ಹುಬ್ಬಳ್ಳಿ: ಇಲ್ಲಿನ ಗೋಲ್ಡನ್ ಟೌನ್ ಬಡಾವಣೆಯ ತಮ್ಮ ಪುತ್ರಿಯ ನಿವಾಸದಲ್ಲಿ ಶುಕ್ರವಾರ ಬೆಳಗಿನ ಜಾವ ನಿಧನರಾದ ಚಿಂತಕ ಹಾಗೂ ಕಲಾವಿದ ಪ್ರೊ. ಜಿ.ಕೆ. ಗೋವಿಂದರಾವ್ ಅವರ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನ ಮಾಡಿದ್ದಾರೆ.
ಗೋವಿಂದರಾವ್ ಅವರ ಅಳಿಯ (ಶ್ಯಾಮಲಾ ಅವರ ಪತಿ) ಗುರುಪ್ರಸಾದ್ ಎಂ.ಎಂ. ಜೋಶಿ ಆಸ್ಪತ್ರೆಯಲ್ಲಿ ನೇತ್ರ ತಜ್ಞರಾಗಿದ್ದಾರೆ.
ತಮ್ಮ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಗೋವಿಂದರಾವ್ ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಇದನ್ನೂ ಓದಿ... ಹಿರಿಯ ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ನಿಧನ
ಐದು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಗೋವಿಂದರಾವ್
ಹುಬ್ಬಳ್ಳಿ: ಎರಡು ತಿಂಗಳಿನಿಂದ ಆನಾರೋಗ್ಯಕ್ಕೆ ಒಳಗಾಗಿದ್ದ ಪ್ರೊ. ಜಿ.ಕೆ. ಗೋವಿಂದರಾವ್ ಅವರ ಆರೋಗ್ಯ ಐದು ದಿನಗಳ ಹಿಂದೆ ಕ್ಷೀಣಿಸಿತ್ತು.
ಐದು ದಿನಗಳಿಂದ ಅವರು ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾದ ಮೊದಲ ಮೂರು ದಿನ ಪ್ರಜ್ಞಾವಸ್ಥೆಯಲ್ಲಿದ್ದ ಅವರು, ಕೊನೆಯ ಎರಡು ದಿನ ಅರೆಪ್ರಜ್ಞಾವಸ್ಥೆ ಸ್ಥಿತಿಗೆ ತಲುಪಿದ್ದರು.
ಅಪ್ಪನ ನೆನಪುಗಳನ್ನು ಹಂಚಿಕೊಂಡ ಗೋವಿಂದರಾವ್ ಅವರ ಇನ್ನೊಬ್ಬ ಪುತ್ರಿ ಶಾಂತಿ ‘ಅಪ್ಪ ಜೀವನದುದ್ದಕ್ಕೂ ಹೇಗೆ ಬದುಕಿದರೊ; ಕೊನೆಯ ದಿನಗಳಲ್ಲಿಯೂ ಹಾಗೆಯೇ ಬದುಕು ಕಳೆದರು. ಬದುಕಿದ್ದಾಗ ಅವರು ಯಾರಿಗೂ ತೊಂದರೆಯಾಗಬಾರದು ಎಂದು ಬಯಸಿದ್ದರು. ಹೀಗಾಗಿ ತಮ್ಮ ಕೊನೆಯ ದಿನಗಳಲ್ಲಿ ಯಾರಿಗೂ ತೊಂದರೆ ಕೊಡಲಿಲ್ಲ. ಯಾರಿಗೂ ಭಾರವಾಗಲಿಲ್ಲ’ ಎಂದು ಕಣ್ಣೀರಾದರು.
ಬೆಳಗಿನ ಜಾವವೇ ಮೃತಪಟ್ಟಿದ್ದರು. ಅವರ ಆಸೆಯಂತೆ ಸರಳವಾಗಿ ಅಂತ್ಯಕ್ರಿಯೆ ಮುಗಿಸಿದೆವು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.