ಹುಬ್ಬಳ್ಳಿ: 'ನರೇಂದ್ರ ಮೋದಿ ಅವರು ಇಲೆಕ್ಟ್ರಾಲ್ ಬಾಂಡ್ ಜಾರಿಗೆ ತಂದು ಇಡೀ ರಾಜಕೀಯ ವ್ಯವಸ್ಥೆಯನ್ನೇ ಭ್ರಷ್ಟ ಮಾಡಿದ್ದಾರೆ. ಹೀಗಿದ್ದಾಗ ಅವರು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ ಎಂದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ' ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನರೇಂದ್ರ ಮೋದಿ ಮತ್ತು ಬಿಜೆಪಿ ಮುಖಂಡರು ಕೇಂದ್ರದ ಇಡಿ, ಸಿಬಿಐ ಇತರೆ ತನಿಖಾ ಸಂಸ್ಥೆಗಳನ್ನು ಕಂಪನಿಗಳಿಗೆ ಛೂ ಬಿಟ್ಟು ಬೆದರಿಸಿ ಅವರಿಂದ ಇಲೆಕ್ಟ್ರಾಲ್ ಬಾಂಡ್ ಪಡೆದುಕೊಂಡಿದ್ದಾರೆ. ಇದು ಭ್ರಷ್ಟಾಚಾರ ಅಲ್ಲವೇ? ಅವರ್ಯಾರಿಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
'ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸುತ್ತಿದೆ' ಎನ್ನುವ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ಪ್ರತಿ ಚುನಾವಣೆಯಲ್ಲೂ ಬಿಜೆಪಿ ಹೀಗೆಯೇ ಆರೋಪಿಸುತ್ತದೆ. ಚನ್ನಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಅವರು ನಮಾಜ್ ಮ್ಯಾಟ್ ಮತ್ತು ಸಾವಿರ ರೂಪಾಯಿ ಕೊಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಅವರು ಚುನಾವಣೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಹೇಳಿಕೆ ನೀಡುವುದು ಹಾಸ್ಯಾಸ್ಪದ' ಎಂದರು.
'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಅಧಿಕಾರಿಗಳು ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಾರೆ ಎಂದು ವಿರೋಧ ಪಕ್ಷಗಳು ಆರೋಪಿಸುವುದು ಸಾಮಾನ್ಯ. ಅಂತಹ ಪರಿಸ್ಥಿತಿ ಕಾಂಗ್ರೆಸ್ ಆಡಳಿತದಲ್ಲಿ ಇಲ್ಲ. ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಆರೋಪದ ಕುರಿತು ಎಲ್ಲ ಅಧಿಕಾರಿಗಳು ತನಿಖೆಗೆ ಪಾರದರ್ಶಕವಾಗಿ ಸಹಕರಿಸುತ್ತಿದ್ದಾರೆ' ಎಂದು ಪ್ರಶ್ನೆಯೊಂದಕ್ಕೆ ಯತೀಂದ್ರ ಉತ್ತರಿಸಿದರು.
'ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಬೇಕು ಎನ್ನುವುದು ಬಿಜೆಪಿ ಉದ್ದೇಶವಾಗಿದ್ದು, ಯಾವ್ಯಾವುದೋ ಹಗರಣ ಎನ್ನುತ್ತ ಸಿದ್ದರಾಮಯ್ಯ ಅವರಿಗೆ ಇ.ಡಿ ನೋಟಿಸ್ ನೀಡಿ ಬೆದರಿಸಲು ಯತ್ನಿಸುತ್ತಿದೆ. ಸರ್ಕಾರ ಅಸ್ಥಿರಗೊಳಿಸಬೇಕೆಂದರೆ ಅದಕ್ಕೆ ದೊಡ್ಡ ತಡೆ ಸಿದ್ದರಾಮಯ್ಯ. ಹಾಗಾಗಿ, ಮೊದಲು ಅವರನ್ನು ಅಧಿಕಾರದಿಂದ ಕೆಳಗಿಳಿಸಿದರೆ ನಂತರ ಸರ್ಕಾರವನ್ನು ಸುಲಭವಾಗಿ ಬೀಳಿಸಬಹುದು ಎನ್ನುವುದು ಅದರ ಲೆಕ್ಕಾಚಾರ. ಇಲ್ಲಷ್ಟೇ ಅಲ್ಲ, ಕಾಂಗ್ರೆಸ್ ಸರ್ಕಾರ ಇರುವ ಎಲ್ಲ ರಾಜ್ಯದಲ್ಲಿಯೂ ಅವರು ಇದನ್ನೇ ಮಾಡುತ್ತಿದ್ದಾರೆ. ನಾವು ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ, ಕಾನೂನು ಹೋರಾಟ ನಡೆಸುತ್ತೇವೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.