ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ‘ಪ್ರಧಾನಮಂತ್ರಿ ಕೃಷಿ ಸಿಂಚಾಯಿ’ ಯೋಜನೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 2023–24ರ ಸಾಲಿನಲ್ಲಿ 11,143 ಜನ ರೈತರು ಅರ್ಜಿ ಸಲ್ಲಿಸಿದ್ದು, ಇವರಲ್ಲಿ 8,009 ರೈತರಿಗೆ ಯೋಜನೆಯ ಲಾಭ ದಕ್ಕಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದು ಅತ್ಯಧಿಕವಾಗಿದೆ.
ಉತ್ತಮ ಇಳುವರಿ ಪಡೆಯಲು ಹಾಗೂ ಬೆಳೆಗೆ ಆಗುವ ನೀರಿನ ತೊಂದರೆ ನೀಗಿಸಲು 2015ರಲ್ಲಿ ’ಪ್ರಧಾನಮಂತ್ರಿ ಕೃಷಿ ಸಿಂಚಾಯಿ‘ಯೋಜನೆ ಜಾರಿಗೆ ತರಲಾಗಿದೆ. ಯೋಜನೆಯ ಲಾಭ ಪಡೆಯುತ್ತಿರುವ ರೈತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
ಕೃಷಿ ಸಿಂಚಾಯಿ ಯೋಜನೆಯ ಸೂಕ್ಷ್ಮ ನೀರಾವರಿ ವಿಭಾಗದಲ್ಲಿ ಎರಡು ರೀತಿಯ ಲಾಭ ಪಡೆಯಬಹುದು. ತುಂತುರು ನೀರಾವರಿ (ಸ್ಪ್ರಿಂಕ್ಲರ್) ಘಟಕ, ಹನಿ ನೀರಾವರಿ (ಡ್ರಿಪ್ ಇರಿಗೇಷನ್) ಘಟಕ. ಇದು ರೈತರು ಹೊಂದಿರುವ ಭೂಮಿ, ಬೆಳೆಯುವ ಬೆಳೆ ಮೇಲೆ ಅವಲಂಬಿತವಾಗಿರುತ್ತದೆ.
’ಹೊಸ ಮಾರ್ಗಸೂಚಿ ಪ್ರಕಾರ ಎರಡು ಹೆಕ್ಟೇರ್ ಭೂಮಿ ಹೊಂದಿರುವ ಎಲ್ಲ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕ ಅಳವಡಿಸಲು ಶೇ 90ರಷ್ಟು ಸಬ್ಸಿಡಿ ನೀಡಲಾಗುವುದು. ಸಣ್ಣ, ಅತಿ ಸಣ್ಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರು ಎರಡು ಹೆಕ್ಟೇರ್ ಭೂಮಿಯಲ್ಲಿ ಹನಿ ನೀರಾವರಿ ಘಟಕಗಳನ್ನು ಅಳವಡಿಸಲು ಶೇ 90ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಶೇ 10ರಷ್ಟು ಹಣವನ್ನು ರೈತರು ತುಂಬಬೇಕು. ಎರಡಕ್ಕಿಂತ ಹೆಚ್ಚು ಹೆಕ್ಟೇರ್ ಭೂಮಿ ಹೊಂದಿರುವ ರೈತರಿಗೆ ಶೇ 45ರಷ್ಟು ಸಬ್ಸಿಡಿ ನೀಡಲಾಗುವುದು‘ ಎಂದು ಹುಬ್ಬಳ್ಳಿ ತಾಲ್ಲೂಕಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ತೆಂಬದ ಮಾಹಿತಿ ನೀಡಿದರು.
