ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಮೇ ಅಂತ್ಯದ ವೇಳೆಗೆ ಲಾಕ್‌ಡೌನ್ ಮುಗಿಯಬಹುದು ಎನ್ನುವ ನಿರೀಕ್ಷೆ ಇದೆ. ಹಾಗಾಗಿ, ಜೂನ್ ಎರಡು ಅಥವಾ ಮೂರನೇ ವಾರದಿಂದ ಪರೀಕ್ಷೆಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಮುಂದಿನ ಪರಿಸ್ಥಿತಿ ಆಧಾರದ ಮೇಲೆ ದಿನಾಂಕ ಬದಲಾಗಬಹುದು. ಆದರೆ, ನೀವು ಪರೀಕ್ಷಾ ಸಿದ್ಧತೆಯನ್ನು ನಿಲ್ಲಿಸಬೇಡಿ.
ಇದು ಕರ್ನಾಟಕವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ, ಆಡಳಿತ ವಿಭಾಗದ ಕುಲಸಚಿವ ಡಾ.ಹನುಮಂತಪ್ಪ ಕೆ.ಟಿ, ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ರವೀಂದ್ರನಾಥ ಕದಂ ಅವರು ಪರೀಕ್ಷಾ ವೇಳಾಪಟ್ಟಿ ಬಗೆಗೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ‘ಪ್ರಜಾವಾಣಿ’ ಆಯೋಜಿಸಿದ್ದ ‘ಫೋನ್ ಇನ್ ಕಾರ್ಯಕ್ರಮ’ದಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಅವರಲ್ಲಿದ್ದ ಆತಂಕ, ಭಯ ನಿವಾರಣೆ ಮಾಡಿದರು.
ಪದವಿ ಹಾಗೂ ಸ್ನಾತಕೋತ್ತರ ಪದವಿಯ ಶೇ 90ರಷ್ಟು ಪಠ್ಯವನ್ನು ತರಗತಿಗಳಲ್ಲೇ ಪೂರ್ಣಗೊಳಿಸಲಾಗಿತ್ತು. ಉಳಿದ ಪಠ್ಯವನ್ನು ಆನ್‌ಲೈನ್ ಮೂಲಕ ಪೂರ್ಣಗೊಳಿಸಲಾಗುತ್ತಿದೆ. ಆನ್‌ಲೈನ್‌ನಲ್ಲಿ ನಡೆಯುತ್ತಿರುವ ಪಾಠಗಳ ಬಗೆಗೂ ಕಾಲೇಜುಗಳಿಂದ ವರದಿ ಪಡೆದುಕೊಳ್ಳಲಾಗುತ್ತಿದೆ. ಲಾಕ್‌ಡೌನ್ ಮುಗಿದ ನಂತರ ಎರಡು ವಾರಗಳ ಕಾಲ ತರಗತಿ ನಡೆಸಲು ಉದ್ದೇಶಿಸಲಾಗಿದೆ. ಅದು ಲಾಕ್‌ಡೌನ್ ಮುಗಿಯುವ ದಿನಾಂಕ ಹಾಗೂ ಸರ್ಕಾರದಿಂದ ದೊರೆಯುವ ನಿರ್ದೇಶನಗಳನ್ನು ಅವಲಂಬಿಸಿರುತ್ತದೆ ಎಂದರು.
ಪ್ರಾಯೋಗಿಕ ಪರೀಕ್ಷೆ, ಪಠ್ಯ ಪೂರ್ಣಗೊಳಿಸುವುದು, ತರಗತಿ ಆಯೋಜನೆ, ಪರೀಕ್ಷಾ ಸಮಯ ಕಡಿತ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ವಿಶ್ವವಿದ್ಯಾಲಯ ಕಾಲಕಾಲಕ್ಕೆ ತೆಗೆದುಕೊಳ್ಳುವ ನಿರ್ಧಾರಗಳನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್: https://www.kud.ac.in ನಲ್ಲಿ ಪಡೆಯಿತ್ತೀರಿ. ಜೊತೆಗೆ ನಿಮ್ಮ ಕಾಲೇಜುಗಳ ಪ್ರಾಚಾರ್ಯರ ಜೊತೆಗೆ ಸಂಪರ್ಕದಲ್ಲಿರಿ ಎಂದು ಸಲಹೆ ಮಾಡಿದರು.
