ADVERTISEMENT

ಸಾರ್ವತ್ರಿಕ ವರ್ಗಾವಣೆ; ಮನನೊಂದು ಸ್ವಯಂ ನಿವೃತ್ತಿಗೆ ಹೆಡ್‌ ಕಾನ್‌ಸ್ಟೆಬಲ್‌ ಮೊರೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 22:30 IST
Last Updated 23 ಜೂನ್ 2023, 22:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಧಾರವಾಡ: ವರ್ಗಾವಣೆ ಮಾಡಿದ್ದಕ್ಕೆ ಮನನೊಂದು ಆಳ್ನಾವರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಆರ್‌.ಎನ್‌.ಗೊರಗುದ್ದಿ ಅವರು ಸ್ವಯ ನಿವೃತ್ತಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಇದೇ 21ರಂದು ಜಿಲ್ಲಾ ಪೊಲೀಸ್‌ ಕಚೇರಿಯ ಟಪಾಲು ವಿಭಾಗಕ್ಕೆ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರದಲ್ಲಿ ಸಾರಾಂಶ ಇಂತಿದೆ.

ಐದು ವರ್ಷ ಅವಧಿ ಪೂರ್ಣಗೊಳ್ಳದಿದ್ದರೂ ಸಾರ್ವತ್ರಿಕ ವರ್ಗಾವಣೆಯಲ್ಲಿ ವರ್ಗಾವಣೆ ಮಾಡಲಾಗಿದೆ. ಕೋರಿಕೆಯ ಮೇರೆಗೆ ಎಂದು ಡಿಸಿಆರ್‌ಬಿಯಿಂದ ಅಳ್ನಾವರ ಠಾಣೆಗೆ ವರ್ಗಾಯಿಸಲಾಗಿದೆ. ಇದರಿಂದ ಮನಸ್ಸಿಗೆ ಆಘಾತವಾಗಿದೆ.

ADVERTISEMENT

ನಮ್ಮದು ಅವಿಭಕ್ತ ಕುಟುಂಬ. ತಂದೆ ಹೃದಯ ಕಾಯಿಲೆಯಿಂದ, ತಾಯಿ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಕುಟುಂಬದಲ್ಲಿ ನಾನೊಬ್ಬನೇ ಸರ್ಕಾರಿ ನೌಕರ. ಎಲ್ಲ ಜವಾಬ್ದಾರಿ ನನ್ನ ಮೇಲಿದೆ.

ಪೋಷಕರ ಪಾಲನೆಗಾಗಿ 2008ರಲ್ಲಿ ಹಾವೇರಿ ಜಿಲ್ಲೆಯಿಂದ ಧಾರವಾಡ ಜಿಲ್ಲೆಗೆ ಸೇವಾ ಜೇಷ್ಠತೆ ಬಿಟ್ಟು ವರ್ಗಾವಣೆಯಾಗಿದ್ದೆ. ಕಿರಿಯ ನೌಕರರಾದ ನಾವು ನಿಮ್ಮ ಮುಂದೆ ಕುಂದು ಕೊರತೆ ಹೇಳಿದರೆ ಅಮಾನತುಗೊಳಿಸುವಿರಿ ಅಥವಾ ಸೇವೆಯಿಂದ ವಜಾಗೊಳಿಸುವಿರಿ ಎಂಬ ಭಯಕ್ಕೆ ತೊಂದರೆಗಳನ್ನು ನಮ್ಮಲ್ಲಿಯೇ ಅನುಭವಿಸಿದ್ದೇನೆ. ಒಂದು ತರಹ ಖಿನ್ನತೆಯಲ್ಲಿ ಕಾರ್ಯನಿರ್ವಹಿಸಿದ್ದೇನೆ. ವರ್ಗಾವಣೆ ಮಾಡುವ ಸಮಯದಲ್ಲಿ ಹಿರಿಯ ಅಧಿಕಾರಿಗಳಿಂದಲೂ ನನ್ನ ಕುಂದು ಕೊರತೆಯ ಬಗ್ಗೆ ತಿಳಿಸಿದರೂ ಕುಟುಂಬದ ಜೊತೆಗೆ ಇದ್ದುಕೊಂಡು ಇಲಾಖೆ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಡದೆ ಇಲಾಖೆಯ ಮೇಲೆಯೇ ಅಸಹ್ಯ ಪಡುವಂತೆ ಮಾನಸಿಕ ಹಿಂಸೆ ಕೊಟ್ಟದ್ದು ಇರುತ್ತದೆ. ಡಿಸಿಆರ್‌ಬಿ ವಿಭಾಗದಿಂದ ಅಳ್ನಾವರ ಪೊಲೀಸ್ ಠಾಣೆಗೆ ಹೋಗಿ ಕಾರ್ಯನಿರ್ವಹಿಸಲು ಬಿಡದೆ ಮತ್ತೆ ಡಿಪಿಓಗೆ ಕೆಲವು ಪ್ರಕರಣಗಳ ಕಾರ್ಯಕ್ಕೆ ಕರೆಯಿಸಿದ್ದರಿಂದ ಮಾನಸಿಕ ಹಿಂಸೆಯಾಗಿದೆ. ಈವರೆಗೆ 27 ವರ್ಷ 08 ತಿಂಗಳು ಕಾರ್ಯನಿರ್ವಹಿಸಿದ್ದೇನೆ. ಇನ್ನು 9 ವರ್ಷ ಸೇವಾವಧಿ ಇದೆ. ಬಾಕಿ ಸೇವಾವಧಿಯನ್ನು ಊರ್ಜಿತಗೊಳಿಸಿ 30ವರ್ಷ ಸೇವೆ ಅಂತ ಪರಿಗಣಿಸಿ ಪೂರ್ಣ ನಿವೃತ್ತಿ ವೇತನ ಹಾಗೂ ಸೌಲಭ್ಯ ಮಂಜೂರು ಮಾಡಿ, ಸ್ವಯಂ ನಿವೃತ್ತಿ ಘೋಷಿಸಬೇಕು ಎಂದು ಕೋರಿದ್ದಾರೆ.

‘ಒಂದು ಠಾಣೆಯಲ್ಲಿ ಐದು ವರ್ಷ ಕಾರ್ಯನಿರ್ವಹಿಸಿವರನ್ನು ಮತ್ತೊಂದು ಕಡೆಗೆ ವರ್ಗಾವಣೆ ಮಾಡುತ್ತೇವೆ.ಇಲಾಖೆಯ ಮಾನದಂಡ ಪ್ರಕಾರ ಸಾರ್ವತ್ರಿಕ ವರ್ಗಾವಣೆಯಲ್ಲಿ 74 ಪೊಲೀಸರನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ ಆರ್‌.ಎನ್‌.ಗೊರಗುದ್ದಿ ಅವರೂ ಒಬ್ಬರು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ್‌ ಜಗಲಾಸರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.