ಹುಬ್ಬಳ್ಳಿ: ದೀಪಾವಳಿ ಸಂದರ್ಭದಲ್ಲಿ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಟಿಕೆಟ್ ದರ ಎರಡು, ಮೂರು ಪಟ್ಟು ಹೆಚ್ಚಿಸಿದರೆ ಅಂಥ ಖಾಸಗಿ ಬಸ್‌ಗಳ ಪರವಾನಗಿ ಮತ್ತು ನೋಂದಣಿ ಪತ್ರ ಅಮಾನತು ಮಾಡಲಾಗುವುದು. ಟಿಕೆಟ್ ವಿತರಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಾರಿಗೆ ಇಲಾಖೆ ಎಚ್ಚರಿಸಿದೆ. ಆದರೆ, ಬಸ್ ಟಿಕೆಟ್ ದರ ಮೂರು–ನಾಲ್ಕು ಪಟ್ಟು ಹೆಚ್ಚಿಸಲಾಗಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಮಂಗಳೂರು, ಕಲಬುರಗಿ ಸೇರಿ ಪ್ರಮುಖ ನಗರಗಳಿಂದ ಹೊರಡುವ ಖಾಸಗಿ ಬಸ್‌ಗಳ ಪ್ರಯಾಣ ದರ ಏಕಾಏಕಿ ಹೆಚ್ಚಳವಾಗಿದೆ. ಅ.29ರಿಂದ ನ.4ರವರೆಗೆ ಖಾಸಗಿ ಬಸ್‌ಗಳ ಟಿಕೆಟ್ ದರ ಮೂಲ ದರಕ್ಕಿಂತ ಕನಿಷ್ಠ ಎರಡು, ಗರಿಷ್ಠ ಐದು ಪಟ್ಟು ಹೆಚ್ಚಿಸಲಾಗಿದ್ದು, ಆನ್‌ಲೈನ್‌ನಲ್ಲಿ ಕಾಯ್ದಿರಸಲು ಅವಕಾಶ ನೀಡಲಾಗಿದೆ.
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಡುವ ಬಸ್ ಟಿಕೆಟ್ ದರ ₹700ರಿಂದ ₹1,000 ಇರುತ್ತದೆ. ಆದರೆ ಹಬ್ಬದ ಹಿನ್ನೆಲೆ ₹2,000ರಿಂದ ₹4,000ವರೆಗೆ ಟಿಕೆಟ್ ದರ ಏರಿಸಲಾಗಿದೆ. ₹600ರಿಂದ ₹1,000 ದವರೆಗೆ ಇರುತ್ತಿದ್ದ ಬೆಂಗಳೂರು– ಮಂಗಳೂರು ಬಸ್ ದರ ₹1,700ರಿಂದ ₹3,000 ವರೆಗೆ, ₹900ರಿಂದ ₹1,500 ವರೆಗೆ ಇರುತ್ತಿದ್ದ ಬೆಂಗಳೂರು– ಬೆಳಗಾವಿ ಬಸ್ ದರ ₹2,500ರಿಂದ ₹4,000ರ ವರೆಗೆ, ಬೆಂಗಳೂರು– ಕಲಬುರಗಿವರೆಗೆ ₹1,000ದಿಂದ ₹1,200ವರೆಗೆ ಇದ್ದ ಖಾಸಗಿ ಬಸ್ ದರ, ಈಗ ₹2,500ರಿಂದ ₹3,500ವರೆಗೆ ಏರಿಕೆಯಾಗಿದೆ.