*ಶಿವಮೂರ್ತಿ, ಧಾರವಾಡ, ಎಂ.ಕಾಂ ವಿದ್ಯಾರ್ಥಿ: ಲಾಕ್ ಡೌನ್ ಬಳಿಕ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುವುದೇ?
*10ರಿಂದ 15 ದಿನಗಳ ಕಾಲ ಹೆಚ್ಚುವರಿ ತರಗತಿ ನಡೆಸುವ ಚಿಂತನೆ ಇದೆ. ಈ ಬಗ್ಗೆ ಸರ್ಕಾರಕ್ಕೆ ವಿ.ವಿಯಿಂದ ಶಿಫಾರಸು ಮಾಡಲಾಗಿದೆ. ಅನುಮತಿ ಸಿಕ್ಕರೆ ತರಗತಿ ನಡೆಸಲಾಗುವುದು.
* ಲಕ್ಷ್ಮಣ ಗದಗ: ಆನ್‌ಲೈನ್ ಕೋಚಿಂಗ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಆದರೆ, ನೆಟ್‌ವರ್ಕ್ ಸರಿಯಾಗಿ ಸಿಗುವುದಿಲ್ಲ. ಪದೇ ಪದೇ ವ್ಯತ್ಯಯ ಆಗುತ್ತಿದೆ.
* ನೀವು ಹಳ್ಳಿಯಲ್ಲಿ ನೆಲೆಸಿದ್ದರೆ ತಾಂತ್ರಿಕ ಸಮಸ್ಯೆ ಆಗಿರಬಹುದು. ನೆಟ್‌ವರ್ಕ್ ಉತ್ತವಾಗಿರುವ ಸ್ಥಳವನ್ನು ಮೊದಲೇ ಗುರುತಿಸಿ, ಅದೇ ಸ್ಥಳದಲ್ಲಿ ಆನ್‌ಲೈನ್ ಕೋಚಿಂಗ್‌ನಲ್ಲಿ ಭಾಗಿಯಾಗಿರಿ.
*ಶಿವಕುಮಾರ್, ವಿಜಯಪುರ: ಪರೀಕ್ಷಾ ಅವಧಿ ಎರಡು ಗಂಟೆಗೆ ಸೀಮಿತಗೊಳಿಸುವ ಯೋಚನೆ ಇದೆಯೇ?
*ಸರ್ಕಾರದ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯ. ಪ್ರಸ್ತುತ 3ಗಂಟೆ ಅವಧಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಸಮಯಕ್ಕೆ ತಕ್ಕಂತೆ ಮಾನಸಿಕವಾಗಿ ಸಿದ್ಧರಾಗಿರಿ.
*ಸುಮಾ, ಧಾರವಾಡ, ಲಕ್ಷ್ಮಣ, ಗದಗ; ಪವಿತ್ರ, ಗದಗ: ಆನ್‌ಲೈನಲ್ಲಿಯೇ ಪರೀಕ್ಷೆಗಳು ನಡೆಯಲಿವೆಯೇ?
*ಆನ್‌ಲೈನ್ ಪರೀಕ್ಷೆ ನಡೆಸುವುದಿಲ್ಲ. ಈ ಬಗ್ಗೆ ಸರ್ಕಾರ ಮಟ್ಟದಲ್ಲಿಯೇ ತೀರ್ಮಾನ ಆಗಬೇಕು. ಎಲ್ಲ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆಗೆ ಸಿದ್ಧರಾಗಬೇಕು. ವದಂತಿಗಳಿಗೆ ಕಿವಿಗೊಡಬೇಡಿ.
*ಶ್ರುತಿ, ಹಾವೇರಿ: ಪರೀಕ್ಷೆ ಆರಂಭಕ್ಕೂ ಒಂದು ತಿಂಗಳು ಮೊದಲು ಹಾಸ್ಟೆಲ್ ಆರಂಭಿಸಿ. ನನ್ನೆಲ್ಲ ಪುಸ್ತಕಗಳನ್ನು ಅಲ್ಲಿಯೇ ಬಿಟ್ಟು ಬಂದಿದ್ದೇನೆ.
ಹೊರ ಜಿಲ್ಲೆಯಿಂದ ಧಾರವಾಡಕ್ಕೆ ಬಂದು ನಿಮ್ಮ ಪುಸ್ತಕಗಳನ್ನು ತೆಗೆದುಕೊಂಡು ಹೋಗಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ. ಆದ್ದರಿಂದ ಪರೀಕ್ಷೆ ಆರಂಭಿಸುವ ಕೆಲ ದಿನಗಳ ಮೊದಲು ಹಾಸ್ಟೆಲ್ ಆರಂಭಿಸುತ್ತೇವೆ. ನಿಮ್ಮೊಂದಿವೆ ನಾವಿದ್ದೇವೆ; ಚಿಂತೆ ಬೇಡ.
