ADVERTISEMENT

ಹುಬ್ಬಳ್ಳಿ | ತಂತ್ರಾಂಶ ಬದಲು: ಹಣ ಜಮೆ ವಿಳಂಬ

ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲೆಯಲ್ಲಿ 12,189 ಅರ್ಜಿ ಸಲ್ಲಿಕೆ

ಗೌರಮ್ಮ ಕಟ್ಟಿಮನಿ
Published 12 ಜೂನ್ 2024, 5:51 IST
Last Updated 12 ಜೂನ್ 2024, 5:51 IST
   

ಹುಬ್ಬಳ್ಳಿ: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ 2023ರ ಏಪ್ರಿಲ್‌ನಿಂದ 2024ರ ಜೂನ್‌ವರೆಗೆ ಜಿಲ್ಲೆಯಲ್ಲಿ 12,189 ಅರ್ಜಿ ಸಲ್ಲಿಕೆಯಾಗಿದೆ. ತಂತ್ರಾಂಶ (ಸಾಫ್ಟ್‌ವೇರ್) ಬದಲಾವಣೆ ಮತ್ತು ಚುನಾವಣಾ ನೀತಿ ಸಂಹಿತೆ ಜಾರಿ ಆಗಿದ್ದರಿಂದ 7,217 ಜನರ ಖಾತೆಗೆ ಹಣ ಜಮೆ ಆಗಬೇಕಿದೆ.

ಮೊದಲ ಬಾರಿಗೆ ಗರ್ಭಿಣಿಯಾದವರು 7,582 ಅರ್ಜಿ ಸಲ್ಲಿಸಿದ್ದು, 2,595 ಜನರ ಖಾತೆಗೆ ಹಣ ಜಮೆಯಾಗಿದೆ. ಎರಡನೇ ಮಗು ಪಡೆದ 4,607 ಮಹಿಳೆಯರು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 2,372 ಜನರ ಖಾತೆಗೆ ಹಣ ಜಮೆ ಆಗಿದೆ. ಈವರೆಗೂ ಒಟ್ಟು 4,967 ಜನರ ಖಾತೆಗೆ ₹2.20 ಕೋಟಿ ಹಣ ಜಮೆಯಾಗಿದೆ.

ಮೊದಲ ಬಾರಿಗೆ ಗರ್ಭಿಣಿಯಾದವರಿಗೆ ₹5 ಸಾವಿರ ಮತ್ತು ಎರಡನೇ ಹೆರಿಗೆ ನಂತರ ಹೆಣ್ಣುಮಗು ಜನಿಸಿದ್ದಲ್ಲಿ ಅವರಿಗೆ ₹6 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತಿದೆ.

ADVERTISEMENT

ಗರ್ಭಿಣಿಯರ ಆರೋಗ್ಯ ವರ್ಧನೆ ಹಾಗೂ ಆರೋಗ್ಯವಂತ ಮಗುವಿನ ಜನನಕ್ಕಾಗಿ ಪ್ರೋತ್ಸಾಹಧನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ 2017ರಲ್ಲಿ ಈ ಯೋಜನೆ ಜಾರಿಗೆ ತಂದಿತ್ತು. 2023ರ ಏಪ್ರಿಲ್‌ನಿಂದ ಎರಡನೇ ಮಗು ಹೆಣ್ಣಾಗಿದ್ದಲ್ಲಿ ಅವರಿಗೂ ಪ್ರೋತ್ಸಾಹಧನ ನೀಡುತ್ತಿದ್ದು, ತಂತ್ರಾಂಶದಲ್ಲಿ ಕೆಲ ಬದಲಾವಣೆ ಮಾಡಲು ಸಮಯ ಬೇಕಾಯಿತು. ಆದ್ದರಿಂದ ಹಣ ಜಮೆ ವಿಳಂಬವಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಧಾರವಾಡ ಜಿಲ್ಲಾ ಉಪನಿರ್ದೆಶಕಿ ಪದ್ಮಾವತಿ ಜಿ ತಿಳಿಸಿದರು.

‘ಮೊದಲ ಬಾರಿಗೆ ಗರ್ಭಿಣಿಯಾದವರಿಗೆ ಮೂರು ಕಂತುಗಳಲ್ಲಿ ₹5ಸಾವಿರ ನೀಡಲಾಗುತ್ತದೆ. ಗರ್ಭಿಣಿಯಾಗಿ 3 ತಿಂಗಳ ನಂತರ ಮೊದಲ ಕಂತಿನಲ್ಲಿ ₹1 ಸಾವಿರ ಹಾಗೂ ಕೆಲ ತಿಂಗಳ ನಂತರ ₹2 ಸಾವಿರ ಮತ್ತು ಮಗು ಜನಿಸಿದ ಮೂರು ತಿಂಗಳೊಳಗೆ 3ನೇ ಕಂತಿನಲ್ಲಿ ₹2 ಸಾವಿರ ನೇರವಾಗಿ ಗರ್ಭಿಣಿ ಖಾತೆಗೆ ಜಮೆ ಮಾಡಲಾಗುತ್ತದೆ. ಎರಡನೇ ಮಗು ಕಡ್ಡಾಯವಾಗಿ ಹೆಣ್ಣು ಮಗುವಾದಲ್ಲಿ ಮಾತ್ರ ಅರ್ಜಿ ಸಲ್ಲಿಸಲಾಗುತ್ತದೆ. ಮೊದಲ ಕಂತಿನಲ್ಲಿ ಮೂರು ಸಾವಿರ ಹಾಗೂ ಎರಡನೇ ಕಂತಿನಲ್ಲಿ 3 ಸಾವಿರದಂತೆ ಒಟ್ಟು ₹6 ಸಾವಿರವನ್ನು ಖಾತೆಗೆ ಜಮೆ ಮಾಡಲಾಗುತ್ತದೆ’ ಎಂದರು.

