ADVERTISEMENT

ಪ್ರಿಯದರ್ಶಿನಿ ಪಾಟೀಲ ಆತ್ಮಹತ್ಯೆ ಕೇಸ್: ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದ ಮಕ್ಕಳು

ಸಂತ್ರಸ್ತರ ಕಾನೂನು ಹೋರಾಟ, ವಿದೇಶಾಂಗ ಇಲಾಖೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಯತ್ನದಿಂದ ಧಾರವಾಡ ಮೂಲದ ಪ್ರಿಯದರ್ಶಿನಿ ಅವರ ಮಕ್ಕಳು ಪೋಷಕರ ಮಡಿಲಿಗೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 15:59 IST
Last Updated 14 ಜುಲೈ 2024, 15:59 IST
<div class="paragraphs"><p>ಎಸ್‌.ಎಸ್‌.ದೇ‌ಸಾಯಿ ಅವರು ಸಚಿವ ಜೋಶಿ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು, ಪಕ್ಕದ ಚಿತ್ರದಲ್ಲಿ&nbsp;ಪ್ರಿಯದರ್ಶಿನಿ ಪಾಟೀಲ</p></div>

ಎಸ್‌.ಎಸ್‌.ದೇ‌ಸಾಯಿ ಅವರು ಸಚಿವ ಜೋಶಿ ಅವರನ್ನು ಭೇಟಿಯಾಗಿ ಧನ್ಯವಾದ ಸಲ್ಲಿಸಿದರು, ಪಕ್ಕದ ಚಿತ್ರದಲ್ಲಿ ಪ್ರಿಯದರ್ಶಿನಿ ಪಾಟೀಲ

   

ಧಾರವಾಡ: ಕಡೆಗೂ ಆಸ್ಟ್ರೇಲಿಯಾದ ‘ಚೈಲ್ಡ್‌ ಕೇರ್‌ ಪ್ರೊಟೆಕ್ಷನ್‌ ಏಜೆನ್ಸಿ ಡಿಪಾರ್ಟ್‌ಮೆಂಟ್‌ ಆಫ್‌ ಕಮ್ಯುನಿಟಿ ಜಸ್ಟೀಸ್‌’ (ಡಿಸಿಜೆ) ಸುಪರ್ದಿಯಿಂದ ಅಪ್ಪನ ಮಡಿಲು ಸೇರಿದ ಅನಿವಾಸಿ ಭಾರತೀಯ ದಂಪತಿ ಮಕ್ಕಳು ಇದೀಗ ಭಾರತಕ್ಕೆ ಬಂದಿದ್ದಾರೆ.

ತಂದೆಯೊಡನೆ ಧಾರವಾಡದ ಅಜ್ಜ–ಅಜ್ಜಿ ಮನೆಗೆ ಅವರು ಭೇಟಿ ನೀಡಿದ್ಧಾರೆ.

ADVERTISEMENT

ಈ ಮಕ್ಕಳ ತಾಯಿ ಹಾಗೂ ಧಾರವಾಡದ ಪ್ರೊ.ಎಸ್‌.ಎಸ್‌.ದೇ‌ಸಾಯಿ ಅವರ ಪುತ್ರಿ ಪ್ರಿಯದರ್ಶಿನಿ ಪಾಟೀಲ ಅವರು ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದು ಕಳೆದ ವರ್ಷ ಸವದತ್ತಿ ಸಮೀಪ ನವಿಲುತೀರ್ಥ ಜಲಾಶಯಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮಕ್ಕಳ ವಿಚಾರದಲ್ಲಿ ಆಸ್ಟ್ರೇಲಿಯಾ ಸರ್ಕಾರ ಹಾಗೂ ಪ್ರಿಯದರ್ಶಿನಿ ನಡುವೆ ಕಾನೂನು ಸಮರ ನಡೆದಿತ್ತು. ಅವರಿಗೆ ತಮ್ಮ ಸುಪರ್ದಿಗೆ ಮಕ್ಕಳನ್ನು ಪಡೆಯಲು ಆಗಿರಲಿಲ್ಲ. ಇದರಿಂದ ಬೇಸತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣವೊಂದರಲ್ಲಿ ತಾಯಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಡಿಸಿಜೆ ಈ ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆದಿತ್ತು.

ಸಂತ್ರಸ್ತರ ಕಾನೂನು ಹೋರಾಟ, ವಿದೇಶಾಂಗ ಇಲಾಖೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಪ್ರಯತ್ನದಿಂದ ಮಕ್ಕಳಾದ ಅಮರ್ತ್ಯ, ಅಪರಾಜಿತಾ ಸಿಡ್ನಿಯಿಂದ ತಂದೆ ಲಿಂಗರಾಜ ಪಾಟೀಲ ಅವರೊಂದಿಗೆ ಧಾರವಾಡಕ್ಕೆ ಬಂದಿದ್ದಾರೆ. ಪ್ರೊ.ಎಸ್‌.ಎಸ್‌.ದೇಸಾಯಿ ಮತ್ತು ಪತ್ನಿ ಶೋಭಾ ದೇಸಾಯಿ ಅವರು ಅಳಿಯ, ಮೊಮ್ಮಕ್ಕಳನ್ನು ನೋಡಿ ಖುಷಿ ಪಟ್ಟಿದ್ದಾರೆ.

‘ಅಳಿಯ ಮತ್ತು ಮೊಮ್ಮಕ್ಕಳು ಬಂದಿದ್ದು ಬಹಳ ಖುಷಿಯಾಗಿದೆ. ಅವರು ಆಸ್ಟ್ರೇಲಿಯಾಕ್ಕೆ ವಾಪಸ್‌ ತೆರಳುತ್ತಾರೆ. ಡಿಸೆಂಬರ್‌ನಲ್ಲಿ ಧಾರವಾಡಕ್ಕೆ ಮತ್ತೆ ಬರುತ್ತಾರೆ’ ಎಂದು ಶೋಭಾ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೇಸಾಯಿ ಕುಟುಂಬದವರು ಹಾಗೂ ಅವರ ಮೊಮ್ಮಕ್ಕಳು ಹುಬ್ಬಳ್ಳಿಯಲ್ಲಿ ಪ್ರಲ್ಹಾದ ಜೋಶಿ ಅವರನ್ನು ಶನಿವಾರ ಭೇಟಿ ಮಾಡಿ ಧನ್ಯವಾದ ಅರ್ಪಿಸಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಮಕ್ಕಳನ್ನು ಭಾರತಕ್ಕೆ ಕರೆ ತರಲು ಕೆಲವು ಕಾನೂನು ತೊಡಕುಗಳು ಇದ್ದವು. ವಿದೇಶಾಂಗ ಸಚಿವರ ಜೊತೆ ಮಾತುಕತೆ ನಡೆಸಲಾಗಿತ್ತು. ಅವರ ಭಾರತ ಮತ್ತು ಆಸ್ಟ್ರೇಲಿಯಾ ಹೈಕಮಿಷನ್‌ ಜೊತೆ ಸಂಪರ್ಕ, ಸಮನ್ವಯ ಸಾಧಿಸಿದ್ದರು. ಅವರ ಪ್ರಯತ್ನದಿಂದಾಗಿ ದೇಸಾಯಿ ಅವರ ಮೊಮ್ಮಕ್ಕಳು ಕುಟುಂಬದವರನ್ನು ಸೇರಿದ್ಧಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.