*ಕಿರಣ್, ಗದಗ: ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ಪದವಿಯ ಅಂತಿಮ ಪರೀಕ್ಷೆಯ ಕೆಲವು ವಿಷಯಗಳಲ್ಲಿ ಕಡಿಮೆ ಅಂಕ ಬಂದಿದೆ. ಆ ವಿಷಯಗಳ ಮರುಪರೀಕ್ಷೆ ಬರೆಯಬೇಕಾಗಿದೆ.
*ಕಡಿಮೆ ಅಂಕ ಬಂದ ವಿಷಯಗಳ ಪರೀಕ್ಷೆ ಬರೆಯುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಪರೀಕ್ಷಾ ವೇಳಾಪಟ್ಟಿಗೆ ವಿ.ವಿಯ ವೆಬ್‌ಸೈಟ್ ಗಮನಿಸಿರಿ.
*ವೆಂಕಟೇಶ, ಧಾರವಾಡ: ದೂರ ಶಿಕ್ಷಣ ಕೋರ್ಸ್‌ಗಳಲ್ಲಿ ಅಭ್ಯಾಸ ಮಾಡುತ್ತಿರುವವರ ಪರೀಕ್ಷೆಯ ಬಗ್ಗೆ ತಿಳಿಸಿ.
*ದೂರ ಶಿಕ್ಷಣ ವಿಷಯಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ಇನ್ನೂ ನಿರ್ದೇಶನ ಬಂದಿಲ್ಲ. ಲಾಕ್‌ಡೌನ್ ಅವಧಿ ಪೂರ್ಣವಾದ ನಂತರ ಗೊತ್ತಾಗಲಿದೆ.
* ಇಂದೂಧರ ಯರೇಸೀಮೆ: ನನ್ನ ಮಗಳು ಗಣಿತ ವಿಷಯ ಆಯ್ಕೆ ಮಾಡಿಕೊಂಡಿದ್ದಾಳೆ. ತರಗತಿ ತೆಗೆದುಕೊಂಡು ಪಠ್ಯ ಪೂರ್ಣಗೊಳಿಸಿದ ಬಳಿಕ ಪರೀಕ್ಷೆ ನಡೆಸಿ.
ಸಂಕಷ್ಟದ ಪರಿಸ್ಥಿತಿ ಇರುವ ಕಾರಣ ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಯುಜಿಸಿ ನಿಯಮದಂತೆ ಕ್ರಮ ತೆಗೆದುಕೊಂಡು ಪರೀಕ್ಷೆ ನಡೆಸುತ್ತೇವೆ. ಅನುಕೂಲ ನೋಡಿಕೊಂಡು ತರಗತಿಗಳಲ್ಲಿ ಪಾಠ ಮಾಡಲು ಯೋಜಿಸಲಾಗುವುದು.
* ಅಭಿಷೇಕ, ಧಾರವಾಡ: ಎಂಎಸ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಿಸಿ, ಮತ್ತೆ ವಾಪಸ್ ತೆಗೆದುಕೊಂಡಿದ್ದೀರಲ್ಲ?
ಲಾಕ್‌ಡೌನ್ ಇರುವ ಕಾರಣ ಫಲಿತಾಂಶ ತಡೆಹಿಡಿಯಲಾಗಿದೆ. ಮೇ 4ರ ಬಳಿಕ ಫಲಿತಾಂಶ ಪ್ರಕಟಿಸಲಾಗುತ್ತದೆ.
* ಅಠವಾಳೆ, ಧಾರವಾಡ: ಯೋಗ ಪಠ್ಯಕ್ಕೆ ಸಂಬಂಧಿಸಿದ ಪ್ರಾಯೋಗಿಕ ತರಗತಿಗಳು ಇನ್ನೂ ಬಾಕಿ ಉಳಿದಿವೆಯಲ್ಲ?
