ADVERTISEMENT

ಹುಬ್ಬಳ್ಳಿ | ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: 264 ದ್ವಿಚಕ್ರ ವಾಹನ ವಶ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:33 IST
Last Updated 27 ಅಕ್ಟೋಬರ್ 2024, 15:33 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹುಬ್ಬಳ್ಳಿ: ‘ಹು–ಧಾ ಕಮಿಷನರೇಟ್‌ ವ್ಯಾಪ್ತಿಯ ದಕ್ಷಿಣ ಉಪವಿಭಾಗದ ವಿವಿಧೆಡೆ ಶನಿವಾರ ಕಾರ್ಯಾಚರಣೆ ನಡೆಸಿ, ಸರಿಯಾದ ದಾಖಲೆ ಇಲ್ಲದ ಒಟ್ಟು 264 ದ್ವಿಚಕ್ರ ವಾಹನಗಳು ಹಾಗೂ ಮೂರು ಆಟೊಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್‌ ತಿಳಿಸಿದರು.

ಕಸಬಾಪೇಟ್‌ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹುಬ್ಬಳ್ಳಿ ಶಹರ, ಘಂಟಿಕೇರಿ, ಕಸಬಾ, ಹಳೆ ಹುಬ್ಬಳ್ಳಿ ಹಾಗೂ ಬೆಂಡಿಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 14 ಕಡೆ ಚೆಕ್‌ಪೋಸ್ಟ್‌ ನಿರ್ಮಿಸಿ, ಕಾರ್ಯಾಚರಣೆ ನಡೆಸಲಾಗಿದೆ’ ಎಂದರು.

ADVERTISEMENT

‘ವಾಹನ ಚಾಲನಾ ಪರವಾನಗಿ, ನೋಂದಣಿ, ವಿಮೆ ಪ್ರಮಾಣಪತ್ರ ಇಲ್ಲದಿರುವುದು, ಹೆಲ್ಮೆಟ್‌ ಧರಿಸದಿರುವುದು, ವಾಯುಮಾಲಿನ್ಯ ತಪಾಸಣೆ ಆಗದಿರುವ ವಾಹನಗಳು ಕಾರ್ಯಾಚರಣೆ ವೇಳೆ ಪತ್ತೆಯಾಗಿವೆ. ದೋಷಪೂರಿತ ನಂಬರ್‌ಪ್ಲೇಟ್‌ ಹಾಗೂ ನಂಬರ್‌ಪ್ಲೇಟ್‌ ಹಾಕದ ಪ್ರಕರಣಗಳಿದ್ದು, ಕಳವು ಮಾಡಿದ ವಾಹನಗಳೂ ಇವೆ’ ಎಂದು ಮಾಹಿತಿ ನೀಡಿದರು.

‘ಇದು ಐಎಂವಿ ಹಾಗೂ ಬಿಎನ್‌ಎಸ್‌ ಪ್ರಕಾರ ಅಪರಾಧವಾಗಿದ್ದು, ಪ್ರಕರಣ ದಾಖಲಿಸಿದರೆ ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಸಲ್ಲಿಸಿ, ದಂಡ ಪಾವತಿಸಿ ವಾಹನ ಬಿಡಿಸಿಕೊಳ್ಳಬೇಕಾಗುತ್ತದೆ. ಈ ಪ್ರಕ್ರಿಯೆಗೆ ಸಮಯ ಹಿಡಿಯುವುದರಿಂದ ವಾಹನ ಸವಾರರು ಮುಂಜಾಗ್ರತೆ ವಹಿಸುವುದು ಒಳಿತು’ ಎಂದರು.

‘ಕಿರಿದಾದ ರಸ್ತೆಗಳಲ್ಲಿ ಕೆಲವರು ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಾಲನೆ, ನಗರದ ಹೊರ ವಲಯದಲ್ಲಿ ಅನೈತಿಕ ಚಟುವಟಿಕೆ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದವು. ಮಹಿಳೆಯರ ಸುರಕ್ಷತೆ ದೃಷ್ಟಿಯಿಂದಲೂ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.