‘ಈ ಯೋಜನೆಯ ಲಾಭ ಪಡೆಯಲು ರೈತರು ಕೃಷಿ ಭೂಮಿ ಹೊಂದಿದ್ದು, ಹೊಲದಲ್ಲಿ ಕೊಳವೆಬಾವಿ, ತೆರೆದ ಬಾವಿ ಇದ್ದು ಪ್ರಮಾಣಪತ್ರ ಹೊಂದಿರಬೇಕು. ಕಡ್ಡಾಯವಾಗಿ ಎಫ್‌ಐಡಿ ಆಗಿರಬೇಕು, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸಂಖ್ಯೆ, ಪಹಣಿ ಪತ್ರ ಹಾಗೂ ಕಂಪನಿಯಿಂದ ತಮ್ಮ ಹೊಲದಲ್ಲಿ ತುಂತುರು ನೀರಾವರಿ ಘಟಕ ಹಾಗೂ ಹನಿ ನೀರಾವರಿ ಘಟಕಗಳನ್ನು ಅಳವಡಿಸಿಕೊಂಡ ಪ್ರಮಾಣಪತ್ರಗಳನ್ನು ತಮ್ಮ ವ್ಯಾಪ್ತಿಯ ರೈತಸಂಪರ್ಕ ಕೇಂದ್ರದಲ್ಲಿ ನೀಡಿದರೆ, ಅಲ್ಲಿಯ ಅಧಿಕಾರಿಗಳೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುತ್ತಾರೆ. ಪ್ರತಿ ಜಿಲ್ಲೆಯಲ್ಲಿ ಆಯ್ದ 12ರಿಂದ 15 ವಿವಿಧ ಕಂಪನಿಯವರು ಪೈಪ್ ಸರಬರಾಜು ಮಾಡುತ್ತಾರೆ. ಕೃಷಿ ಅಧಿಕಾರಿಗಳು ಪರಿಶೀಲಿಸಿ, ನೇರವಾಗಿ ಪೈಪ್ ಸರಬರಾಜು ಮಾಡುವ ಕಂಪನಿಗೆ ಹಣ ನೀಡುತ್ತಾರೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಪೃಥ್ವಿ ಕೆ., ಮಾಹಿತಿ ನೀಡಿದರು.
’ತುಂತುರು ಘಟಕ ಅಳವಡಿಸಿಕೊಳ್ಳುವವರಿಗೆ ₹20 ಸಾವಿರದವರೆಗೆ ಹಾಗೂ ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳುವವರಿಗೆ ₹ 1 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ‘ ಎಂದು ಅವರು ಹೇಳಿದರು.
‘ಒಮ್ಮೆ ಅರ್ಜಿ ಹಾಕಿದ ರೈತ ಪುನಃ ಏಳು ವರ್ಷ ಅರ್ಜಿ ಸಲ್ಲಿಸುವಂತಿಲ್ಲ. ಪ್ರತಿ ವರ್ಷ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದರೆ ಆಯಾ ವರ್ಷದ ಕ್ರಿಯಾಯೋಜನೆಗೆ ಬಿಡುಗಡೆ ಮಾಡಿದ ಹಣದ ಆಧಾರದ ಮೇಲೆ ಹಾಗೂ ಮೀಸಲಾತಿ ಆದ್ಯತೆ ಮೇರೆಗೆ ರೈತರನ್ನು ಆಯ್ಕೆ ಮಾಡಲಾಗುತ್ತದೆ. ಉಳಿದ ರೈತರಿಗೆ ಮುಂದಿನ ಕ್ರಿಯಾ ಯೋಜನೆಯಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ‘ ಎಂದು ಅವರು ತಿಳಿಸಿದರು.
’2024–25ನೇ ಸಾಲಿನಲ್ಲಿ 560 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಯೋಜನೆ ಅಳವಡಿಸುವ ಗುರಿ ಹೊಂದಿದ್ದು, ಅದಕ್ಕಾಗಿ ₹6.60 ಕೋಟಿ ಅನುದಾನ ದೊರೆಯಲಿದೆ‘ ಎಂದು ತಿಳಿಸಿದರು.
ಕೃಷಿ ಸಿಂಚಾಯಿ ಯೋಜನೆಯಿಂದ ತುಂಬ ಅನುಕೂಲವಾಗಿದೆ. ಮಳೆ ಬಾರದಿದ್ದಾಗ ಈ ಯೋಜನೆಯಡಿ ಅಳವಡಿಸಿಕೊಂಡ ತುಂತುರು ನೀರಾವರಿ ಘಟಕದ ಮೂಲಕ ಉತ್ತಮ ಇಳುವರಿ ಪಡೆದಿದ್ದೇವೆಗಿರಿಮಲ್ಲಯ್ಯ ಉಮಚಗಿಮಠ ರೈತ ಹೆಬ್ಬಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.