ADVERTISEMENT

ಸ್ಥಾನಕ್ಕೆ ಕುತ್ತು ಬಂದಿದ್ದರಿಂದ ಜಾತಿಯ ಲೇಪನ: ಜೋಶಿ ಟೀಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 0:25 IST
Last Updated 12 ಆಗಸ್ಟ್ 2024, 0:25 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಹೋಗುತ್ತದೆ ಎಂಬುದು ಗೊತ್ತಾದ ನಂತರ ಅದಕ್ಕೆ ಜಾತಿಯ ಲೇಪನ ಮಾಡುತ್ತಿದ್ಧಾರೆ’ ಎಂದು ಕೇಂದ್ರ ನಾಗರಿಕ ಸರಬರಾಜು ಮತ್ತು ಆಹಾರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ನಾಯಕನನ್ನು ತೆಗೆದು ಬೇರೆಯವರನ್ನು ಸಿ.ಎಂ ಮಾಡುವಂತೆ ನಾವು ಹೇಳಿಲ್ಲ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ರಾಜೀನಾಮೆ ಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹ. ಹಿಂದುಳಿದ ವರ್ಗದ ಎಸ್.ಬಂಗಾರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ, ಅವಮಾನಿಸಿದ್ದು ಕಾಂಗ್ರೆಸ್‌ ಪಕ್ಷ’ ಎಂದು ದೂರಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮ, ಮುಡಾದಲ್ಲಿ ಹಗರಣಗಳು ನಡೆದರೂ ಕಾಂಗ್ರೆಸ್‌ನವರು ಭಂಡತನದಿಂದ ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನೈತಿಕ ಹೊಣೆ ಹೊರುವುದು ಬಿಟ್ಟು, ಆಡಳಿತ ನಡೆಸುವವರೇ ಜನಾಂದೋಲನ ಮಾಡುತ್ತಿರುವುದು ಹಾ‌ಸ್ಯಾಸ್ಪದ. ಸರ್ಕಾರದಲ್ಲಿ ಇದ್ದವರು ಆಡಳಿತ ನಡೆಸಬೇಕು, ಹೋರಾಟ ಮಾಡುವುದು ವಿರೋಧ ಪಕ್ಷದ ಕೆಲಸ’ ಎಂದರು.

ADVERTISEMENT

‘ಮುಖ್ಯಮಂತ್ರಿ ಕುಟುಂಬದವರು ನಿಂಗ ಎಂಬುವರಿಂದ ಜಾಗ ಖರೀದಿಸಿದ್ದಾಗಿ ಹೇಳುತ್ತಿದ್ದರು. ಆ ಜಾಗ ನಿಂಗ ಅವರದ್ದೂ ಅಲ್ಲ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಸಿ.ಎಂ ಅವರ ಪತ್ನಿ 14 ನಿವೇಶನಗಳನ್ನು ಪಡೆದಿರುವುದರ ಜತೆಗೆ ಅವರು ಬೆಂಬಲಿಗರಿಗೆ ನೂರಾರು ನಿವೇಶನಗಳನ್ನು ‘ಮುಡಾ’ದಿಂದ ಕೊಡಿಸಿದ್ದಾರೆ’ ಎಂದು ಆರೋಪಿಸಿದರು.

‘ರಾಜ್ಯ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ, ಪೊಲೀಸರು ಅವರನ್ನು ಬಂಧಿಸದಂತೆ ಹೈಕೋರ್ಟ್ ನೀಡಿದ್ದ ಆದೇಶ ತೆರವು ಮಾಡಿಸುವಂತೆ ಗೃಹ ಸಚಿವ ಜಿ.ಪರಮೇಶ್ವರ ಅವರು ಅಡ್ವೊಕೇಟ್‌ ಜನರಲ್‌ಗೆ ಸೂಚಿಸಿದ್ದಾರೆ. ಈ ಪ್ರಕರಣದಲ್ಲಿ ಹಿಂದೆ ಅವರು ಏನು ಹೇಳಿದ್ದರು ಎಂಬುದನ್ನು ಮರೆಯಬಾರದು’ ಎಂದರು.

‘ತುಂಗಭದ್ರಾ ಅಣೆಕಟ್ಟೆಯ ಗೇಟ್‌ ಮುರಿದು ಹಾನಿಯಾಗಿದ್ದು, ಈ ವಿಷಯದಲ್ಲಿ ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಕೂಡಲೇ ದುರಸ್ತಿಗೆ ಮುಂದಾಗಬೇಕು’ ಎಂದು ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.