ADVERTISEMENT

ಹುಬ್ಬಳ್ಳಿ | ಪೌರಕಾರ್ಮಿಕರ ಅರೆಬೆತ್ತಲೆ ಪ್ರತಿಭಟನೆ

ನಾಳೆಯಿಂದ ಸ್ವಚ್ಛತೆ ಸ್ಥಗಿತಗೊಳಿಸಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 13:48 IST
Last Updated 20 ಜುಲೈ 2024, 13:48 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಬಳಿ ಪೌರಕಾರ್ಮಿಕರು ಶನಿವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಬಳಿ ಪೌರಕಾರ್ಮಿಕರು ಶನಿವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು, ಪೌರಕಾರ್ಮಿಕರು ಶನಿವಾರ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.

ಸರ್ಕಾರ ಹಾಗೂ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿದ ಪೌರಕಾರ್ಮಿಕರು, ದಲಿತ ವಿರೋಧಿ ನೀತಿಗೆ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ, ಜಿಲ್ಲಾಧಿಕಾರಿ, ರಾಷ್ಟ್ರೀಯ ಮತ್ತು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಆದೇಶ ನೀಡಿದರೂ ಪೌರಕಾರ್ಮಿಕರಿಗೆ  ಶಾಸನಬದ್ಧ ಹಕ್ಕು, ಕಾರ್ಮಿಕ ಕಾಯ್ದೆ ಅಡಿ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ. ಪರಿಶಿಷ್ಟ ಜಾತಿಯ ಪೌರಕಾರ್ಮಿಕರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ಮಹಾನಗರ ಪಾಲಿಕೆಯ ಕಾಯಂ ಪೌರಕಾರ್ಮಿಕರು ಸೋಮವಾರದಿಂದ ಸಾಮೂಹಿಕವಾಗಿ ರಜೆ ಹಾಕಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಪೌರಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಅವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಲಿದ್ದಾರೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರ ಮತ್ತು ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿಜಯ ಎಂ. ಗುಂಟ್ರಾಳ ಹೇಳಿದರು.

‌ಸ್ಥಳೀಯ ದಲಿತ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು, ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ಈ ಹಿಂದೆ ನೀಡಿದ ಭರವಸೆಯಂತೆ ಬೇಡಿಕೆಗಳ ಈಡೇರಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಹಾನಗರ ಪಾಲಿಕೆಯ ಕಾಯಂ ಪೌರಕಾರ್ಮಿಕರ ಸಂಘ ಮತ್ತು ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

ಗಾಳೆಪ್ಪ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ಕನಕಪ್ಪ ಕೋಟಬಾಗಿ, ರೇಣುಕಾ ನಾಗರಾಳ, ಶರಣಪ್ಪ ಅಮರಾವತಿ, ತಾಯಪ್ಪ ಹಾಳಾಕೇರಿ, ಸುನೀಲ ದೊಡ್ಡಮನಿ, ಶರೀಫ್ ಮಸರಕಲ್, ತಾಯಪ್ಪ ಕಾಣೆಕಲ್, ವೆಂಕಟೇಶ ಪಾಲವಾಯಿ, ಶಾಂತವ್ವ ಚುರಮುರಿ, ನಾಗಮ್ಮ ಕರೆಪಾತ್, ದೇವಕ್ಕ ಕಟ್ಟಿಮನಿ, ಸುಮಿತ್ರಾ ಕೊಂಡಪಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.