ಧಾರವಾಡ: ‘ಸುಖಸಂತೋಷದಿಂದ ಬದುಕಲು ಸಮಾಜದ ಎಲ್ಲರೂ ಅಳವಡಿಸಿಕೊಳ್ಳಬೇಕಾಗಿರುವ ನೀತಿನಿಯಮ ಸನಾತನ ಧರ್ಮ. ಅದನ್ನು ವಿರೋಧಿಸುವುದಕ್ಕೆ ಯಾರೂ ಕೈ ಹಾಕಬಾರದು’ ಎಂದು ಪೇಜಾವರಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಸಮಾಜದಲ್ಲಿ ಒಮ್ಮೆ ಅಂಥ ಕಿಡಿಗಳನ್ನು ಹಚ್ಚಿದರೆ ಅನರ್ಥಕ್ಕೆ ಎಡೆಯಾಗುತ್ತದೆ. ಮಣಿಪುರದಲ್ಲಿ ನಾವು ಅದನ್ನು ಕಾಣುತ್ತಿದ್ದೇವೆ. ಯಾರೂ ಅಂಥ ದುಷ್ಟ ಕಾರ್ಯಗಳಿಗೆ ಕೈಹಾಕಬಾರದು’ ಎಂದು ಪ್ರತಿಕ್ರಿಯಿಸಿದರು.
‘ಧರ್ಮ ಎಂದರೆ ಸಮಾಜವನ್ನು ನಿರಂತರವಾಗಿ ಮುನ್ನಡೆಸುವ ಬದುಕಿನ ಸೂತ್ರ. ನಮ್ಮ ಸಂತೋಷಕ್ಕಾಗಿ ಮಾಡುವ ಪ್ರಯತ್ನ ಮತ್ತೊಬ್ಬರ ದುಃಖಕ್ಕೆ ಕಾರಣವಾಗಬಾರದು.
ಎಲ್ಲರೂ ಮತ್ತೊಬ್ಬರಿಗೂ ಸುಖವಾಗುವಂತೆ ನಡೆದುಕೊಂಡರೆ ಸಮಾಜದಲ್ಲಿ ಎಲ್ಲರೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯ, ಅದೇ ಧರ್ಮ. ಅದು ಸನಾತನವಾದುದು, ನಿತ್ಯನಿರಂತರವಾದುದು ಆಗಿರುವುದರಿಂದ ಸನಾತನ ಧರ್ಮ ಎಂದು ಕರೆಯುತ್ತಾರೆ’ ಎಂದರು.
ಶಿವಮೊಗ್ಗದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಮನೆಗಳಿಗೆ ಕಲ್ಲು ಹೊಡೆಯುವುದು ಸಣ್ಣ ವಿಚಾರವಲ್ಲ. ಅಂಥ ಗಲಭೆಗಳನ್ನು ಮೂಲದಲ್ಲಿ ಹತ್ತಿಕ್ಕಬೇಕು. ಸರ್ಕಾರ ಆ ಕೆಲಸ ಮಾಡಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.