ಹುಬ್ಬಳ್ಳಿ: ನಗರ ಅಭಿವೃದ್ಧಿಪಡಿಸಿ, ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸ್ಮಾರ್ಟ್ ಸಿಟಿ ಯೋಜನೆಯಡಿ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ, ಆವುಗಳ ಗುಣಮಟ್ಟದ ಬಗ್ಗೆ ಆಕ್ಷೇಪಣೆಗಳಿವೆ.
ಒಟ್ಟು 63 ಪೈಕಿ 40 ಕಾಮಗಾರಿಗಳನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸಲಾಗಿದೆ. ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಮಾಡದೆ ಪಾಲಿಕೆ ಯೋಜನೆಗಳನ್ನು ಹಸ್ತಾಂತರ ಮಾಡಿಕೊಂಡಿದೆ ಎಂಬ ಆರೋಪಗಳಿವೆ.
ಕೆಲ ಯೋಜನೆಗಳು ಉದ್ಘಾಟನೆಯಾಗಿದ್ದರೂ ಸಾರ್ವಜನಿಕರ ಬಳಕೆಗೆ ಮುಕ್ತವಾಗಿಲ್ಲ. ಇನ್ನೂ ಕೆಲವು ಯೋಜನೆಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ. ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದರೂ ನಿರುಪಯುಕ್ತ ಆಗಿವೆ. ಕೆಲ ಕಾಮಗಾರಿಗಳು ಕಳಪೆಯಾಗಿವೆ ಎಂದು ಆರೋಪಿಸಿ ಸಂಘ ಸಂಸ್ಥೆಗಳು ಲೋಕಾಯುಕ್ತಕ್ಕೆ ದೂರು ಸಲ್ಲಿಸಿವೆ.
‘ಜನತಾ ಬಜಾರ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಈವರೆಗೂ ಮಳಿಗೆಗಳ ಹಂಚಿಕೆಯಾಗಿಲ್ಲ. ಕಟ್ಟಡ ನಿರ್ವಹಣೆ ಇಲ್ಲದೆ ಗಬ್ಬೆದ್ದು ನಾರುತ್ತಿದೆ. ನೂತನ ಸಂಕೀರ್ಣದಲ್ಲಿ ವ್ಯಾಪಾರ ಆರಂಭಿಸಿ, ಉತ್ತಮ ಬದುಕು ಕಟ್ಟಿಕೊಳ್ಳುವ ಕಿರಾಣಿ ಮತ್ತು ಬೀದಿ ವ್ಯಾಪಾರಿಗಳ ಕನಸು ಇಂದಿಗೂ ನನಸಾಗಿಲ್ಲ’ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಮಳಿಗೆ ಹಂಚಿಕೆ ಮಾಡುವಂತೆ ಎರಡು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ವ್ಯಾಪಾರಿಗಳು, ಮಳೆ, ಚಳಿಯಲ್ಲಿ ಹೊರಗಡೆ ವ್ಯಾಪಾರ ಮಾಡಬೇಕಿದೆ. ಕಟ್ಟಡದಲ್ಲಿ ವ್ಯಾಪಾರಿಗಳು, ಗ್ರಾಹಕರಿಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಬಿಡಾಡಿ ದನಗಳ ಆವಾಸ ಸ್ಥಾನವಾಗಿದೆ ಎನ್ನುತ್ತಾರೆ ವ್ಯಾಪಾರಿ ರಫಿಕ್‌ಸಾಬ್ ಸೌದಾಗರ.
ಗಣೇಶ ಪೇಟೆಯ ಮೀನು ಮಾರುಕಟ್ಟೆ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಕಟ್ಟಡ ಬಳಕೆಗೂ ಮುನ್ನವೆ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಅಲ್ಲಿ ಅಳವಡಿಸಿದ್ದ ಪೈಪ್, ನಳ ಸೇರಿದಂತೆ ಹಲವು ವಸ್ತುಗಳು ಕಳವಾಗಿವೆ ಎನ್ನುತ್ತಾರೆ ವ್ಯಾಪಾರಿಗಳು.
