ADVERTISEMENT

ಎಚ್‌ಡಿಕೆ ಮಾತಿನಿಂದ ಕೆರಳಿ ‘ಮೋದಿ ಮೋದಿ...’ ಘೋಷಣೆ ಕೂಗಿದ ಪಿಎಸ್‌ಐ ಅಭ್ಯರ್ಥಿಗಳು

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 0:44 IST
Last Updated 5 ಜೂನ್ 2022, 0:44 IST
ಎಚ್‌.ಡಿ ಕುಮಾರಸ್ವಾಮಿ
ಎಚ್‌.ಡಿ ಕುಮಾರಸ್ವಾಮಿ    

ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಲು ಬಂದಿದ್ದ ಪಿಎಸ್‌ಐ ಹುದ್ದೆ ವಂಚಿತ ಅಭ್ಯರ್ಥಿಗಳು ಅವರ ವಿರುದ್ದವೇ ಪ್ರತಿಭಟನೆ ನಡೆಸಿ ‘ಮೋದಿ... ಮೋದಿ...’ ಎಂದು ಘೋಷಣೆ ಕೂಗಿದ ಪ್ರಸಂಗ ಶನಿವಾರ ನಡೆಯಿತು.

ಪ್ರತಿಭಟನಾನಿರತ ಅತಿಥಿ ಉಪನ್ಯಾಸಕರ ಸಮಸ್ಯೆ ಆಲಿಸಲು ಬಂದಿದ್ದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪಿಎಸ್‌ಐ ಅಭ್ಯರ್ಥಿಗಳು ಮನವಿ ಸಲ್ಲಿಸಲು ಬಂದಿದ್ದರು. ಈ ಮಧ್ಯೆ ಪರೀಕ್ಷೆ ಬರೆದು ಪಾಸಾದ ವಿದ್ಯಾರ್ಥಿಗಳೂ ಮರು ಪರೀಕ್ಷೆ ಮಾಡದೇ ನೇಮಕಾತಿ ಮಾಡುವಂತೆ ಮನವಿ ಸಲ್ಲಿಸಲು ಬಂದಿದ್ದರು.

ಮೊದಲು ಪಿಎಸ್‌ಐ ನೇಮಕಾತಿಯಲ್ಲಿ ಆಗಿರುವ ಹಗರಣದಿಂದ 56 ಸಾವಿರ ಅಭ್ಯರ್ಥಿಗಳಿಗೆ ಅನ್ಯಾಯ ಆಗಿದ್ದು, ನ್ಯಾಯ ಸಿಗುವಂತೆ ಮಾಡಬೇಕು. ಅಕ್ರಮ ಆಗದಂತೆ ಸೂಕ್ತ ರೀತಿಯಲ್ಲಿ ಮರು ಪರೀಕ್ಷೆ ಕೈಗೊಳ್ಳಬೇಕು ಎಂದು ಪಿಎಸ್‌ಐ ವಂಚಿತ ಅಭ್ಯರ್ಥಿಗಳು ಮನವಿ ಸಲ್ಲಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಅನ್ಯಾಯ ಆಗಿರುವುದು 56 ಸಾವಿರ ಅಭ್ಯರ್ಥಿಗಳಿಗಲ್ಲ. ಪರೀಕ್ಷೆ ಬರೆದು ಪಾಸಾದ 545 ಅಭ್ಯರ್ಥಿಗಳಿಗೆ’ ಎಂದರು.

ಈ ಹೇಳಿಕೆಯಿಂದ ಕೆರಳಿದ ಪಿಎಸ್‌ಐ ಅಭ್ಯರ್ಥಿಗಳು ಕುಮಾರಸ್ವಾಮಿ ವಿರುದ್ದವೇ ಪ್ರತಿಭಟನೆ ನಡೆಸಿ, ಅವರೊಂದಿಗೆ ಮಾತಿನ ಚಕಮಕಿಯನ್ನೂ ನಡೆಸಿದರು. ಅಲ್ಲದೆ ಕುಮಾರಸ್ವಾಮಿ ಕವಿವಿಯಿಂದ ಹೊರಡುವಾಗ ಅವರ ಕಾರಿನತ್ತ ನುಗ್ಗಿ, ಮೋದಿ, ಮೋದಿ ಎಂದು ಘೋಷಣೆ ಕೂಗಿದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಯುವಕರಿಗೆ ಲಾಠಿ ರುಚಿ ತೋರಿಸಿದರು.

ಪೊಲೀಸರು ನನಗೆ ಸರಿಯಾಗಿ ಭದ್ರತೆ ನೀಡಿಲ್ಲ

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ‘ಮನವಿ ಕೊಡಲು ಬಂದವರು ಕಾರಿನತ್ತ ನುಗ್ಗಿ ಬಂದಿದ್ದಾರೆ. ಇವರೆಲ್ಲಾ ಮನವಿ ಕೊಡಲಷ್ಟೇ ಬಂದವರಲ್ಲ. ಬೇಕಂತಲೇ ಗಲಾಟೆ ಮಾಡಲು ಬಂದವರು. ಯಾರೋ ಉದ್ದೇಶ ಪೂರ್ವಕವಾಗಿ ಕಳುಹಿಸಿ ಕೊಟ್ಟಿದ್ದಾರೆ. ಇಂತಹ ಆಟಗಳು ನಡೆಯಲ್ಲ. ಪೊಲೀಸರು ನನಗೆ ಸರಿಯಾಗಿ ಭದ್ರತೆ ನೀಡಿಲ್ಲ. ಗೃಹ ಸಚಿವರಿಗೆ ಸರಿಯಾಗಿ ಭದ್ರತೆ ಕೊಡಲು ಹೇಳಿ. ಮೋದಿ ಮೋದಿ ಅಂತ ಘೋಷಣೆ ಹಾಕುವ ಇವರೆಲ್ಲ, ಆ ಮೋದಿ ಹತ್ತಿರವೇ ಹೋಗಿ ನ್ಯಾಯ ಕೇಳಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕರ ಧರಣಿಗೆ ಎಚ್‌ಡಿಕೆ ಬೆಂಬಲ

ಇದಕ್ಕೂ ಮೊದಲು ಕಳೆದ 6 ದಿನಗಳಿಂದ ಕವಿವಿ ಆಡಳಿತ ಕಚೇರಿ ಎದುರು ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೆಂಬಲ ಸೂಚಿಸಿದರು.

ವೇತನ ಹೆಚ್ಚಳ, ಹುದ್ದೆಯ ಪದನಾಮ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಆಲಿಸಿದ ಅವರು, ಅಲ್ಲಿಂದ ನೇರವಾಗಿ ಕುಲಪತಿ ಕಚೇರಿಗೆ ತೆರಳಿ ಕೆಲ ಹೊತ್ತು ಚರ್ಚೆ ನಡೆಸಿದರು. ನಂತರ ಧರಣಿ ಸ್ಥಳಕ್ಕೆ ಬಂದ ಅವರು, ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇನೆ. ಕೆಲ ವಿಚಾರಗಳನ್ನು ಕುಲಪತಿ ಅವರಿಗೆ ತಿಳಿಸಿದ್ದು, ಆದಷ್ಟು ಬೇಗ ಬೇಡಿಕೆಗಳು ಈಡೇರಲಿವೆ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.