ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟ ಪರಿಹರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ರಮ ವಹಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯ ಹೋರಾಟ ಸಮಿತಿಯವರು ಬುಧವಾರ ಪ್ರತಿಭಟನೆ ನಡೆಸಿದರು.
ವಿಶ್ವವಿದ್ಯಾಲಯ ಬಂದ್ ಮಾಡಿ ಆಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಮನವಿ ಪತ್ರವನ್ನು ಕುಲ ಸಚಿವರಿಗೆ ಸಲ್ಲಿಸಿದರು.
ಬೇಡಿಕೆಗಳೇನು?
ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ನೌಕರರ ಪಿಂಚಣಿಯನ್ನು ಎಚ್ಆರ್ ಎಂಎಸ್‌ನಲ್ಲಿ ಸೇರಿಸಬೇಕು.
2006 ಏಪ್ರಿಲ್ 1ಕ್ಕಿಂತ ಮುಂಚೆ ವಿಶ್ವವಿದ್ಯಾಲಯದಲ್ಲಿ ನೇಮಕಗೊಂಡ ನೌಕರರಿಗೆ ರಾಜ್ಯ ಸರ್ಕಾರದ ನೌಕರರಂತೆ ಹಳೆ ಪಿಂಚಣಿಯನ್ನು ಮುಂದುವರಿಸಲು ಅನುಮೋದನೆ ನೀಡಬೇಕು.
ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಕರ ಪದೋನ್ನತಿ ವೇತನ ಹಿಂಬಾಕಿ ಹಾಗೂ ಶಿಕ್ಷಕೇತರ ನೌಕರರಿಗೆ ಶೇ 17ರಷ್ಟು ಮಧ್ಯಂತರ ಪರಿಹಾರವನ್ನು ಸರ್ಕಾರವೇ ಭರಿಸಬೇಕು.
ಎನ್‌ಪಿಎಸ್ ನೌಕರರ ಮೂಲವೇತನದ ಶೇ 14ರಷ್ಟು ಹಣವನ್ನು ಸರ್ಕಾರವೇ ಭರಿಸಬೇಕು ಹಾಗೂ ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೊಳಿಸಬೇಕು.
ವಿಶ್ವವಿದ್ಯಾಲಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು.
ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ 650 ಶಿಕ್ಷಕ ಹುದ್ದೆ ಹಾಗೂ 976 ಶಿಕ್ಷಕೇತರ ನೌಕರರ ಹುದ್ದೆಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ, ಸಹಾಯಕ ಉಪನ್ಯಾಸಕರು ಹಾಗೂ ಹೊರಗುತ್ತಿಗೆ ನೌಕರರನ್ನು ಭರ್ತಿ ಮಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.