ADVERTISEMENT

ಧಾರವಾಡ: ಹಳ್ಳಿಗೂ ಜನೌಷಧ ಕೇಂದ್ರ ವಿಸ್ತರಣೆಯಾಗಲಿ

ಜಿಲ್ಲೆಯಲ್ಲಿ 43 ಜನೌಷಧಿ ಕೇಂದ್ರ; ಬಿಪಿ, ಮಧುಮೇಹ, ಹೃದ್ರೋಗ ಸಂಬಂಧಿ ಔಷಧಿಗಳಿಗೆ ಬೇಡಿಕೆ

ಎಲ್‌.ಮಂಜುನಾಥ
Published 18 ನವೆಂಬರ್ 2024, 4:49 IST
Last Updated 18 ನವೆಂಬರ್ 2024, 4:49 IST
<div class="paragraphs"><p>ಹುಬ್ಬಳ್ಳಿಯ ಕಿಮ್ಸ್‌ (ಕೆಎಂಸಿ–ಆರ್‌ಐ) ಆವರಣದಲ್ಲಿನ ಜನೌಷಧಿ ಕೇಂದ್ರದಲ್ಲಿ ಸಾರ್ವಜನಿಕರು ಜನೌಷಧಿ ಖರೀದಿಸುತ್ತಿರುವುದು</p></div>

ಹುಬ್ಬಳ್ಳಿಯ ಕಿಮ್ಸ್‌ (ಕೆಎಂಸಿ–ಆರ್‌ಐ) ಆವರಣದಲ್ಲಿನ ಜನೌಷಧಿ ಕೇಂದ್ರದಲ್ಲಿ ಸಾರ್ವಜನಿಕರು ಜನೌಷಧಿ ಖರೀದಿಸುತ್ತಿರುವುದು

   

ಪ್ರಜಾವಾಣಿ ಚಿತ್ರ: ಗುರು ಹಬೀಬ 

ಹುಬ್ಬಳ್ಳಿ: ಕೈಗೆಟುಕುವ ದರದಲ್ಲಿ ಔಷಧಿ ಹಾಗೂ ಶಸ್ತ್ರ ಚಿಕಿತ್ಸಾ ಪರಿಕರಗಳನ್ನು ಬಡವರಿಗೆ ತಲುಪಿಸುವ ಉದ್ದೇಶದಿಂದ ಆರಂಭವಾಗಿರುವ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು (ಪಿಎಂಬಿಜೆಪಿ) ಧಾರವಾಡ ಜಿಲ್ಲೆಯಲ್ಲಿ ನಗರ, ಪಟ್ಟಣ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿವೆ. ಇಂದಿಗೂ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಹುತೇಕ ಬಡವರು ಔಷಧಿಗಾಗಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಖಾಸಗಿ ಔಷಧಿ ಅಂಗಡಿಗಳನ್ನು ಅವಲಂಬಿಸಿದ್ದಾರೆ.

ADVERTISEMENT

ಧಾರವಾಡ ಜಿಲ್ಲೆಯಲ್ಲಿ ಪ್ರಸ್ತುತ 43 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಿದ್ದು, ಪ್ರತಿ ಕೇಂದ್ರದಲ್ಲೂ ಬಿಪಿ, ಮಧುಮೇಹ, ಹೃದ್ರೋಗ, ನರರೋಗ, ಮೂತ್ರಪಿಂಡ ಸಂಬಂಧಿ ಕಾಯಿಲೆ ಸೇರಿದಂತೆ ಸಹಜವಾಗಿ ಬರುವ ಕೆಮ್ಮು, ಜ್ವರ, ಶೀತ, ನೆಗಡಿ, ತಲೆನೋವು ಹಾಗೂ ಮೈಕೈನೋವು ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದ ಔಷಧಿಗಳು ದೊರೆಯುತ್ತವೆ. ಆದರೆ, ಇವೆಲ್ಲವೂ ನಗರ, ಪಟ್ಟಣ ಪ್ರದೇಶಗಳ ಜನರಿಗೆ ಸೀಮಿತವಾಗಿದ್ದು, ಜಿಲ್ಲೆಯ ಕೆಲ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬಂದೇ ಜನೌಷಧಿಗಳನ್ನು ಖರೀದಿಸುವ ಸ್ಥಿತಿ ಇದೆ. 

