ಹುಬ್ಬಳ್ಳಿ: ‘ಮಸೀದಿಗಳಲ್ಲಿ ಧ್ವನಿವರ್ಧಕ ತೆರವಿಗೆ ಸರ್ಕಾರ ಮುಂದಿನ 15 ದಿನಗಳ ಒಳಗಾಗಿ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಬಿಜೆಪಿ ಶಾಸಕರ ಮನೆ ಮುಂದೆ ಧ್ವನಿವರ್ಧಕ ಬಳಸಿ ಭಜನೆ ಮಾಡುತ್ತೇವೆ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.
ಮಸೀದಿಗಳಲ್ಲಿ ಧ್ವನಿವರ್ಧಕ ಬಳಸುವುದನ್ನು ತಡೆಯಬೇಕು ಹಾಗೂ ಬಿಜೆಪಿ ಶಾಸಕರು ಇದರ ವಿರುದ್ಧ ಧ್ವನಿಎತ್ತಬೇಕು ಎಂದು ಒತ್ತಾಯಿಸಿ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಇಲ್ಲಿನ ನಾಗಶೆಟ್ಟಿಕೊಪ್ಪದ ಶಾಸಕ ಜಗದೀಶ ಶೆಟ್ಟರ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಯಿತು. ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್ ಅವರು, ‘ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ಆಜಾನ್ ಕೂಗುತ್ತಿರುವುದರಿಂದ ಆಗುತ್ತಿರುವ ಕಿರಿಕಿರಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಒಂದು ವರ್ಷದಿಂದ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ. ಆದರೆ, ಬಿಜೆಪಿಯ ಯಾವ ನಾಯಕರೂ ಬಾಯಿ ಬಿಡುತ್ತಿಲ್ಲ’ ಎಂದರು.
ರಾಜ್ಯದಾದ್ಯಂತ ಬಿಜೆಪಿ ಶಾಸಕರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಹುಬ್ಬಳ್ಳಿಯಲ್ಲಿ ಶಾಸಕರ ಕಚೇರಿಯೇ ಒಂದುಕಡೆ ಅವರ ಮನೆಯೇ ಮತ್ತೊಂದು ಕಡೆ ಇದೆ. ಜನರಿಗೆ ಅನುಕೂಲ ಇರುವ ಕಡೆ ಶಾಸಕರು ಕಚೇರಿ ಮಾಡಬೇಕು ಅದನ್ನು ಮಾಡಿಲ್ಲ. ಇವರಿಗೆ ಸಂಘಬೇಕು, ಸಂಘದ ತತ್ವಬೇಡ. ಹಿಂದೂಗಳ ಮತಬೇಕು ಆದರೆ, ಹಿಂದೂತ್ವ ಬೇಡ ಎಂದು ಕಿಡಿಕಾರಿದರು.
ನಿರಂತರ ಹೋರಾಟ ಮಾಡಿದರೂ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಮಾಡದಂತೆ ಸರ್ಕಾರ ಬಿಗಿಯಾದ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಒಮ್ಮೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನೋಡಿ, ಒಂದೇ ತಿಂಗಳಲ್ಲಿ 60 ಸಾವಿರ ಧ್ವನಿವರ್ಧಕಗಳನ್ನು ಕೆಳಗಿಸುವ ಮೂಲಕ ಗಂಡುಗಲಿ ಕೆಲಸ ಮಾಡಿದ್ದಾರೆ. ನೀವು ಹತ್ತು ಧ್ವನಿವರ್ಧಕಗಳನ್ನಾದರೂ ಕೆಳಗಿಸಿ, ಧೈರ್ಯ ತೋರಿಸಿ ಎಂದು ಸವಾಲು ಹಾಕಿದರು.
ಧ್ವನಿವರ್ಧಕ ಬಳಕೆ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತಿದ್ದು, ಕೋರ್ಟ್ ತೀರ್ಪುಗಳಿಗೆ ಗೌರವ ನೀಡುತ್ತಿಲ್ಲ. ಬಿಜೆಪಿಯನ್ನು ಹಿಂದೂಗಳ ಪರವಾಗಿ ಕೆಲಸ ಮಾಡುವುದಕ್ಕೆ ಆಯ್ಕೆ ಮಾಡಲಾಗಿದೆ. ಇದೇ ಮುಂದುವರಿದರೆ ಅನಾಹುತ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ಇಂದಿಗೂ ಮಸೀದಿಗಳಲ್ಲಿ ಐದು ಬಾರಿ ಧ್ವನಿವರ್ಧಕ ಬಳಸುತ್ತಿದ್ದಾರೆ. ಬಿಜೆಪಿ ಅವರ ನಿದ್ದೆಯಿಂದಲೇ ಇದು ಮುಂದುವರಿದಿದೆ. ಹಿಂದೂ ಸಂಘಟನೆಗಳನ್ನು ಬಿಜೆಪಿ ಅವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಮ್ಮ ಪರ ಮಾತನಾಡುತ್ತಿಲ್ಲ. ಜನರಿಗೆ ಇವರು ಮಾಡುತ್ತಿರುವ ಅನ್ಯಾಯವನ್ನು ತಿಳಿಸುವ ಉದ್ದೇಶದಿಂದಲೇ ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ಚುನಾವಣೆಯಲ್ಲಿ ನೋಟಾ ಚಲಾವಣೆ ಮಾಡಿ ಪಾಠ ಕಲಿಸಬೇಕಾಗುತ್ತದೆ ಎಂದರು.
ಇಂದಿಗೂ ಯಾರೂ ಧ್ವನಿವರ್ಧಕ ಬಳಸುವುದಕ್ಕೆ ಅನುಮತಿ ಪಡೆದಿಲ್ಲ. ಸಂವಿಧಾನ ಮತ್ತು ಕಾನೂನು ಆಧಾರದ ಮೇಲೆ ಕ್ರಮಕೈಗೊಳ್ಳಿ. ಸರ್ಕಾರ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮ ಮಾಡಿದ್ದು, ದಿನಕ್ಕೆ ನಿರ್ದಿಷ್ಟ ಶುಲ್ಕ ವಿಧಿಸಿದೆ. ಆದರೆ, ಧ್ವನಿವರ್ಧಕ ಬಳಕೆಗೆ 15 ದಿನ ಮಾತ್ರ ಅವಕಾಶ ನೀಡಬಹುದು ಎಂಬ ಕಾನೂನು ಇದೆ ಎಂದು ಹೇಳಿದರು.
ಗೋಹತ್ಯೆ ನಿಂತಿಲ್ಲ: ಬಿಜೆಪಿ ನಾಯಕರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದೆ. ಆದರೆ, ರಾಜ್ಯದಲ್ಲಿ ಗೋಹತ್ಯೆ ನಿಂತಿಲ್ಲ. ನಾವೇ ಹೋರಾಟ ಮಾಡಿದರೆ ನೀವು ಇರುವುದು ಏಕೆ ಎಂದು ಮುತಾಲಿಕ್ ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.