ಸದ್ಯಕ್ಕೆ ಆನ್‌ಲೈನ್ ಮೂಲಕ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿರ್ದೇಶನದಂತೆ ಜೂಮ್ ಆ್ಯಪ್ ಬಳಕೆ ಮಾಡುತ್ತಿಲ್ಲ. ಪರ್ಯಾಯ ತಂತ್ರಾಂಶದ ಮೂಲಕ ಪಾಠಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹರ್ಷದ್, ವಿಜಯಪುರ: * ಸೋಂಕಿತ ವ್ಯಕ್ತಿಗಳು ಯಾರೆಂಬುದು ಗೊತ್ತಾಗುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ಈ ಅಪಾಯ ಹೇಗೆ ತಪ್ಪಿಸುತ್ತೀರಿ?
ಜಿಲ್ಲಾಡಳಿತ ನಿರ್ದೇಶನದಂತೆಯೇ ಪರೀಕ್ಷೆ ನಡೆಸಲಾಗುವುದು. ಲಾಕ್‌ಡೌನ್ ಅವಧಿ ಮುಗಿದ ಬಳಿಕ ಸರ್ಕಾರದ ನೀಡುವ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು. ಅಂತರ ಕಾಯ್ದುಕೊಂಡೇ ಪರೀಕ್ಷೆ ಆಯೋಜಿಸಲಾಗುವುದು.
ಸ್ಫೂರ್ತಿ, ಹಾವೇರಿ: ನಮಗೆ ಆನ್‌ಲೈನ್ ತರಗತಿಗಳು ನಡೆಯುತ್ತಿಲ್ಲ. ಪಿಡಿಎಫ್‌ಗಳನ್ನು ಮಾತ್ರ ನೀಡುತ್ತಿದ್ದಾರೆ. ಇದರಿಂದ ಅಧ್ಯಯನ ಕ್ಲಿಷ್ಟಕರವಾಗಿದ್ದು, ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದು ಆತಂಕವಾಗಿದೆ.
ಲಾಕ್‌ಡೌನ್ ಮುಗಿದ ನಂತರ 15 ದಿನಗಳ ಕಾಲಾವಕಾಶ ನೀಡುವಂತೆ ಸರ್ಕಾರಕ್ಕೆ ಕೇಳಿದ್ದೇವೆ. ಸಾಧ್ಯವಾದರೆ, ಮತ್ತೆ ತರಗತಿಗಳು ನಡೆಯಲಿವೆ. ನಿಮಗೆ ಕಠಿಣವಾದ ವಿಷಯಗಳನ್ನು ಆ ತರಗತಿಗಳಲ್ಲಿ ಪರಿಹರಿಸಿಕೊಳ್ಳಬಹುದು.
ಫಕ್ಕೀರೇಶ ಹಿರೇಮಠ, ಹುಬ್ಬಳ್ಳಿ; ರಂಗನಾಥ, ಬಾಗಲಕೋಟೆ; ನಾಗಪ್ಪ, ಹಾವೇರಿ; ಮೆಹಬೂಬ್, ಯಾದಗಿರಿ; ವೈಷ್ಣವಿ, ಕೊಪ್ಪಳ; ಅನಿತಾ ಹಾವೇರಿ; ವೆಂಕಟೇಶ, ಗದಗ; ಜೀವನ ವಸ್ತ್ರದ, ಗದಗ; ಸ್ಮಿತಾ, ಹುಬ್ಬಳ್ಳಿ; ಸಚಿನ್, ವಿಜಯಪುರ; ಗಿರೀಶ್, ಧಾರವಾಡ; ರಾಜು, ಬಿ.ಎ, ಧಾರವಾಡ; ವಿರೇಶ, ಬಳ್ಳಾರಿ; ಅಜಯ್, ರಾಣೆಬೆನ್ನೂರು; ಮಂಜುನಾಥ, ಧಾರವಾಡ, ಶೈಲಜಾ, ಧಾರವಾಡ, ಅರವಿಂದ, ಧಾರವಾಡ, ಸರಸ್ವತಿ ಕೆಂಚನಗೋಳ, ನರಗುಂದ, ಸಂದೀಪ, ಹಾವೇರಿ, ಮಧುಸೂಧನ, ಕುಮಟಾ, ಪೂಜಾ ಉಲ್ಲಾಸನಾಯ್ಕ, ಕುಮಟಾ, ರವಿ ಚವ್ಹಾಣ, ಧಾರವಾಡ, ಸಂಜನಾ, ಧಾರವಾಡ, ಶಿವಪುತ್ರಪ್ಪ ದ್ಯಾವಣ್ಣವರ, ಬಾಗಲಕೋಟೆ, ಹೇಮಾನಾಯ್ಕ, ಧಾರವಾಡ, ಡಿ. ಪುರೋಹಿತ್, ಧಾರವಾಡ, ದೀಪಾ ಎನ್.ಆರ್., ಧಾರವಾಡ, ಸುವರ್ಣ ಕಂಬಳಿ, ಸ್ನಾತಕೋತ್ತರ ವಿದ್ಯಾರ್ಥಿ, ಧಾರವಾಡ, ಎ. ಹೊಸಮಠ, ಧಾರವಾಡ, ರಮೇಶ್, ಬ್ಯಾಡಗಿ, ಈರಣ್ಣ, ಮಹಾಲಿಂಗಪುರ, ಗಿರಿಜಾ, ಧಾರವಾಡ, ದಯಾನಂದ, ಹಾವೇರಿ, ನಾಗರಾಜ, ಎಂ.ಎಸ್ಸಿ, ಗದಗ
ಸ್ನಾತಕೋತ್ತರ ಪದವಿಯ ಪರೀಕ್ಷೆಗಳು ಯಾವಾಗ ನಡೆಯುತ್ತವೆ?