‘ಜಿಲ್ಲೆಯ ಜನೌಷಧಿ ಕೇಂದ್ರಗಳಲ್ಲಿ ಬಿಪಿ, ಮಧುಮೇಹ, ಹೃದ್ರೋಗ, ನರರೋಗ ಹಾಗೂ ಮೂತ್ರಪಿಂಡ ಸಂಬಂಧಿ ಸೇರಿ 2 ಸಾವಿರಕ್ಕೂ ಹೆಚ್ಚು ಜನೌಷಧಿ ಹಾಗೂ 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯ ಪರಿಕರಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ. ಇದರೊಂದಿಗೆ ರೋಗಿಗಳಿಗೆ ಅಗತ್ಯ ಹಾಗೂ ಬೇಡಿಕೆಗೆ ಅನುಗುಣವಾಗಿ ಜನೌಷಧಿ ಕೇಂದ್ರಗಳಿಗೆ ಔಷಧಿಗಳನ್ನು ಪೂರೈಸಲಾಗುತ್ತಿದೆ‘ ಎಂದು ಜನೌಷಧಿ ಕೇಂದ್ರಗಳಿಗೆ ಔಷಧಿ ಪೂರೈಸುತ್ತಿರುವ ಮಾರ್ಕೆಟಿಂಗ್‌ ಅಧಿಕಾರಿಗಳು ಹೇಳುತ್ತಾರೆ. ಆದರೆ, ನಗರದಲ್ಲಿನ ಕೆಲ ಜನೌಷಧಿ ಕೇಂದ್ರಗಳಲ್ಲಿ ಇಂದಿಗೂ ಹೃದ್ರೋಗ, ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಔಷಧಿಗಳು ಕೊರತೆ ಇದೆ’ ಎಂಬುದು ಜನರ ದೂರು.

‘ಹೃದ್ರೋಗ, ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣಕ್ಕೆ ಸಂಬಂಧಿಸಿದ ಔಷಧಿಯನ್ನು ನಿರಂತರವಾಗಿ, ಸಕಾಲಕ್ಕೆ ತೆಗೆದುಕೊಳ್ಳಬೇಕು. ಆದರೆ, ಜನೌಷಧಿ ಕೇಂದ್ರಗಳಲ್ಲಿ ಇವುಗಳ ಕೊರತೆ ಇದೆ. ಸ್ಟಾಕ್‌ ಇಲ್ಲ. ಬರಬೇಕು ಎನ್ನುತ್ತಾರೆ. ಅನಿವಾರ್ಯವಾಗಿ ಜೆನೆರಿಕ್‌ ಕೇಂದ್ರ ಅಥವಾ ಖಾಸಗಿ ಮೆಡಿಕಲ್‌ಗಳಲ್ಲಿ ಹೆಚ್ಚಿನ ಹಣ ಕೊಟ್ಟು ಖರೀದಿಸುತ್ತಿದ್ದೇವೆ‘ ಎಂದು ನಗರದ ಕಿಮ್ಸ್‌ (ಕೆಎಂಸಿ–ಆರ್‌ಐ) ಆವರಣದಲ್ಲಿನ ಜನೌಷಧಿ ಕೇಂದ್ರದಲ್ಲಿ ಮಾತ್ರೆ ಖರೀದಿಸುತ್ತಿದ್ದ ರಾಯಾಪುರದ ರಾಮಪ್ಪ ನೋಟದವರ್‌ ಹೇಳಿದರು. 

‘ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಸಿಗುವ ‘ಸುವಿಧಾ ಸ್ಯಾನಿಟರಿ ನ್ಯಾಪಕಿನ್‌’ ಕೊರತೆಯೂ ಇದೆ. ಅಗತ್ಯವಿದ್ದಾಗ ತಕ್ಷಣ ಸಿಗುವುದಿಲ್ಲ. ಪ್ರತಿ ಕೇಂದ್ರದಲ್ಲಿಯೂ ಹೆಚ್ಚು ಹೆಚ್ಚು ಸುವಿಧಾ ಸ್ಯಾನಿಟರಿ ನ್ಯಾಪಿಕಿನ್‌ಗಳು ಸಿಗುವಂತೆ ಮಾಡಬೇಕು‘ ಎಂದು ಮಹಿಳೆಯೊಬ್ಬರು ಒತ್ತಾಯಿಸಿದರು. 

