ಹುಬ್ಬಳ್ಳಿ: ‘ಮನೆಯಂತೆ ನಗರವನ್ನೂ ಸ್ವಚ್ಛವಾಗಿಟ್ಟುಕೊಳ್ಳಿ. ಪಾಲಿಕೆ ಆರಂಭಿಸಿರುವ ಸ್ವಚ್ಛತಾ ಅಭಿಯಾನವನ್ನು ಎಲ್ಲರೂ ಬೆಂಬಲಿಸಿ’ ಎಂದು ನಟಿ ರಾಗಿಣಿ ಹೇಳಿದರು.
ಮನೆ ಮನೆಯಿಂದ ಕಸ ಎತ್ತಲು ಬಳಸುವ ಆಟೊ ಟಿಪ್ಪರ್ ಅನ್ನು ಖುದ್ದು ಚಾಲನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಸ್ವಚ್ಛತೆ ದೃಷ್ಟಿಯಿಂದ ಪಾಲಿಕೆ ಕೈಗೊಂಡಿರುವ ಕ್ರಮಗಳು ಶ್ಲಾಘನೀಯ. ಜನರೂ ಇದಕ್ಕೆ ಸಂಪೂರ್ಣ ಬೆಂಬಲ ನೀಡಿ ಸುಂದರ ನಗರ ನಿರ್ಮಾಣಕ್ಕೆ ಸಹಕರಾ ನೀಡಬೇಕು ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಅದರ ಸಾಕಾರಕ್ಕೆ ಅನುದಾನವನ್ನು ಸಹ ನೀಡಿದ್ದಾರೆ. ದೇಶದ ಹಿತದೃಷ್ಟಿಯಿಂದ ಹಮ್ಮಿಕೊಂಡಿರುವ ಈ ಅಭಿಯಾನ ಯಶಸ್ವಿಯಾಗಬೇಕು. ಆಟೊ ಟಿಪ್ಪರ್‌ಗಳು ಕಾರ್ಯಾರಂಭ ಮಾಡಿದ ನಂತರ ತುಂಬ ಸುಧಾರಣೆಯಾಗಿದೆ. ರಾಗಿಣಿ ಅವರಂತಹ ಜನಪ್ರಿಯ ನಟಿ ಅವರು ರಾಯಭಾರಿಯಾದರೆ ಈ ಅಭಿಯಾನಕ್ಕೆ ಇನ್ನಷ್ಟು ಬಲ ಬರಲಿದೆ ಎಂದರು.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮುತ್ತಣ್ಣವರ ಮಾತನಾಡಿ, ಪಾಲಿಕೆಯ ಸ್ವಚ್ಛತಾ ಅಭಿಯಾನಕ್ಕೆ ರಾಯಭಾರಿಯಾಗಲು ಒಪ್ಪಿಕೊಂಡಿರುವ ಪುನೀತ್ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ಸಂಭಾವನೆ ಪಡೆಯದೆ ಸಹಕಾರ ನೀಡಿದ್ದಾರೆ. ನಟ ಸುದೀಪ್ ಅವರೊಂದಿಗೆ ಸಹ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಅವರೂ ಸಹ ರಾಯಭಾರಿಯಾಗುವ ನಿರೀಕ್ಷೆ ಇದೆ. ರಾಗಿಣಿ ಎಂದರು.
ನಟಿ ರಾಗಿಣಿ ಅವರಿಗೆ ಕಲಾ ತಂಡಗಳೊಂದಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ನೆಚ್ಚಿನ ನಟಿಯೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪಾಲಿಕೆ ಸಿಬ್ಬಂದಿ, ಸ್ವ ಸಹಾಯ ಸಂಘದ ಮಹಿಳೆಯರು ಹಾಗೂ ಸಾರ್ವಜನಿಕರು ಮುಗಿಬಿದ್ದರು. ಪೊಲೀಸರು ಜನರನ್ನು ತಳ್ಳಿದ್ದನ್ನು ಗಮನಿಸಿದ ರಾಗಿಣಿ, ‘ಅವರನ್ನು ತಳ್ಳಬೇಡಿ’ ಎಂದರು. ಎಲ್ಲರೂ ಫೋಟೊ ಕ್ಲಿಕ್ಕಿಸಿಕೊಳ್ಳಲು ಅವರೇ ಅವಕಾಶ ಮಾಡಿಕೊಟ್ಟರು.
ಮೇಯರ್ ಸುಧೀರ್ ಸರಾಫ್, ಉಪ ಮೇಯರ್ ಮೇನಕಾ ಹುರುಳಿ, ಪಾಲಿಕೆ ಸಭಾ ನಾಯಕ ವಿಜಯಾನಂದ ಶೆಟ್ಟಿ, ಜಂಟಿ ಕಮಿಷನರ್ ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.