ಧಾರವಾಡ: ಜಿಲ್ಲೆಯ ಎಲ್ಲ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು ಎಂಬುದು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಘಟಕದವರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಸರ್ಕಾರಗಳು ಕಾರ್ಪೋರೇಟ್ ಪರವಾದ ಕೃಷಿ ನೀತಿಗಳನ್ನು ಹಿಂಪಡೆಯಬೇಕು. ಮಳೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಹದಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮವಹಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮೆಕ್ಕೆಜೋಳ, ಹತ್ತಿ, ಭತ್ತ, ಸೋಯಾಬೀನ್ ಬೆಳೆಗಳಿಗೆ ಬೆಂಬಲ ಬೆಲೆ ನೀಡಿ, ಖರೀದಿ ಪ್ರಕ್ರಿಯನ್ನು ಪ್ರಾರಂಭಿಸಬೇಕು. ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಅವ್ಯವಹಾರ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಬಾರದು. ಜಿಲ್ಲೆಯ ಕೆರೆಗಳ ಹೂಳೆತ್ತಲು ಹಾಗೂ ನೀರು ತುಂಬಿಸಲು ಕ್ರಮ ಕೈಗೊಳ್ಳಬೇಕು. ಅಂತರ್ಜಲ ಸಂರಕ್ಷಣೆ ಯೋಜನೆ ರೂಪಿಸಬೇಕು ಎಂದರು.
ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಉಪಾಧಕ್ಷ ಹನುಮೇಶ ಹುಡೇದ, ಜಿಲ್ಲಾ ಸಮಿತಿ ಸದಸ್ಯರಾದ ಅಲ್ಲಾವುದ್ದಿನ್ ಅಡ್ಲಿ, ಕಲ್ಲಪ್ಪ, ಗೌರಮ್ಮ, ಅಣ್ಣಪ್ಪ ಕುಲಕರ್ಣಿ, ಶಿವಲಿಂಗಪ್ಪ ಉಣಕಲ್, ಸಜ್ಜನ್, ಶ್ರೀದೇವಿ ದೊಡ್ಡಮನೆ, ಬಸಪ್ಪ ನೇಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.