ಬೇಡಿಕೆಗೆ ತಕ್ಕಂತೆ ಪೂರೈಕೆ:

‘ಜಿಲ್ಲೆಯಲ್ಲಿನ ಎಲ್ಲಾ ಜನೌಷಧಿ ಕೇಂದ್ರಗಳಲ್ಲಿಯೂ ಜನರಿಗೆ, ರೋಗಿಗಳಿಗೆ ಅವಶ್ಯ, ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಜನೌಷಧಿ ಹಾಗೂ ಶಸ್ತ್ರಚಿಕಿತ್ಸಾ ಪರಿಕರಗಳು ರಿಯಾಯಿತಿ ದರದಲ್ಲಿ ಮಾರಲಾಗುತ್ತಿದೆ. ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಜನೌಷಧಿ ಕೇಂದ್ರಗಳನ್ನು ತೆರೆದಲ್ಲಿ, ಅಲ್ಲಿಗೂ ಕಡಿಮೆ ದರದಲ್ಲಿ ಅಗತ್ಯ ಔಷಧಿಗಳನ್ನು ಪೂರೈಸಲಾಗುವುದು’ ಎನ್ನುತ್ತಾರೆ ಜನೌಷಧಿ ಕೇಂದ್ರದ ಹುಬ್ಬಳ್ಳಿ ವಲಯದ ಸಹಾಯಕ ವ್ಯವಸ್ಥಾಪಕ ವೇಮು ನಾಗರಾಜು ಹಾಗೂ ಮಾರ್ಕೆಟಿಂಗ್ ಅಧಿಕಾರಿ ಶಿವಕುಮಾರ ಎನ್‌. 

ಸಾಲ ಸೌಲಭ್ಯ ಶೀಘ್ರ: 

‘ಜನೌಷಧ ಕೇಂದ್ರಗಳನ್ನು ಯಾರು ಬೇಕಾದರೂ ತೆರೆಯಬಹುದು. ಆದರೆ, ಡಿಪ್ಲೊಮಾ ಇನ್ ಫಾರ್ಮಸಿ (ಡಿ. ಫಾರ್ಮಾ), ಬಿ ಫಾರ್ಮ್‌ ಕೋರ್ಸ್‌ ಅಧ್ಯಯನ ಮಾಡಿದವರನ್ನು ನೇಮಿಸಿಕೊಳ್ಳಬೇಕು. ಕೇಂದ್ರ ತೆರೆಯುವವರ ಕೈಗಳನ್ನು ಬಲಪಡಿಸಲು ಹಾಗೂ ಅವರ ವ್ಯವಹಾರಿಕ ಜಾಲದ ವಿಸ್ತರಣೆಗೆ ನೆರವಾಗಲು ‘ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ ಆಫ್ ಇಂಡಿಯಾ‘ (ಎಸ್‌ಐಡಿಬಿಐ) ವತಿಯಿಂದ ಸಾಲ ಸೌಲಭ್ಯ ಸಹ ದೊರೆಯುತ್ತದೆ ಎಂದು ಈಚೆಗೆ ಕೇಂದ್ರ ಆರೋಗ್ಯ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಮಾನ್ಸುಖ್‌ ಮಾಂಡವಿಯಾ ಘೋಷಿಸಿದ್ದಾರೆ. ಶೀಘ್ರದಲ್ಲಿಯೆ ಅದು ಅನುಷ್ಠಾನಕ್ಕೆ ಬರಲಿದೆ. ಆಸಕ್ತರು ಮಾಹಿತಿಗೆ ಜಾಲತಾಣ: https://janaushadhi.gov.in/online_registration.aspx ಸಂಪರ್ಕಿಸಬಹುದು’ ಎನ್ನುತ್ತಾರೆ ಜನೌಷಧಿ ಕೇಂದ್ರದ ಮಾರ್ಕೆಟಿಂಗ್ ಅಧಿಕಾರಿ ಶಿವಕುಮಾರ ಎನ್‌. 