‘ಹಬ್ಬದ ಹಿನ್ನೆಲೆ ಖಾಸಗಿ ಬಸ್‌ಗಳು ದರ ಏರಿಸಿದರೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ ಆದರೂ ಆನ್‌ಲೈನ್‌ನಲ್ಲಿ ಬುಕ್ ಮಾಡಲು ಹೋದರೆ ನಾಲ್ಕೈದು ಪಟ್ಟು ದರ ಏರಿಸಲಾಗಿದೆ. ಇದು ಸಾರಿಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಖಾಸಗಿ ಬಸ್‌ನವರು ಸರ್ಕಾರ ವಿಧಿಸುವ ದಂಡದ ಮೊತ್ತವನ್ನೂ ಪ್ರಯಾಣಿಕರಿಂದ ವಸೂಲಿ ಮಾಡುತ್ತಾರೆ. ಹೀಗಾಗಿ ಅವರಿಗೆ ದಂಡದ ಬಿಸಿ ತಾಗುವುದಿಲ್ಲ. ಪ್ರಯಾಣಿಕರ ಅನಿವಾರ್ಯವನ್ನೇ ಬಂಡವಾಳವನ್ನಾಗಿಸಿಕೊಂಡು ದರ ಏರಿಸುತ್ತಾರೆ’ ಎಂದು ಪ್ರಯಾಣಿಕ ಅಜರುದ್ದಿನ್ ಅಸಮಾಧಾನ ವ್ಯಕ್ತಪಡಿಸಿದರು.
‘ಸರ್ಕಾರಿ ಬಸ್ ಸೇವೆ ಸಮರ್ಪಕವಾಗಿದ್ದರೆ ಜನರು ಖಾಸಗಿ ಬಸ್‌ಗಳ ಮೇಲೆ ಅವಲಂಬಿಸುವುದು ಕಡಿಮೆ ಆಗುತ್ತದೆ. ಹಬ್ಬದ ಸಂದರ್ಭಗಳಲ್ಲಿ ರಾಜ್ಯ ಸಾರಿಗೆ ಇಲಾಖೆ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಬಸ್ ಬಿಡುವ ವ್ಯವಸ್ಥೆ ಮಾಡಬೇಕು. ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನ ದರ ₹4,500 ರಿಂದ ₹5,500 ಇದೆ. ಒಂದು ಗಂಟೆಯೊಳಗೆ ತಲುಪಬಹುದು. ಆದರೆ, ಈ ಖಾಸಗಿ ಬಸ್‌ಗಳ ದರವೂ ಅದೇ ದರಕ್ಕೆ ತಲುಪಿದ್ದು ಅಚ್ಚರಿಯಾಗುತ್ತಿದೆ. ಸಾರಿಗೆ ಅಧಿಕಾರಿಗಳ ನಿಷ್ಕಾಳಜಿಯೇ ಇದಕ್ಕೆ ಕಾರಣ’ ಎಂದು ಸಮತಾ ಸೇನಾ ಮುಖಂಡ ಗುರುನಾಥ ಉಳ್ಳಿಕಾಶಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ, ‘ಸಾಮಾನ್ಯ ದರಕ್ಕಿಂತ ಹೆಚ್ಚು ವಸೂಲಿ ಮಾಡಬಾರದು ಎಂದು ಇಲಾಖೆ ಆಯುಕ್ತರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಮೋಟಾರ್ ನಿರೀಕ್ಷಕರಿಗೆ ನಾವು ಸೂಚನೆ ನೀಡಿದ್ದು, ಅವರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸಿದ ಆರು ಬಸ್‌ಗಳ ಮಾಲೀಕರಿಗೆ ನೋಟಿಸ್ ನೀಡಲಾಗಿದೆ’ ಎಂದರು.
‘ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಯುತ್ತಿದೆ. ಒಂದು ಬಸ್‌ಗೆ ಒಂದೇ ಬಾರಿ ನೋಟಿಸ್ ನೀಡಲಾಗುವುದು. ಪರ್ಮಿಟ್ ಪಡೆಯದ ಬಸ್‌ಗಳು ಕೆಲ ಮಾರ್ಗದಲ್ಲಿ ಸಂಚರಿಸಿದ್ದು ಕಂಡು ಬಂದರೆ, ಅದರ ಪರವಾನಗಿ ರದ್ದು ಪಡಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.