ನಗರದ ಮಹಾತ್ಮ ಗಾಂಧಿ ಉದ್ಯಾನದಲ್ಲಿ (ಇಂದಿರಾ ಗಾಜಿನಮನೆ) ಸ್ಮಾರ್ಟ್ ಸಿಟಿ ಯೋಜನೆ ಅಡಿ ₹26.11 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಕಾಮಗಾರಿ ಕಳಪೆಯಾಗಿದೆ ಎಂದು ಸಾಮಾಜಿಕ ಕಾರ್ಯಕರ್ತರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ತನಿಖೆ ಸಹ ನಡೆದಿದೆ.
ಉದ್ಯಾನದಲ್ಲಿನ ಪುಟಾಣಿ ರೈಲು ಉದ್ಘಾಟನೆಯ ದಿನವೇ ಹಳಿ ತಪ್ಪಿತ್ತು. ಆ ನಂತರ ಹಳಿ ಬಿಟ್ಟು ಹೊರಬಂದಿಲ್ಲ. ಸಂಗೀತ ಕಾರಂಜಿ, ಸ್ಕೇಟಿಂಗ್ ಮೈದಾನ, ತಡೆಗೋಡೆ ನಿರ್ಮಾಣ, ಫಜಲ್ ಪಾರ್ಕಿಂಗ್ ಯೋಜನೆಯಲ್ಲಿಯೂ ಕಳಪೆ ಕಾಮಗಾರಿಯಾಗಿದೆ ಎಂಬ ಆರೋಪ ಇದೆ.
ಯೋಜನೆಯ ಉದ್ದೇಶದಂತೆ ಯಾವುದೇ ವೃತ್ತವನ್ನು ಅಭಿವೃದ್ಧಿ ಪಡಿಸಿಲ್ಲ. ಕ್ರೀಡಾ ಸಂಕೀರ್ಣವನ್ನು ನಗರದ ಹೊರವಲಯದಲ್ಲಿ ನಿರ್ಮಿಸಲಾಗುತ್ತಿದೆ. ಅದು ನಗರದಿಂದ ದೂರ ಇರುವ ಕಾರಣ ನಿರುಪಯಕ್ತವಾಗುವ ಸಾಧ್ಯತೆ ಇದೆ ಎಂಬುದು ಕ್ರೀಡಾಪ್ರೇಮಿಗಳ ಆತಂಕ.
ತೋಳನಕೆರೆ, ಇಂದಿರಾ ಗಾಜಿನ ಮನೆ ಉದ್ಯಾನ, ಉಣಕಲ್ ಮತ್ತು ಬೆಂಗೇರಿಯ ಸಂತೆ ಮಾರುಕಟ್ಟೆಯನ್ನು ಯಾರು ನಿರ್ವಹಣೆ ಮಾಡುತ್ತಾರೆ, ಕರ ಸಂಗ್ರಹದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಇ–ಶೌಚಾಲಯಗಳು ನಿರ್ವಹಣೆ ಇಲ್ಲದೆ ಹಾಳಾಗುತ್ತಿವೆ.
‘ಯೋಜನೆ ಆರಂಭಿಸುವಾಗ ಸಾರ್ವಜನಿಕರ ಅಭಿಪ್ರಾಯ, ಸಲಹೆ ಪಡೆದಿಲ್ಲ. ಸ್ಥಳೀಯವಾಗಿ ತಾಂತ್ರಿಕ ಸಮಿತಿ ರಚಿಸಿ, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು’ ಎನ್ನುತ್ತಾರೆ ಮಾಜಿ ಮೇಯರ್ ಪಾಂಡುರಂಗ ಪಾಟೀಲ.
