ಧಾರವಾಡ: ‘ಜಾತಿ ವ್ಯವಸ್ಥೆ, ಮೌಢ್ಯಗಳನ್ನು ತೊಡೆದು ಹಾಕಲು 12ನೇ ಶತಮಾನದಲ್ಲಿ ಬಸವಣ್ಣ ಶ್ರಮಿಸಿದರು’ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಕರ್ನಾಟಕ ಸಂಭ್ರಮ 50ರ ಸಂಭ್ರಮದ ಅಂಗವಾಗಿ ಬುಧವಾರ ಆಯೋಜಿಸಿದ್ದ ‘ಧರೆಗೆ ದೊಡ್ಡವರು' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಸವಣ್ಣನವರು ಸಮಾಜದ ಎಲ್ಲ ವರ್ಗದವರನ್ನು ಸಮಾನ ದೃಷ್ಠಿಯಿಂದ ಕಂಡರು. ಬಸವಣ್ಣನವರ ನಿಜವಾದ ಆರಾಧಕರು ಜಾತಿಯತೆ ಮಾಡಬಾರದು. ಅವರ ತತ್ವಗಳನ್ನು ಪಾಲಿಸಬೇಕು’ ಎಂದು ತಿಳಿಸಿದರು.
‘ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಬಾರದು. ನಮ್ಮ ನಾಡು, ನುಡಿ, ಜಲ, ಭಾಷೆ ಪ್ರೀತಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ರಾಜಧರ್ಮ ಪಾಲನೆ ಮಾಡುವುದು ರಾಜಕಾರಣಿಗಳು ಕರ್ತವ್ಯ. ಭ್ರಷ್ಟಾಚಾರ, ಅಕ್ರಮ, ಅನ್ಯಾಯವನ್ನು ದುರಾಸೆಯಿಂದ ಸಮರ್ಥನೆ ಮಾಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.
ಎಂ. ರವಿನಾಯ್ಕ ಮಾತನಾಡಿ, ‘ಲಲಿತಾ ನಾಯಕ ಅವರು ಲೇಖಕಿಯಾಗಿ, ರಾಜಕಾರಣಿಯಾಗಿ ಹಾಗೂ ಹೋರಾಟಗಾರ್ತಿಯಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ನಡೆ, ನುಡಿಗಳು ಮಾದರಿ’ ಎಂದರು.
ಶರಣಮ್ಮ ಗೊರೇಬಾಳ, ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಶಂಕರ ಕುಂಬಿ, ಶೈಲಜಾ ಅಮರಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.