ಪದವಿಯ ಆರನೇ ಸೆಮಿಸ್ಟರ್ ಹಾಗೂ ಸ್ನಾತಕೋತ್ತರ ವಿಭಾಗದ ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳನ್ನು ಮೊದಲು ನಡೆಸುತ್ತೇವೆ. ಜೂನ್ ಎರಡು ಅಥವಾ ಮೂರನೇ ವಾರದಲ್ಲಿ ಪರೀಕ್ಷೆ ನಡೆಸುವ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದು ಸಹ ಸರ್ಕಾರ ಕೈಗೊಳ್ಳುವ ಲಾಕ್‌ಡೌನ್ ಅವಧಿ ವಿಸ್ತರಣೆ ಆಧರಿಸಿದೆ. ಉಳಿದ ಸೆಮಿಸ್ಟರ್‌ಗಳ ಪರೀಕ್ಷೆಯನ್ನು ಜುಲೈನಲ್ಲಿ ನಡೆಸುವ ಯೋಜನೆ ಇದೆ.
ಗಿರೀಶ, ಧಾರವಾಡ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಓದಲು ಅಗತ್ಯ ಪುಸ್ತಕ, ಪರಿಕರಗಳಿಲ್ಲ. ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು?
ಈಗಾಗಲೇ ಎಲ್ಲಾ ಪಠ್ಯಕ್ರಮ ಪೂರ್ಣಗೊಳ್ಳುವ ಹಂತದಲ್ಲಿವೆ. ಆನ್‌ಲೈನ್ ಪಾಠಗಳನ್ನೂ ಆಲಿಸಿ. ಲಾಕ್‌ಡೌನ್ ನಂತರ ಸಿಗುವ ಅತ್ಯಲ್ಪ ಸಮಯವನ್ನು ಓದಿನ ಮನನ, ಪ್ರಶ್ನೆಗಳನ್ನುಪರಿಹರಿಸಿಕೊಳ್ಳಲು ಬಳಸಿಕೊಳ್ಳಿ.
ಅರುಂಧತಿ, ಹಾವೇರಿ:ಪರೀಕ್ಷೆಯ ಶುಲ್ಕ ಹೇಗೆ ಕಟ್ಟುವುದು?
ಈ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ. ವೆಬ್‌ಸೈಟ್ ಗಮನಿಸಿರಿ. ನಿಮ್ಮ ಕಾಲೇಜಿನ ಪ್ರಾಚಾರ್ಯರೊಂದಿಗೆ ಮಾತಾಡಿ. ಲಾಕ್‌ಡೌನ್ ಮುಗಿದ ನಂತರ ಪ್ರಾಯೋಗಿಕ ಚಟುವಟಿಕೆಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆ. ಅದರಲ್ಲಿ ನಿಮಗೇನೇ ಅನುಮಾನಗಳು, ಪ್ರಶ್ನೆಗಳು ಇದ್ದರೂ ಪರಿಹರಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ವೆಬ್‌ಸೈಟ್‌ನ್ನು ಗಮನಿಸಿ.
