ವಹಣೆಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಅಗತ್ಯವಿದೆ. ಆಟೊಗಳು ರಸ್ತೆ ಮಧ್ಯ ನಿಂತರೆ ದಂಡ ಹಾಕಲು ಅಭ್ಯಂತರವಿಲ್ಲ. ಆದರೆ, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವಾಗ, ಇಳಿಸುವಾಗ ದಂಡ ಪ್ರಯೋಗಬೇಡ’ ಎಂದು ವಿನಂತಿಸಿದರು.
ಸಲಹೆಗಳು: ಸಾರ್ವಜನಿಕರಿಂದ ಹಾಗೂ ವ್ಯಾಪಾರಸ್ಥರಿಂದ ಸಭೆಯಲ್ಲಿ ಸಾಕಷ್ಟು ಸಲಹೆಗಳು ಕೇಳಿಬಂದವು. ವೃತ್ತಗಳಲ್ಲಿ ವಾಹನಗಳ ನಿಲುಗಡೆ ನಿಷೇಧಿಸಬೇಕು. ಬೇಕಾಬಿಟ್ಟಿಯಾಗಿ ಆಟೊಗಳ ಸಂಚಾರ ಹಾಗೂ ನಿಗದಿತ ಸ್ಥಳಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು. ರಸ್ತೆಯ ಎರಡೂ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಬೀದಿವ್ಯಾಪಾರ ಮಾಡುವುದರಿಂದ ಸಮಸ್ಯೆ ಎದುರಾಗುತ್ತಿವೆ. ಆಟೊ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಚಾಲಕರ ಬಳಿ ಪ್ರಯಾಣಿಕರನ್ನು ಕುಳ್ಳರಿಸಿಕೊಳ್ಳಬಾರದು ಎನ್ನುವ ಕುರಿತು ಚರ್ಚೆಯಾಯಿತು.
ಡಿಸಿಪಿಗಳಾದ ರವೀಶ್ ಸಿ.ಆರ್., ಮಹಾನಿಂಗ ನಂದಗಾವಿ ಹಾಗೂ ಸತೀಶ ಮೆಹರವಾಡೆ, ನೀಲಕಂಠ ಜಡಿ, ಭಾಸ್ಕರ ಜಿತೂರಿ ಸೇರಿದಂತೆ ಅನೇಕ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.