ಹುಬ್ಬಳ್ಳಿ: ನೇಹಾ ಕೊಲೆ ಖಂಡಿಸಿ ಧಾರವಾಡ ಮತ್ತು ಹುಬ್ಬಳ್ಳಿ ಅಂಜುಮನ್ ಸಂಸ್ಥೆ ಸೋಮವಾರ ನೀಡಿದ್ದ ಬಂದ್ ಕರೆಗೆ, ನಗರದ ಷಹಾ ಬಜಾರ್ ವಾಣಿಜ್ಯ ಮಳಿಗೆ ಸಂಪೂರ್ಣ ಬಂದ್ ಆಗಿದೆ.
ಅಂಜುಮನ್ ಸಂಸ್ಥೆ ಅಡಿಯಲ್ಲಿರುವ ವಾಣಿಜ್ಯ ಕಟ್ಟಡಗಳಲ್ಲಿ ವ್ಯಾಪಾರ, ವಹಿವಾಟು ಸ್ಥಗಿತಗೊಂಡಿವೆ. ಮಾರುಕಟ್ಟೆ ಭಣಗುಡುತ್ತಿವೆ.
ಅಂಜುಮನ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಘಂಟಿಕೇರಿಯ ನೆಹರೂ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ನೇಹಾ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು. ಫಲಕಗಳನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಘಂಟಿಕೇರಿ ಕೆಇಬಿ ಕ್ರಾಸ್, ಸಿಬಿಟಿ, ಷಾ ಬಜಾರ್, ಆರ್.ಕೆ. ಗಲ್ಲಿಗೆ ಮೆರವಣಿಗೆ ತೆರಳಿ, ಮಂಗಳವಾರ ಪೇಟೆ ಮುಖಾಂತರ ಪುನಃ ನೆಹರೂ ಕಾಲೇಜಿಗೆ ಬಂದು ತಲುಪಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, 'ನೇಹಾ ಕೊಲೆ ಅತ್ಯಂತ ಖಂಡನೀಯ. ಅವಳ ಸಾವಿಗೆ ನ್ಯಾಯ ಸಿಗಬೇಕು ಎಂದು ನಾವು ಈಗಾಗಲೇ ಸರ್ಕಾರವನ್ನು ಒತ್ತಾಯಿಸಿದ್ದೇವೆ. ತ್ವರಿತ ನ್ಯಾಯಾಲಯ ಸ್ಥಾಪಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ಆಗ್ರಹಿಸಿದರು.
ಅಲ್ತಾಫ್ ಹಳ್ಳೂರು, ಇಲಿಯಾಸ್ ಮುನಿಯಾರ್, ಸೀರಾಜ್ ಅಹ್ಮದ್ ಕುಡಚಿವಾಲೆ, ಮಹ್ಮದ್ ಕೊಳೂರು, ನವೀದ್ ಮುಲ್ಲಾ ಹಾಗೂ ಅಂಜುಮನ್ ಸಂಸ್ಥೆ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.