ಹುಬ್ಬಳ್ಳಿ: ಅಂಗವಿಕಲರು, ಹಿರಿಯ ನಾಗರಿಕರಿಗೆ ಅಗತ್ಯ ಸಾಧನ, ಸಲಕರಣೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಭಾರತೀಯ ಕೃತಕ ಅಂಗಾಂಗಳ ಉತ್ಪಾದನಾ ನಿಗಮದ (ಎಎಲ್‌ಐಎಂಸಿಒ–ಅಲಿಂಕೊ) ಘಟಕ ಶೀಘ್ರ ನಗರದ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆರಂಭವಾಗಲಿದೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ದಿವ್ಯಾಶಾ ಕೇಂದ್ರದಿಂದ (ಪಿಎಂಡಿಕೆ) ಈ ಘಟಕ ಆರಂಭವಾಗಲಿದ್ದು, ಇದಕ್ಕೆ ರಾಜ್ಯ ಸರ್ಕಾರ ಅನುಮತಿ ಸಹ ದೊರೆತಿದೆ. ಈಗಾಗಲೇ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
ಬೆಂಗಳೂರು, ದಾವಣಗೆರೆ ಮತ್ತು ಬೀದರ್‌ನಲ್ಲಿ ಈಗಾಗಲೇ ಈ ಘಟಕ ಇದೆ. ಕೆಎಂಸಿಆರ್‌ಐ ಜತೆಗೆ ಬೆಳಗಾವಿ, ಕಲಬುರಗಿಯಲ್ಲಿಯೂ ಈ ಘಟಕಗಳು ಆರಂಭವಾಗಲಿವೆ. ಇದರಿಂದಾಗಿ ಈ ಭಾಗದ ಹಿರಿಯ ನಾಗರಿಕರು, ಅಂಗವಿಕಲರಿಗೆ ಹೆಚ್ಚು ಅನುಕೂಲವಾಗಿದೆ ಎನ್ನುತ್ತಾರೆ ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ.
ಹುಟ್ಟುತ್ತಾ ಅಂಗವಿಕಲರು, ಅಪಘಾತಗಳಲ್ಲಿ ಕೈ, ಕಾಲು ಕಳೆದುಕೊಂಡವರು ಆರ್ಥಿಕ ಸಮಸ್ಯೆಯಿಂದ ಗುಣಮಟ್ಟದ ಕೃತಕ ಕೈ, ಕಾಲುಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹವರು ಈ ಕೇಂದ್ರದ ಪ್ರಯೋಜನ ಪಡೆಯಬಹುದಾಗಿದೆ ಎಂದರು.
ಅಲ್ಲದೆ, ಹಿರಿಯ ನಾಗರಿಕರು, ದೃಷ್ಟಿ, ಶ್ರವಣ ದೋಷವುಳ್ಳವರಿಗೆ ದುಬಾರಿ ಹಣ ನೀಡಿ ಸಾಧನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಕೆಲವರು ಶಾಶ್ವತವಾಗಿ ಅಂಗವಿಕಲರಾಗಿ ಉಳಿಯಬೇಕಾಗುತ್ತದೆ. ಈ ಕೇಂದ್ರ ಅಂತಹವರಿಗೆ ವರದಾನವಾಗಲಿದೆ ಎಂದು ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಪ್ರತಿ ದಿನ 200-300 ಜನರು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾಗುತ್ತಾರೆ. ಕೆಲವರು ಚಿಕಿತ್ಸೆ ಪಡೆದು ಗುಣಮುಖರಾದರೆ, ಇನ್ನೂ ಕೆಲವರು ಅಂಗವೈಕಲ್ಯತೆಗೆ ಒಳಗಾಗುತ್ತಾರೆ. ಅಂಗಾಂಗಳನ್ನು ಕಳೆದುಕೊಂಡವರ ಜೀವನ ಇಲ್ಲಿಗೆ ನಿಲ್ಲಬಾರದು. ಅವರು ಆತ್ಮಸ್ಥೈರ್ಯದಿಂದ, ಸ್ವತಂತ್ರವಾಗಿ ಬದುಕುವಂತಾಗಬೇಕು ಎಂಬುದು ಈ ಕೇಂದ್ರ ಸ್ಥಾಪನೆಯ ಉದ್ದೇಶ ಎಂದರು.
ಕೆಎಂಸಿಆರ್‌ಐ ಆವರಣದಲ್ಲಿ ಈಗಾಗಲೇ ಮಹಾವೀರ ಲಿಂಬ್ ಸೆಂಟರ್ ಇದೆ. ಅಲ್ಲಿ ಕೃತಕ, ಕೈ ಕಾಲು ಜೋಡಣೆ ಮಾಡಲಾಗುತ್ತಿದೆ. ಅದರ ಜತೆಗೆ ಎಎಲ್‌ಐಎಂಸಿಒ ಘಟಕ ಸ್ಥಾಪನೆಯಾದರೆ ಇನ್ನೂ ಉತ್ತಮ ಗುಣಮಟ್ಟದ ಕೃತಕ ಅಂಗಾಂಗಳು ದೊರೆಯಲಿವೆ ಎಂದು ಕೆಎಂಸಿಆರ್‌ಐನ ಶಾರೀರಿಕ ಔಷಧ ಮತ್ತು ಪುನರ್ವಸತಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆನಂದ ವರ್ಮಾ ಹೇಳಿದರು.
ಕೇಂದ್ರದಲ್ಲಿ ಕೇವಲ ಕೃತಕ ಅಂಗಾಂಗಗಳನ್ನು ಮಾತ್ರ ನೀಡುವುದಿಲ್ಲ. ಅದರ ಜತೆಗೆ ಹಿರಿಯ ನಾಗರಿಕರು, ಅಂಗವಿಕಲರಿಗೆ ಬೇಕಾದ ಗಾಲಿ ಕುರ್ಚಿ, ತ್ರಿಚಕ್ರ ವಾಹನ, ತ್ರಿಚಕ್ರ ಸೈಕಲ್, ಶ್ರವಣ ಸಾಧನ, ಸ್ಮಾರ್ಟ್ ವಾಚ್, ಸ್ಮಾರ್ಟ್ ಫೋನ್, ವಾಕರ್ ನೀಡಲಾಗುತ್ತದೆ ಎಂದರು.
ಬಿಪಿಎಲ್ ಕಾರ್ಡ್, ಅಂಗವಿಕಲರ ಪ್ರಮಾಣ ಪತ್ರದೊಂದಿಗೆ ಕೇಂದ್ರಕ್ಕೆ ಬಂದು ಸೇವೆ ಪಡೆಯಬಹುದಾಗಿದೆ. ಸಾಧನಗಳ ಅಳವಡಿಕೆ ಜತೆಗೆ ಅವುಗಳ ಬಳಕೆ ಕುರಿತು ತರಬೇತಿಯನ್ನು ಸಹ ನೀಡಲಾಗುತ್ತದೆ. ಕೆಎಂಸಿಆರ್‌ಐನಿಂದ ಶಿಫಾರಸು ಮಾಡಿದ ಅಂಗವಿಕಲರಿಗೆ ಘಟಕದ ತಜ್ಞರು ಸಾಧನಗಳನ್ನು ಒದಗಿಸುತ್ತಾರೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.