ADVERTISEMENT

ದಿಕ್ಕು ತಪ್ಪಿಸುವ ಅಭಿಯಾನ ಆರಂಭಿಸಿರುವ ಕಾಂಗ್ರೆಸ್‌: ಪ್ರಲ್ಹಾದ ಜೋಶಿ ಟೀಕೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 15:43 IST
Last Updated 9 ನವೆಂಬರ್ 2024, 15:43 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ವಕ್ಫ್ ವಿವಾದದಲ್ಲಿ ಕಾಂಗ್ರೆಸ್ ಪಕ್ಷ ಜನರ ದಿಕ್ಕು ತಪ್ಪಿಸುವ ಅಭಿಯಾನ ಶುರು ಮಾಡಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ವಿವಾದ, ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವುದು, ಮಿಸ್ ಗೈಡ್ ಮಾಡುವುದು ಕಾಂಗ್ರೆಸ್ ಸಂಸ್ಕೃತಿ ಆಗಿಬಿಟ್ಟಿದೆ. ಜನರಿಗೆ ಮನವರಿಕೆ ಮಾಡುವ ಬದಲು, ಗೊಂದಲ ಸೃಷ್ಟಿ ಮಾಡುತ್ತಾರೆ. ಕಾಂಗ್ರೆಸ್ಸಿಗರ ಡಿಎನ್‌ಎಯಲ್ಲಿಯೇ ಬಂದಿದೆ’ ಎಂದು ಹರಿಹಾಯ್ದರು.

‘ಈಗ ವಕ್ಫ್ ವಿಚಾರದಲ್ಲೂ ಕಾಂಗ್ರೆಸ್ ಜನರನ್ನು ಗೊಂದಲಕ್ಕೀಡು ಮಾಡುತ್ತಿದೆ. ಆದರೆ, ಬಿಜೆಪಿ ಯಾವತ್ತೂ ಸ್ಪಷ್ಟ ನಿಲುವು ತೋರಿದೆ, ವಕ್ಫ್ ಅತಿಕ್ರಮಿಸಲು ಬಿಡುವುದಿಲ್ಲ. ವಕ್ಫ್ ಆಸ್ತಿ ಸಂರಕ್ಷಿಸುವ ಕೆಲಸವನ್ನು ಬಿಜೆಪಿ ಈ ಹಿಂದೆಯೂ ಮಾಡಿದೆ, ಮುಂದೂ ಮಾಡುತ್ತದೆ. ಆದರೆ, ವಕ್ಫ್ ಅಥವಾ ವಕ್ಫ್ ಹೆಸರಲ್ಲಿ ಭೂಗಳ್ಳರು ಬಡವರ, ರೈತರ, ಜನಸಾಮಾನ್ಯರ ಆಸ್ತಿ ಕಬಳಿಸಲು ಹೊರಟರೆ ಬಿಡುವುದಿಲ್ಲ’ ಎಂದು ಎಚ್ಚರಿಸಿದರು.

ADVERTISEMENT

ಅನ್ವರ್ ಮಾನಪ್ಪಾಡಿ ವರದಿ ಪ್ರಕಾರ ಕಾಂಗ್ರೆಸ್ಸಿನ ಅತ್ಯಂತ ಪ್ರಭಾವಿ ನಾಯಕರೇ ವಕ್ಫ್ ನ 29,000 ಎಕರೆ ಆಸ್ತಿ ಹೊಡೆದಿದ್ದಾರೆ. ವಿಧಾನ ಪರಿಷತ್ತಿನ ಹಕ್ಕು ಭಾದ್ಯತಾ ಸಮಿತಿ ಸಹ ಮಾನಪ್ಪಾಡಿ ವರದಿ ಪರಿಶೀಲನೆ ಮಾಡಿ ಮತ್ತೊಂದು ವರದಿ ಕೊಟ್ಟಿದೆ. ವಕ್ಫ್ ಆಸ್ತಿ ದುರುಪಯೋಗ ಆಗಿದೆ ಎಂಬ ಅಂಶ ಅದರಲ್ಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.