ಹುಬ್ಬಳ್ಳಿ: ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಜಿಲ್ಲೆಯ ವಿವಿಧೆಡೆ ಇರುವ ಪಟಾಕಿ ಸಂಗ್ರಹ ಗೋದಾಮು ಹಾಗೂ ಮಾರಾಟ ಮಳಿಗೆಗಳ ಪರಿಶೀಲನೆಗೆ ಕ್ರಮ ಕೈಗೊಂಡಿದೆ.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ವಿಶೇಷ ತಂಡ ಸಿಡಿಮದ್ದುಗಳ ಅಂಗಡಿಗಳ ಪರಿಶೀಲನೆಗೆ ಸಿದ್ಧತೆ ನಡೆಸಿದೆ. ಅಂಗಡಿಗಳ ಪರವಾನಗಿ ಅವಧಿ, ಪರವಾನಗಿ ಪಡೆದ ಸ್ಥಳದಲ್ಲಿಯೇ ಅಂಗಡಿ ಇದೆಯೇ? ಪರವಾನಗಿ ನವೀಕರಣವಾಗಿದೆಯೇ? ಕೈಗೊಂಡ ಮುಂಜಾಗ್ರತಾ ಕ್ರಮಗಳು, ಹಸಿರು ಪಟಾಕಿಗಳು ಹೀಗೆ ವಿವಿಧ ಮಾಹಿತಿ ಸಂಗ್ರಹಿಸಲಿದೆ. ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸಭೆ ನಡೆಸಿದ ಇಲಾಖೆಗಳು ಅಗತ್ಯ ಮಾಹಿತಿ ವಿನಿಮಯ ಮಾಡಿಕೊಂಡಿವೆ.
‘ಅವಳಿನಗರ ಸೇರಿ ಜಿಲ್ಲೆಯಲ್ಲಿ ಎರಡು ಪಟಾಕಿ ಸಂಗ್ರಹ ಗೋದಾಮು, 29 ಪಟಾಕಿ ಮಾರಾಟ ಮಳಿಗೆಗಳಿವೆ. ಪಟಾಕಿ ಸಂಗ್ರಹ ಮತ್ತು ಮಾರಾಟಕ್ಕೆ ಮಹಾನಗರ ಪಾಲಿಕೆ ಮತ್ತು ಅಗ್ನಿ ಶಾಮಕ ದಳದಿಂದ ಪರವಾನಗಿ ಅಗತ್ಯ. ಕಟ್ಟುನಿಟ್ಟಿನ ಷರತ್ತುಗಳು ಇರುತ್ತವೆ. ಆದರೆ, ಬಹುತೇಕ ಮಾರಾಟ ಮಳಿಗೆಯವರು ಸುರಕ್ಷತಾ ನಿಯಮ ಉಲ್ಲಂಘಿಸಿ ಪಟಾಕಿ ಮಾರಾಟ ಮಾಡುತ್ತಿದ್ದಾರೆ’ ಎಂಬ ಆರೋಪವಿದೆ.
