ADVERTISEMENT

ಡಿ.ಕೆ.ಶಿವಕುಮಾರ್ ವಿರುದ್ಧವೂ ತನಿಖೆಯಾಗಲಿ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 7 ಮೇ 2024, 14:05 IST
Last Updated 7 ಮೇ 2024, 14:05 IST
<div class="paragraphs"><p>ಪ್ರಲ್ಹಾದ ಜೋಶಿ</p></div>

ಪ್ರಲ್ಹಾದ ಜೋಶಿ

   

ಹುಬ್ಬಳ್ಳಿ: ‘ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಾರೆ ಎಂದು ದೇವರಾಜೇಗೌಡ ಆರೋಪಿಸಿದ್ದಾರೆ. ಈ ಬಗ್ಗೆಯೂ ಎಸ್ಐಟಿ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಒತ್ತಾಯಿಸಿದರು‌.

‘ಮೇಲ್ನೋಟಕ್ಕೆ ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ವಿಡಿಯೊಗಳು ಹೊರಬಂದಿದ್ದು ಆಘಾತಕಾರಿ ವಿಷಯ. ಅವರ ಬಗ್ಗೆ ಅನುಕಂಪ ಪಡುವ ಅಗತ್ಯ ಇಲ್ಲ’ ಎಂದು ಅವರು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದು ಒಳ್ಳೆಯದು. ರಾಜ್ಯ ಸರ್ಕಾರ ಸಿಬಿಐಗೆ ವಹಿಸದಿದ್ದರೆ ಸಂಬಂಧಪಟ್ಟವರು ನ್ಯಾಯಾಲಯಕ್ಕೆ ಹೋಗಿ ಸಿಬಿಐ ತನಿಖೆಗೆ ಒತ್ತಾಯಿಸಬೇಕು. ಈ ಪ್ರಕರಣದಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದ್ದು, ಅದರ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದರು.

‘ಬಿಜೆಪಿ ಸರ್ಕಾರ ಇದ್ದಾಗ ಒಂದೂ ಪ್ರಕರಣವನ್ನು ಸಿಬಿಐಗೆ ವಹಿಸಿರಲಿಲ್ಲ’ ಎಂಬ ಕಾಂಗ್ರೆಸ್‌ನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ನಮ್ಮ ಸರ್ಕಾರ ಇದ್ದಾಗ ಇಂತಹ ಗಂಭೀರ ಪ್ರಕರಣ ನಡೆದಿರಲಿಲ್ಲ. ಹೀಗಾಗಿ ಸಿಬಿಐಗೆ ವಹಿಸುವ ಪ್ರಶ್ನೆಯೇ ಬರಲ್ಲ. ಈಗ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲು ಏಕೆ ಹೆದರುತ್ತಿದೆ? ಸಿಬಿಐ ಸ್ವತಂತ್ರವಾಗಿ ತನಿಖೆ ನಡೆಸುತ್ತದೆ. ಅನ್ಯಾಯದಿಂದ ಆರೋಪ‌ ಮಾಡಿದ್ದರೆ ಅನೇಕ ಪ್ರಕರಣಗಳಲ್ಲಿ ಆರೋಪ ಮುಕ್ತಗೊಳಿಸಿದೆ’ ಎಂದರು.

‘ಪೆನ್‌ಡ್ರೈವ್‌ನಲ್ಲಿರುವ ವಿಡಿಯೊಗಳು ಎಂಟು–ಹತ್ತು ವರ್ಷ ಹಳೆಯವು ಎನ್ನಲಾಗುತ್ತಿದೆ. ಏಪ್ರಿಲ್ 21ರಂದು ಮೊದಲ ವಿಡಿಯೊ ಹೊರ ಬಂದಿದೆ. ಹೀಗಿದ್ದರೂ ಪ್ರಕರಣ ದಾಖಲಿಸಿ ಪ್ರಜ್ವಲ್‌ ಅವರನ್ನು ಬಂಧಿಸದೇ, ಪರಾರಿಯಾಗಲು ಬಿಟ್ಟಿದ್ದು ಏಕೆ? ರಾಜ್ಯ ಸರ್ಕಾರ ಈ ವಿಷಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.