ಹೃದ್ರೋಗ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡಕ್ಕೆ ಸಂಬಂಧಿಸಿದ ಜನೌಷಧ ತಕ್ಷಣಕ್ಕೆ ಸಿಗುವುದಿಲ್ಲ. ಅಗತ್ಯಕ್ಕೆ ತಕ್ಕಂತೆ ಪೂರೈಕೆ ಆಗಬೇಕು. 
ವೀಣಾ ಕುಮಾರಿ ವಿದ್ಯಾರ್ಥಿನಿ.
ಮೆಡಿಸಿನ್‌ ಹಾಗೂ ಶಸ್ತ್ರಚಿಕಿತ್ಸಾ ಪರಿಕರ ಕೊರತೆಯಾದಾಗ ತಕ್ಷಣ ಡಿಪೊದಿಂದ ತರಿಸಲಾಗುತ್ತದೆ. ಜನೌಷಧಿ ಕೇಂದ್ರವನ್ನು 24X7 ತೆರೆಯುವ ಉದ್ದೇಶವಿದೆ. ಆದರೆ ವಹಿವಾಟು ಕಡಿಮೆಯಿದೆ. ಭದ್ರತೆ ಸಮಸ್ಯೆಯೂ ಇದೆ.
–ಸಂತೋಷ್‌ ಜನೌಷಧಿ ಕೇಂದ್ರದ ಮಾಲೀಕ ಕೆಎಂಸಿ–ಆರ್‌ಐ ಆವರಣ.
ಮಧುಮೇಹಕ್ಕೆ ಸಂಬಂಧಿಸಿದ ಇನ್ಸುಲಿನ್ ಚುಚ್ಚುಮದ್ದು ಸೇರಿದಂತೆ ನಮಗೆ ಬೇಕಾದ ಔಷಧಿಗಳು ಜನೌಷಧಿ ಕೇಂದ್ರದಲ್ಲಿ ಸಿಗಲ್ಲ. ಸ್ಟಾಕ್‌ ಇಲ್ಲ ಎನ್ನುತ್ತಾರೆ. ಎಲ್ಲಾ ಔಷಧಿಗಳನ್ನು ಸಕಾಲಕ್ಕೆ ಪೂರೈಸಬೇಕು.
–ರಂಗಾಬುದ್ಧಿ ಹಿರಿಯ ನಾಗರಿಕ 
ಅರ್ಜಿ ಸಲ್ಲಿಸಿದರೆ ಪರವಾನಗಿ:ಅಜಯ್‌
‘ಧಾರವಾಡ ಜಿಲ್ಲೆಯಲ್ಲಿ ಒಟ್ಟು 43 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಿವೆ.  ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚು ಜನೌಷಧಿ ಕೇಂದ್ರಗಳನ್ನು ತೆರೆಯಲು ನಿಯಮದನ್ವಯ ಆಸಕ್ತರು ಅರ್ಜಿ ಸಲ್ಲಿಸಿದರೆ ಪರವಾನಗಿ ನೀಡಲಾಗುವುದು‘ ಎನ್ನುತ್ತಾರೆ ಹುಬ್ಬಳ್ಳಿ ವಲಯದ ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಅಜಯ್‌ ಮುದಗಲ್‌ ಹೇಳುತ್ತಾರೆ.
‘ನಿತ್ಯ ₹10 ಲಕ್ಷ ವಹಿವಾಟು’
‘ಜಿಲ್ಲೆಯಲ್ಲಿನ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ನಿತ್ಯ ಅಂದಾಜು ₹10 ಲಕ್ಷ ವಹಿವಾಟು ನಡೆಯುತ್ತಿದೆ. ಇದರಲ್ಲಿ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಜನೌಷಧಿ ಕೇಂದ್ರ ನವನಗರ ಗೋಕುಲ ರಸ್ತೆ ಕೇಶ್ವಾಪುರ ಕೋರ್ಟ್‌ ಸರ್ಕಲ್‌ ಬಳಿಯಲ್ಲಿನ ಜನೌಷಧಿ ಕೇಂದ್ರಗಳಲ್ಲಿ ಹೆಚ್ಚು ಜನೌಷಧಿಗಳು ಮಾರಾಟವಾಗುತ್ತಿವೆ’ ಎನ್ನುತ್ತಾರೆ ಜನೌಷಧಿ ಕೇಂದ್ರದ ಹುಬ್ಬಳ್ಳಿ ವಲಯದ ಸಹಾಯಕ ವ್ಯವಸ್ಥಾಪಕ ವೇಮು ನಾಗರಾಜು.