ಅಂಗನವಾಡಿ ಶಿಕ್ಷಕರು ತಮ್ಮ ವ್ಯಾಪ್ತಿಯಲ್ಲಿನ ಗರ್ಭಿಣಿಯರ ಮಾಹಿತಿಯನ್ನು ಪಿಎಂವೈವೈ ಆಪ್ ಮೂಲಕ ಭರ್ತಿ ಮಾಡುತ್ತಾರೆ. ಎಲ್ಲ ಮಾಹಿತಿ ಸರಿಯಾಗಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರು ಅಪ್ರೂವಲ್ ಮಾಡುತ್ತಾರೆ. ನಂತರ ಹಣ ನೇರವಾಗಿ ಖಾತೆಗೆ ಜಮೆ ಆಗುತ್ತದೆ. ಆದರೆ ಗರ್ಭಿಣಿಯರು ತಮ್ಮದೇ ಬ್ಯಾಂಕ್ ಖಾತೆ ಹೊಂದುವುದು ಕಡ್ಡಾಯ.

ಜಾಗೃತಿ: ಪ್ರತಿ ತಿಂಗಳು ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರನ್ನು ಸೇರಿಸಿ ಪೋಷಣ್‌ ಅಭಿಯಾನದಡಿ  ಪೌಷ್ಟಿಕ ಆಹಾರ ಸೇವನೆ, ಮಗುವಿನ ಆರೋಗ್ಯ ಕಾಳಜಿ ಬಗ್ಗೆ ಸಲಹೆ ನೀಡಲಾಗುತ್ತದೆ. ಜೊತೆಗೆ ಮಾತೃವಂದನಾ ಯೋಜನೆ ಬಗ್ಗೆ ಮಾಹಿತಿ ನೀಡಿ, ಅರ್ಹರಿದ್ದಲ್ಲಿ ಅರ್ಜಿ ಹಾಕುವಂತೆ ತಿಳಿಸಲಾಗುತ್ತದೆ. ಮನೆ ಮನೆಗೂ ಹೋಗಿ ಗರ್ಭಿಣಿಯರ ಮಾಹಿತಿ ಸಂಗ್ರಹಿಸಿ, ಯೋಜನೆ ಬಗ್ಗೆ ತಿಳಿಸಿ, ಅರ್ಜಿ ಹಾಕುತ್ತೇವೆ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಶೋಭಾ ನಾಯಕ.

ಹೆರಿಗೆ ನಂತರವೂ ಅರ್ಜಿ ಸಲ್ಲಿಕೆ

ಬಹುತೇಕ ಗರ್ಭಿಣಿಯರಿಗೆ ‘ಮಾತೃವಂದನಾ’ ಯೋಜನೆ ಬಗ್ಗೆ ಮಾಹಿತಿ ಇರುವುದಿಲ್ಲ. ಅನೇಕರು ತಮ್ಮ ಮೊದಲ ಹೆರಿಗೆ ನಂತರ ಅಂಗನವಾಡಿಗಳಿಗೆ ಭೇಟಿ ನೀಡುತ್ತಾರೆ. ಮಗುವಿಗೆ ಒಂದು ವರ್ಷವಾಗುವರೆಗೂ ಅರ್ಜಿ ಸಲ್ಲಿಸಬಹುದು. ಅವರಿಗೆ ಒಟ್ಟಿಗೆ ಹಣ ಜಮೆ ಆಗುತ್ತದೆ ಆದರೆ ದಾಖಲೆಗಳು ಸರಿಯಾಗಿರಬೇಕು   ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿ ಸಾವಿತ್ರಿ ದೇವರಮನಿ.

ತಂತ್ರಾಂಶ ಸರಿಯಾಗಿದೆ, ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅರ್ಹರ ಖಾತೆಗೆ ಹಣ ಜಮೆ ಮಾಡುವುದು ವಿಳಂಬವಾಗಿದೆ. ಶೀಘ್ರವೇ ಹಣ ಜಮೆ ಮಾಡಲಾಗುವುದು.
ಪದ್ಮಾವತಿ ಜಿ, ಉಪನಿರ್ದೆಶಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.