ತರಗತಿ ಆಯೋಜನೆಗೆ ಯತ್ನ
* ಚೇತನ್, ಪದವಿ ವಿದ್ಯಾರ್ಥಿ, ಹಾವೇರಿ, ಗಣೇಶ, ಉಮಚಗಿ, ಶಶಾಂಕ್, ಶಿರಸಿ
ಪ್ರ: ಆನ್‌ಲೈನ್ ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ ಎದುರಾಗುತ್ತಿದೆ. ಪಠ್ಯಕ್ರಮ ಪೂರ್ಣಗೊಂಡಿಲ್ಲ. ಹೀಗಾದರೆ, ಪರೀಕ್ಷೆ ಎದುರಿಸುವುದು ಹೇಗೆ?
ಉ: ಆನ್‌ಲೈನ್ ಪಾಠಕ್ಕೆ ಸಂಬಂಧಿಸಿದಂತೆ, ವಿಶ್ವವಿದ್ಯಾಲಯದ ವ್ಯಾಪ್ತಿಯ ಕಾಲೇಜುಗಳ ಪ್ರಾಚಾರ್ಯರ ಜತೆ ವಿಡಿಯೊ ಕಾನ್ಫರೆನ್ಸ್ ಮಾಡಿದ್ದೇವೆ. ಆನ್‌ಲೈನ್ ಮೂಲಕ ಪೂರ್ಣಗೊಳಿಸಲಾಗಿದೆಯೇ ಎಂಬ ವಿವರ ಪಡೆದಿದ್ದೇವೆ. ತಾಂತ್ರಿಕ ಸಮಸ್ಯೆಯಿಂದ ಪಾಠದ ಪ್ರಯೋಜನ ಪಡೆಯಲು ಸಾಧ್ಯವಾಗದಿದ್ದರೆ, ನಿಮ್ಮ ಉಪನ್ಯಾಸಕರಿಗೆ ವೈಯಕ್ತಿಕವಾಗಿ ಕರೆ ಮಾಡಿ. ಪಠ್ಯಕ್ಕೆ ಸಂಬಂದಿಸಿದ ಮೆಟೀರಿಯಲ್ (ಪಿಡಿಎಫ್) ಪಡೆದು ಓದಿ. ಪರೀಕ್ಷೆಗೂ ಮುನ್ನ ತರಗತಿ ಆಯೋಜಿಸುವ ಉದ್ದೇಶವಿದೆ. ಆಗ, ಉಪನ್ಯಾಸಕರಿಂದ ಪಠ್ಯಕ್ಕೆ ಸಂಬಂಧಿಸಿದ ಅನುಮಾನಗಳನ್ನು ನೇರವಾಗಿ ಪರಿಹರಿಸಿಕೊಳ್ಳಬಹುದು.
‘ಪ್ರೊಜೆಕ್ಟ್ ವರ್ಕ್’ಗೆ ಹೆಚ್ಚುವರಿ ಅವಕಾಶ
ಸುಮಾ ಗದಗ, *ಆರ್ತಿ, ಹುಬ್ಬಳ್ಳಿ; ಕಾವೇರಿ, ಹಾವೇರಿ; ಶಿವಪ್ರಸಾದ, ಯಲ್ಲಾಪುರ: ಅಧ್ಯಯನಕ್ಕೆ ಆಯ್ದುಕೊಂಡ ವಿಷಯದ ಮಾಹಿತಿ ಸಂಗ್ರಹಕ್ಕಾಗಿ ವಿವಿಧ ಜಿಲ್ಲೆಗಳಿಗೆ ಸುತ್ತಾಡಬೇಕಾಗಿದೆ. ಲಾಕ್‌ಡೌನ್‌ನಿಂದಾಗಿ ಸುತ್ತಾಟ ಆಗಿಲ್ಲ. ‘ಪ್ರೊಜೆಕ್ಟ್ ವರ್ಕ್’ಗಾಗಿಯೇ ಹೆಚ್ಚುವರಿ ಸಮಯ ನೀಡುವಿರಾ?
ವಿದ್ಯಾರ್ಥಿಗಳು ಗೊಂದಲ ಮಾಡಿಕೊಳ್ಳುವುದು ಬೇಡ. ಪ್ರೊಜೆಕ್ಟ್ ವರ್ಕ್‌ಗಾಗಿ ಹೆಚ್ಚುವರಿಯಾಗಿ ಒಂದು ತಿಂಗಳು ಸಮಯಾವಕಾಶ ನೀಡಲಾಗುವುದು. ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಾಗುವುದು. ಪರೀಕ್ಷೆ ನಡೆದ ಒಂದು ತಿಂಗಳಲ್ಲಿ ಫಲಿತಾಂಶ ಪ್ರಕಟಿಸಲು ಸಿದ್ಧತೆ ನಡೆಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.