ADVERTISEMENT

ಕಾಂಗ್ರೆಸ್‌ ಸದಸ್ಯರಿಂದ ಸಭಾತ್ಯಾಗ; ಪ್ರತಿಭಟನೆ

ಚರ್ಚೆಗೆ ಅವಕಾಶ ನೀಡದೆ ವಿಷಯ ಪಟ್ಟಿಗೆ ಅಸ್ತು; ದೂರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 15:56 IST
Last Updated 19 ಜೂನ್ 2024, 15:56 IST
ಧಾರವಾಡದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಬುಧವಾರ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದರು
ಧಾರವಾಡದ ಪಾಲಿಕೆ ಕಚೇರಿ ಮುಂಭಾಗದಲ್ಲಿ ಬುಧವಾರ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ನಡೆಸಿದರು   

ಧಾರವಾಡ: ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದವರಿಗೆ ಚರ್ಚೆಗೆ ಅವಕಾಶ ನೀಡಿಲ್ಲ ಮತ್ತು ವಿಷಯ ಪಟ್ಟಿಯಲ್ಲಿನ ಅಂಶಗಳನ್ನು ಚರ್ಚಿಸದೆ ಏಕಪಕ್ಷೀಯವಾಗಿ ಅನುಮೋದಿಸಲಾಗಿದೆ ಎಂದು ಆರೋಪಿಸಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವಿರೋಧ ಪಕ್ಷದ (ಕಾಂಗ್ರೆಸ್‌) ಸದಸ್ಯರು ಸಭಾ ತ್ಯಾಗ ಮಾಡಿ, ಪಾಲಿಕೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕಿ ಸುವರ್ಣಾ ಕಲ್ಲಕುಂಟ್ಲ ಮಾತನಾಡಿ, ಕಟ್ಟಡ ತೆರಿಗೆ ಶೇ 20 ಹೆಚ್ಚಿಸುವುದಕ್ಕೆ ವಿರೋಧ ಮಾಡಿದ್ದೇವೆ. ಪ್ರತಿ ವರ್ಷ ಈ ತೆರಿಗೆ ಹೆಚ್ಚಿಸದೆ, ಐದು ವರ್ಷಕ್ಕೊಮ್ಮೆ ಏರಿಸಬೇಕು ಎಂದು ಪ್ರಸ್ತಾಪಿಸಲು ಅವಕಾಶವನ್ನೇ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

15ನೇ ಹಣಕಾಸು ಆಯೋಗದಲ್ಲಿ ₹43 ಕೋಟಿ ಅನುದಾನ ಪಾಲಿಕೆಗೆ ಮಂಜೂರಾಗಿದೆ. ಈ ಅನುದಾನವನ್ನು ಯಾವ್ಯಾವುದಕ್ಕೆ ಬಳಕೆ ಮಾಡಲಾಗುವುದು ಎಂದು ವಿರೋಧ ಪಕ್ಷದವರ ಜತೆ ಚರ್ಚಿಸಿಲ್ಲ. ಆಡಳಿತ ಪಕ್ಷ ಬಿಜೆಪಿಯವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಧಿಕಾರ ದುರುಪಯೋಗಪಡಿಸಿಕೊಂಡಿದ್ಧಾರೆ ಎಂದು ದೂರಿದರು.

ADVERTISEMENT

ಚರ್ಚೆಗೆ ಅವಕಾಶ ನೀಡದೆ ಏಕಪಕ್ಷೀಯವಾಗಿ ವಿಷಯಗಳನ್ನು ಅನುಮೋದಿಸಿರುವ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡುತ್ತೇವೆ. ಪಾಲಿಕೆ ಆಯುಕ್ತರು ಬಿಜೆಪಿಯವರ ಕೈಗೊಂಬೆಯಾಗಿದ್ಧಾರೆ. ಅವರನ್ನು ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.

ನಿರಂಜನಯ್ಯ ಹಿರೇಮಠ, ಕವಿತಾ ಕಬ್ಬೇರ, ಮಹಮದ್‌ ಇಕ್ಬಾಲ್‌ ನವಲೂರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.