‘24X7 ತೆರೆದರೆ ಅನುಕೂಲ’
‘ಸರ್ಕಾರಿ ಆಸ್ಪತ್ರೆಗಳ ಆವರಣ ಬಸ್‌ನಿಲ್ದಾಣ ರೈಲ್ವೆ ನಿಲ್ದಾಣ ಸೇರಿದಂತೆ ಜನದಟ್ಟಣೆ ಪ್ರದೇಶಗಳಲ್ಲಿ ಜನೌಷಧಿ ಕೇಂದ್ರಗಳು ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದರೆ ರೋಗಿಗಳಿಗೆ ಅನುಕೂಲವಾಗುತ್ತದೆ. ವೈದ್ಯರು ಚೀಟಿ ಬರೆದು ಹೊರಗಡೆಯಿಂದ ತರುವಂತೆ ಜನರಿಗೆ ಹೇಳಬಾರದು. ಇದರಿಂದ ಬಡ ಮಧ್ಯಮ ವರ್ಗದ ರೋಗಿಗಳ ಸಂಬಂಧಿಕರು ರಾತ್ರಿ ವೇಳೆ ಔಷಧಕ್ಕಾಗಿ ಅಲೆಯುವುದು ತಪ್ಪುತ್ತದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು‘ ಎನ್ನುತ್ತಾರೆ ಹೊಸೂರು ನಿವಾಸಿ ಗೃಹಿಣಿ ಕಮಲಾದೇವಿ.  ಗುಣಮಟ್ಟದ ಜನೌಷಧಿ: ಅರಿವು ಅವಶ್ಯ ‘ಜನೌಷಧಿಗಳು ಬ್ರಾಂಡೆಡ್‌ ಕಂಪೆನಿಯ ಔಷಧಿಯಷ್ಟೇ ಉತ್ತಮ ಗುಣಮಟ್ಟ ರೋಗನಿವಾರಕ ಸಾಮರ್ಥ್ಯ ಹೊಂದಿರುತ್ತವೆ. ಶೇ 30ರಿಂದ ಶೇ 70ರ ವರೆಗೆ ರಿಯಾಯಿತಿ ದರದಲ್ಲಿಯೂ ದೊರೆಯುತ್ತವೆ. ಆದರೆ ಕೆಲ ವೈದ್ಯರು ಈ ಜನೌಷಧಿಗಳನ್ನು ಖರೀದಿಸುವಂತೆ ತಮ್ಮ ಸಲಹಾ ಚೀಟಿಯ ಮೂಲಕ ಸೂಚಿಸುತ್ತಿಲ್ಲ. ಹೆಚ್ಚು ಕಮಿಷನ್‌ ದೊರೆಯುವಂತಹ ಬ್ರಾಂಡೆಡ್‌ ಕಂಪನಿಗೆ ಸಂಬಂಧಿಸಿದ ಔಷಧಿಗಳನ್ನೇ ಖರೀದಿಸಿ ತಂದು ತೋರಿಸುವಂತೆ  ಹೇಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಜನೌಷಧಿಗಳ ಬಗ್ಗೆ ಗ್ರಾಮೀಣ ಪ್ರದೇಶದ ಜನರಲ್ಲಿ ಇನ್ನೂ ಹೆಚ್ಚಿನ ಅರಿವು ಮೂಡಿಸುವುದು ಅವಶ್ಯವಿದೆ‘ ಎನ್ನುತ್ತಾರೆ ಧಾರವಾಡದ ಜೆನೆರಿಕ್ ಮೆಡಿಸಿನ್‌ ಅಂಗಡಿಯ ಮಾಲೀಕರೊಬ್ಬರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.