ಮುಖ್ಯವಾಗಿ ಜನದಟ್ಟಣೆ ಮತ್ತು ಜನವಸತಿ ಪ್ರದೇಶದಲ್ಲಿ ಸಿಡಿಮದ್ದುಗಳ ಮಾರುವಂತಿಲ್ಲ. ಆದರೆ, ನಗರದಲ್ಲಿರುವ ಪಟಾಕಿ ಅಂಗಡಿಗಳೆಲ್ಲ ಇರುವುದು ಮಾರುಕಟ್ಟೆಯ ಹೃದಯ ಭಾಗದಲ್ಲಿಯೇ. ಸದಾ ಜನಸಂದಣಿ ಇರುವ ಪ್ರಮುಖ ಪ್ರದೇಶದಲ್ಲಿಯೇ ಅವುಗಳಿದ್ದು, ಅಪಾಯ ಸೆರಗಿನಲ್ಲಿ ಕಟ್ಟಿಕೊಂಡೇ ಇದೆ. ಅಕ್ಕಪಕ್ಕ ಅಂಗಡಿ-ಮುಂಗಟ್ಟುಗಳು, ಹೋಟೆಲ್, ಗ್ಯಾರೇಜ್‌ಗಳು, ಆಟೊ ನಿಲ್ದಾಣ ಹಾಗೂ ವಸತಿ ಸಮುಚ್ಚಯಗಳಿವೆ. ಹೈ ಟೆನ್ಸನ್ ವಿದ್ಯುತ್ ಕೇಬಲ್‌ಗಳು ಅಂಗಡಿ ಸನಿಹ ಇರಬಾರದು ಎನ್ನುವ ನಿಯಮವಿದೆ. ಅದರೆ, ವಿದ್ಯುತ್ ಟ್ರಾನ್ಸಫರ್ಮ್ ಸಹ ನಗರದಲ್ಲಿನ ಪಟಾಕಿ ಅಂಗಡಿಗಳ ಪಕ್ಕವೇ ಇದೆ.
‘ಗಣೇಶ ಹಬ್ಬ, ದೀಪಾವಳಿ ಹಬ್ಬದ ಸಂದರ್ಭ ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ಪಟಾಕಿ ಮಾರಾಟ ಮಾಡಲು ಪ್ರತ್ಯೇಕ ಸ್ಥಳ ಗುರುತಿಸಲಾಗುತ್ತದೆ. ಈ ವೇಳೆ ಪರವಾನಗಿ ಪಡೆದ ಮೂಲ ಸ್ಥಳದಲ್ಲಿ ಪಟಾಕಿ ಮಾರಾಟ ಮಾಡುವಂತಿಲ್ಲ ಎಂದು ಮುಂಜಾಗ್ರತಾ ಕ್ರಮವಾಗಿ, ಪೊಲೀಸ್ ಇಲಾಖೆ ನಿಷೇಧ ಹೊರಡಿಸುತ್ತದೆ. ಆದರೂ, ಕೆಲವು ಪರವಾನಗಿದಾರರು ಮೂಲ ಸ್ಥಳದಲ್ಲಿಯೇ ಮಾರಾಟ ಮಾಡುತ್ತಾರೆ. ಆಯಾ ಠಾಣೆಯ ಬೀಟ್ ಸಿಬ್ಬಂದಿಗೆ ಮಾಹಿತಿಯಿದ್ದರೂ, ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಇಂತಹ ಚಿಕ್ಕ ನಿರ್ಲಕ್ಷ್ಯವೇ ಅವಘಡಕ್ಕೆ ಕಾರಣ’ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.
‘ಕೆಲವರ ಬೇಜವಾಬ್ದಾರಿ, ಎಲ್ಲರಿಗೂ ಸಮಸ್ಯೆ’
‘ನಿಯಮ ಪಾಲಿಸಿ, ಪಟಾಕಿ ಮಾರಾಟ ಮತ್ತು ಸಂಗ್ರಹ ಮಾಡಿದರೆ ಯಾವ ದುರಂತವೂ ಸಂಭವಿಸುವುದಿಲ್ಲ. ಕೆಲವರ ಬೇಜವಾಬ್ದಾರಿಯಿಂದ ಅಮಾಯಕರ ಪ್ರಾಣ ಹೋಗುವುದಲ್ಲದೆ, ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ವ್ಯಾಪಾರ ನಡೆಸುವವರಿಗೂ ಸಮಸ್ಯೆ. ನಮ್ಮ ಗೋದಾಮಿನಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದೇವೆ’ ಎಂದು ನಗರದ ಸುಳ್ಳ ರಸ್ತೆಯ ಬಳಿಯಿರುವ ಪಟಾಕಿ ಗೋದಾಮಿನ ಚೈತ್ರಾ ಭಟ್ ಹೇಳಿದರು.