ಕಸ ಸಂಗ್ರಹದ ಮಾಹಿತಿ ದಾಖಲಿಸುವ ಸಲುವಾಗಿ ನಗರದ 1.10 ಲಕ್ಷ ಮನೆಗಳಿಗೆ ಆರ್‌ಎಫ್‌ಐಡಿ (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಟ್ಯಾಗ್ ಅಳವಡಿಸಲಾಗಿತ್ತು. ಇದಕ್ಕಾಗಿ ₹43 ಕೋಟಿ ವೆಚ್ಚಮಾಡಲಾಗಿದೆ. ಎಷ್ಟು ಮನೆಗೆ ಸಂಗ್ರಹಿಸಲಾಗಿದೆ, ಅದಕ್ಕೆ ಅಳವಡಿಸಿದ್ದ ಯಂತ್ರಗಳು ಎಲ್ಲಿವೆ ಎಂಬುದು ಯಾರಿಗೂ ಮಾಹಿತಿ ಇಲ್ಲ ಎಂಬುದು ಮಹಾನಗರ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಅವರ ದೂರು.
ಕಾಮಗಾರಿ ಅವಧಿ ವಿಸ್ತರಣೆ: ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಂಡ ಕಾಮಗಾರಿಗಳು ಪ್ರಸಕ್ತ ವರ್ಷದ ಜೂನ್‌ನಲ್ಲೇ ಮುಗಿಯಬೇಕಿತ್ತು. ಅದನ್ನು 2025 ಮಾರ್ಚ್ 31ರವರೆಗೆ ವಿಸ್ತರಿಸಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆದೇಶ ಹೊರಡಿಸಿದೆ.
ಬಾಕಿ ಇರುವ ಕಾಮಗಾರಿಗಳು ಯೋಜನೆಗಳು; ಮೊತ್ತ ಉಣಕಲ್ ಕೆರೆ ಎರಡನೇ ಹಂತ; ₹36.59 ಕೋಟಿ ಹಳೆ ಬಸ್ ನಿಲ್ದಾಣ; ₹39.63 ಕೋಟಿ ಕ್ರೀಡಾ ಸಂಕೀರ್ಣ; ₹160 ಕೋಟಿ
ಮೂರನೇ ತಂಡದಿಂದ ಪರಿಶೀಲನೆಯಾದ ನಂತರ ಕಾಮಗಾರಿಗಳನ್ನು ಹಸ್ತಾಂತರ ಮಾಡಿಕೊಳ್ಳುವಾಗ ಸಮರ್ಪಕ ಪರಿಶೀಲನೆ ಆಗಬೇಕು. ಇಲ್ಲದಿದ್ದರೆ ಸಾರ್ವಜನಿಕರ ತೆರಿಗೆ ಹಣ ವ್ಯರ್ಥವಾಗುತ್ತದೆ.–ಪಾಂಡುರಂಗ ಪಾಟೀಲ ಮಾಜಿ ಮೇಯರ್
ಕಾಮಗಾರಿಗಳಲ್ಲಿ ಲೋಪವಾಗಿದ್ದರೆ ಡೀಮ್ಡ್ ಹಸ್ತಾಂತರ ಮಾಡಿಕೊಳ್ಳಲು ಬರುವುದಿಲ್ಲ. ಯೋಜನೆಯಡಿ 1 ಸಾವಿರ ಕೋಟಿಯನ್ನು ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ರೀತಿ ಮಾಡಲಾಗಿದೆ–ಈರೇಶ ಅಂಚಟಗೇರಿ ಸದಸ್ಯ ಮಹಾನಗರ ಪಾಲಿಕೆ
ಕೆಲ ಕಾಮಗಾರಿಗಳು ಮೂರು–ನಾಲ್ಕು ವರ್ಷಗಳ ಹಿಂದೆಯೇ ಪೂರ್ಣಗೊಂಡಿದ್ದು ನಿರ್ವಹಣೆ ಇಲ್ಲದೆ ಹಾಳಾಗಿವೆ. ಅವುಗಳನ್ನು ಸರಿಪಡಿಸಿ ಹಸ್ತಾಂತರಿಸಲು ಸ್ಮಾರ್ಟ್ ಸಿಟಿಯವರಿಗೆ ಸೂಚಿಸಲಾಗಿದೆ.–ಈಶ್ವರ ಉಳ್ಳಾಗಡ್ಡಿ ಆಯುಕ್ತ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.