ಹುಬ್ಬಳ್ಳಿ: ವ್ಯಾಪಾರ ಚಟುವಟಿಕೆಯ ಕೇಂದ್ರವಾದ ವಾರ್ಡ್ ನಂ. 65ರ ಹೊಸ ಮ್ಯಾದರ ಓಣಿಯಲ್ಲಿ ಇದ್ದ ಏಕೈಕ ಸಾರ್ವಜನಿಕ ಶೌಚಾಲಯ ಬಂದ್ ಆಗಿ 3 ವರ್ಷ ಕಳೆದಿದ್ದು, ಇನ್ನೂವರೆಗೆ ಹೊಸ ಶೌಚಾಲಯ ನಿರ್ಮಾಣಕ್ಕೆ ಪಾಲಿಕೆ ಇಚ್ಛಾಶಕ್ತಿ ತೋರಿಲ್ಲ.
ಇಲ್ಲಿಯ ಮನಿಯಾರ್ ಕಾಂಪ್ಲೆಕ್ಸ್ ಬಳಿಯಿರುವ ಈ ಶೌಚಾಲಯ ಕಟ್ಟಡದಲ್ಲಿ ಮಹಿಳೆಯರ 12 ಹಾಗೂ ಪುರುಷರ 12 ಶೌಚ ಕೋಣೆಗಳಿದ್ದವು. ಈಗ ಈ ಕಟ್ಟಡ ಹಳೆಯದಾಗಿ ಅಲ್ಲಲ್ಲಿ ಶಿಥಿಲಗೊಂಡು ಪಾಳು ಬಿದ್ದಿದೆ. ಸುತ್ತಲೂ ಗಿಡಗಂಟಿಗಳು ಬೆಳೆದು ಓಡಾಡಲೂ ಬಾರದಂತಾಗಿದೆ. ಪಾಲಿಕೆಯ ಈ ಜಾಗದ ಸದುಪಯೋಗ ಆಗದಿರುವ ಕಾರಣ ಅಕ್ರಮ ಚಟುವಟಿಕೆಗಳ ತಾಣವೂ ಆಗಿದೆ.
‘ಈ ಕಟ್ಟಡ ಬ್ರಿಟಿಷರ ಕಾಲದ್ದು, ಇಲ್ಲಿ ಸುತ್ತಮುತ್ತಲಿನ ಬಡ ಜನರಿಗೆ, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಬಂದ ಹಳ್ಳಿ ಮಹಿಳೆಯರಿಗೆ ಈ ಶೌಚಾಲಯ ಬಹಳ ಅನುಕೂಲವಾಗಿತ್ತು. ಕಳೆದ 3 ವರ್ಷಗಳಿಂದ ಬಂದ್ ಆಗಿರುವುದರಿಂದ ಮಹಿಳೆಯರು ಸಂಕಷ್ಟ ಪಡುವಂತಾಗಿದೆ. ಪುರುಷರು ಬೀದಿ ಬದಿಗಾದರೂ ಹೋಗಿ ಬರುತ್ತಾರೆ. ಇಂಥ ಜನಜಂಗುಳಿಯ ಪ್ರದೇಶದಲ್ಲಿ ಮಹಿಳೆಯರು ಎತ್ತ ಹೋಗಬೇಕು’ ಎಂದು ಸ್ಥಳೀಯರಾದ ಸಂಜು ಸಾಳುಂಕೆ ಹಾಗೂ ಪರಶುರಾಮ ಬಾವಿಕಟ್ಟಿ ಪ್ರಶ್ನಿಸಿದರು.
ದಾಜಿಬಾನ ಪೇಟೆ, ಕೊಪ್ಪಿಕರ್ ರಸ್ತೆ, ಸೊರಬದಮಠಗಲ್ಲಿ, ಪೆಂಡಾರ ಗಲ್ಲಿ, ಹೊಸ ಮ್ಯಾದರ ಓಣಿ, ವಿಕ್ಟೋರಿಯಾ ರಸ್ತೆ, ತುಳಜಾಭವಾನಿ ವೃತ್ತ, ಉಳ್ಳಾಗಡ್ಡಿ ಓಣಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯಗಳಿಲ್ಲ. ಇಲ್ಲಿರುವವೆಲ್ಲ ಸಣ್ಣ ಸಣ್ಣ ಮನೆಗಳು. ಅಲ್ಲಿಯ ಬಡ ಜನರೂ ಈ ಸಾರ್ವಜನಿಕ ಶೌಚಾಲಯವನ್ನೇ ಅವಲಂಬಿಸಿದ್ದರು. ಅದೂ ಬಂದ್ ಆದ ನಂತರ ಶೌಚಕ್ಕೆ ಹೋಗಲು ಸಂಕಟ ಪಡುವಂತಾಗಿದೆ’ ಎಂದು ಸಮಾಜ ಸೇವಾ ಕಾರ್ಯಕರ್ತ ಪ್ರಕಾಶ್ ಬುರಬುರೆ ಬೇಸರ ವ್ಯಕ್ತಪಡಿಸಿದರು.
‘ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿಕೊಡುವಂತೆ ಪಾಲಿಕೆ ಆಯುಕ್ತರಿಗೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಸುಸಜ್ಜಿತ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ₹ 40 ಲಕ್ಷದ ಯೋಜನೆಯೂ ಸಿದ್ಧವಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಮಾತ್ರ ಬರುತ್ತಿಲ್ಲ. ಈ ಬಗ್ಗೆ ಪಾಲಿಕೆಯ ಸಾಮಾನ್ಯ ಸಭೆಯಲ್ಲೂ ಹಲವು ಬಾರಿ ಪ್ರಸ್ತಾಪ ಮಾಡಿದ್ದೇನೆ. ಆದರೆ ಈ ಬಗ್ಗೆ ನಿರ್ಲಕ್ಷ್ಯ ತೋರಲಾಗುತ್ತಿದೆ’ ಎಂದು ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಬುರಬುರೆ ದೂರಿದರು.
ಹಳೆಯ ಕಟ್ಟಡವನ್ನು ತೆರವುಗೊಳಿಸಿ ಇದೇ ಜಾಗದಲ್ಲಿ ಸುಸಜ್ಜಿತ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಿ ಎಂಬ ಸ್ಥಳೀಯರ ಬೇಡಿಕೆಗೆ ಮಹಾನಗರ ಪಾಲಿಕೆ ಕಿವಿಗೊಡುವುದೇ ಎಂದು ಕಾದು ನೋಡಬೇಕಿದೆ.
ಸಾರ್ವಜನಿಕ ಶೌಚಾಲಯ ನಿರ್ಮಿಸಿಕೊಡಲು ಮಹಾನಗರ ಪಾಲಿಕೆ ಇಚ್ಛಾಶಕ್ತಿ ತೋರುತ್ತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದೇನೆಸುನೀತಾ ಬುರಬುರೆ ಸದಸ್ಯರು ಹು–ಧಾ ಮಹಾನಗರ ಪಾಲಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.