‘50 ಕೆ.ಜಿ.ವರೆಗೆ ಮಾತ್ರ ಅವಕಾಶ’
‘ಜನವಸತಿ ಪ್ರದೇಶದಲ್ಲಿ ಪಟಾಕಿ ಅಂಗಡಿ ಗೋದಾಮು ಇರಬಾರದು. ಮಾರಾಟ ಮಳಿಗೆಯಲ್ಲಿ 50 ಕೆ.ಜಿವರೆಗೆ ಮಾತ್ರ ಸಿಡಿಮದ್ದುಗಳನ್ನು ಇಟ್ಟುಕೊಳ್ಳಬೇಕು. ಸಾಕಷ್ಟು ಬೆಳಕು ಗಾಳಿ ಇದ್ದು ವಿದ್ಯುತ್ ಪರಿವರ್ತಕಗಳು ಕೇಬಲ್‌ಗಳು ಸನಿಹದಲ್ಲಿ ಇರಬಾರದು. ಸ್ವಿಚ್ಡ್ ಬೋರ್ಡ್ ಸುರಕ್ಷಿತವಾಗಿರಬೇಕು. ನೀರಿನ ಡ್ರಮ್ ಅಗ್ನಿಶಾಮಕ ಸಿಲೆಂಡರ್‌ಗಳು ಮರಳು ತುಂಬಿದ ಬಕೆಟ್ ಇರಬೇಕು. ಅಕ್ಕಪಕ್ಕ ಯಾವುದೇ ಅಂಗಡಿ ಇರಬಾರದು. ಅಗ್ನಿ ನಿರೋಧಕ ಸಾಮಗ್ರಿ ಬಳಸಿ ಅಂಗಡಿ ನಿರ್ಮಿಸಿರಬೇಕು. ಆದರೆ ನಗರದಲ್ಲಿನ ಕೆಲವು ಅಂಗಡಿಗಳು ಬಹುತೇಕ ಷರತ್ತುಗಳನ್ನು ಉಲ್ಲಂಘಿಸಿವೆ’ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದರು.
ಐದು ಇಲಾಖೆಯಿಂದ ಪರಿಶೀಲನೆ
‘ಅವಳಿನಗರದಲ್ಲಿರುವ ಪಟಾಕಿ ಮಾರಾಟ ಮಳಿಗೆಗಳ ಸುರಕ್ಷತೆ ಬಗ್ಗೆ ಮಹಾನಗರ ಪಾಲಿಕೆ ಕಂದಾಯ ಇಲಾಖೆ ಅಗ್ನಿ ಶಾಮಕ ದಳ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಚರ್ಚಿಸಲಾಗುವುದು. ಮಳಿಗೆಗಳು ಕೈಗೊಂಡಿರುವ ಸುರಕ್ಷತಾ ಕ್ರಮಗಳು ಹಾಗೂ ನಿಯಮ ಉಲ್ಲಂಘನೆ ಕುರಿತು ಐದು ಇಲಾಖೆ ಸೇರಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕಾನೂನು ಉಲ್ಲಂಘಿಸಿದ ಸುರಕ್ಷತಾ ಕ್ರಮ ಅನುಸರಿಸದ ಅಂಗಡಿಗಳ ಪರವಾನಗಿ ರದ್ದು ಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ತಿಳಿಸಿದರು.
ಪಟಾಕಿ ಅಂಗಡಿಗಳ ಮಾಹಿತಿ ಸಂಗ್ರಹಕ್ಕೆ ಜಿಲ್ಲಾಡಳಿತದಿಂದ ನಿರ್ದೇಶನ ಬಂದಿದ್ದು ಮಾಹಿತಿ ಕಲೆ ಹಾಕಲಾಗುತ್ತಿದೆ. ಪೊಲೀಸ್ ಇಲಾಖೆ ಮಹಾನಗರ ಪಾಲಿಕೆ ಸಹಯೋಗದಲ್ಲಿ ಜಂಟಿಯಾಗಿ ಪರಿಶೀಲನೆ ನಡೆಸಲಾಗುವುದು–ವಿನಾಯಕ ಹಟ್ಟಿಕಾರ ಹೆಚ್ಚುವರಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.