ADVERTISEMENT

ಅಣ್ಣಿಗೇರಿ: ಬಾಗಿಲು ತೆರೆಯದ ಸಾರ್ವಜನಿಕ ಶೌಚಾಲಯ

ಮಹಿಳೆ, ವೃದ್ಧರಿಗೆ ತೊಂದರೆ: ಬಯಲು ಬಹಿರ್ದೆಸೆ ಅನಿವಾರ್ಯ

ಜಗದೀಶ ಎಂ.ಗಾಣಿಗೇರ
Published 7 ಫೆಬ್ರುವರಿ 2024, 4:46 IST
Last Updated 7 ಫೆಬ್ರುವರಿ 2024, 4:46 IST
ಅಣ್ಣಿಗೇರಿ ಪಟ್ಟಣದ ಕೆರಿ ಓಣಿಯಲ್ಲಿರುವ ಶೌಚಗೃಹದ ಕಟ್ಟಡ ಶಿಥಿಲಗೊಂಡಿರುವುದು.
ಅಣ್ಣಿಗೇರಿ ಪಟ್ಟಣದ ಕೆರಿ ಓಣಿಯಲ್ಲಿರುವ ಶೌಚಗೃಹದ ಕಟ್ಟಡ ಶಿಥಿಲಗೊಂಡಿರುವುದು.   

ಅಣ್ಣಿಗೇರಿ: ಪಟ್ಟಣದ ವ್ಯಾಪ್ತಿಯಲ್ಲಿರುವ 7 ಸಮುದಾಯ ಶೌಚಗೃಹಗಳ ಪೈಕಿ 6 ಶೌಚಗೃಹಗಳು ಪಾಳು ಬಿದ್ದಿವೆ. ಅಕ್ಕಪಕ್ಕದ ಸಾರ್ವಜನಿಕರು ಶೌಚಕ್ಕೆ ಹೋಗಲು ಬಯಲು ಪೊದೆ  ಅಶ್ರಯಿಸುವಂತಾಗಿದೆ.

23 ವಾರ್ಡ್‌ಗಳ ಪೈಕಿ 7 ವಾರ್ಡ್‌ಗಳಲ್ಲಿ ಸಮುದಾಯ ಶೌಚಗೃಹ ನಿರ್ಮಿಸಲಾಗಿದೆ. ನೀರಿನ ಸಮಸ್ಯೆ ಹಾಗೂ ಸರಿಯಾದ ನಿರ್ವಹಣೆ ಇಲ್ಲದೆ ಶೌಚಗೃಹ ಹಾಳಾಗಿವೆ. ಶೌಚಗೃಹದ ಕಟ್ಟಡ ಅನೈತಿಕ ಚಟುವಟಿಕೆಯ ಜಾಗವಾಗಿ ಮಾರ್ಪಾಡಾಗಿವೆ. ಹೀಗಾಗಿ ಈ ಪಟ್ಟಣ ಬಯಲು ಬಹಿರ್ದೆಸೆ ಮುಕ್ತ ಎನ್ನುವುದು ಹೆಸರಿಗೆ ಮಾತ್ರ ಎನ್ನುವಂತಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.

ಮಹಿಳೆಯರು ಶೌಚಕ್ಕೆ ಹೋಗಲು ನಿತ್ಯವೂ ತೊಂದರೆಯಾಗುತ್ತಿದೆ. ಬೆಳಕಾಗುವುದರೊಳಗೆ ಶೌಚಕ್ಕೆ ಹೋಗಬೇಕು. ಇಲ್ಲವೇ ಕತ್ತಲಾಗುವವರೆಗೆ ಕಾಯಬೇಕಾದ ಸ್ಥಿತಿ ಪಟ್ಟಣದ ಮಹಿಳೆಯರಿಗೆ ಒದಗಿ ಬಂದಂತಾಗಿದೆ. ಹಗಲಿನಲ್ಲಿ ಹೋದರೂ ಗಿಡಗಂಟಿ, ಪೊದೆಗಳ ಮರೆಯಲ್ಲಿ ಶೌಚಕ್ಕೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ರಾತ್ರಿ ವೇಳೆ ಹುಳು-ಹುಪ್ಪಡಿಗಳ ಈ ಭಯ ಕಾಡುತ್ತದೆ. ಹರೆಯದ ಮಕ್ಕಳು ಹೊರಗಡೆ ಶೌಚಕ್ಕೆ ಹೋಗುವಾಗ ಪಾಲಕರು ಆತಂಕ ಪಡುವಂತಾಗಿದೆ.

ADVERTISEMENT

ಪಟ್ಟಣದ ಹೊಸಪೇಟೆ ಓಣಿ, ಬಸವೇಶ್ವರ ನಗರ, ಜನ್ನತ್ ನಗರ, ಅಗಸಿ ಓಣಿ, ಕುರಬಗೇರಿ ಓಣಿಯ ಜನರಿಗೆ ಬಹಳಷ್ಠು ತೊಂದರೆಯಾಗಿದೆ. ಶೌಚಗೃಹಗಳ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಅನುದಾನದ ನೆಪ ಹೇಳುತ್ತಾರೆ.

ಹೀಗಾಗಿ ಸ್ಥಳೀಯ ಆಡಳಿತಕ್ಕೆ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಮುಂದಾದರೂ ಪಾಳು ಬಿದ್ದಿರುವ ಸಮುದಾಯ ಶೌಚಗೃಹಗಳ ಕಟ್ಟಡ ದುರಸ್ತಿ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡುತ್ತಾರೆ ಇಲ್ಲವೋ ಎಂದು ಕಾದು ನೋಡಬೇಕಾಗಿದೆ.

ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ಸರಿಯಾಗಿ ನೀರು ಪೂರೈಕೆ ವ್ಯವಸ್ಥೆ ಇಲ್ಲ.  ಅಲ್ಲದೇ ಅವುಗಳ ನಿರ್ವಹಣೆ ಗುತ್ತಿಗೆ ನೀಡಿದರೆ ಪುರಸಭೆಗೆ ಆದಾಯವು ಬರಲಿದೆ ಎನ್ನುತ್ತಾರೆ ಸ್ಥಳೀಯರು. 

ಶೌಚಾಲಯ ಅವ್ಯವಸ್ಥೆಯಿಂದ ಮಹಿಳೆಯರಿಗೆ ತೊಂದರೆಯಾಗಿದೆ. ರಾತ್ರಿ ಹೊತ್ತಿನಲ್ಲಿಯೇ ಶೌಚಕ್ಕೆ ಹೋಗುವ ಸ್ಥಿತಿ ಇದೆ. ನಾಲ್ಕು ಬಾರಿ ಬಂದು ಪರಿಶೀಲನೆ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ
ಲಕ್ಷ್ಮವ್ವ ಪೂಜಾರಿ ಸ್ಥಳೀಯ ನಿವಾಸಿ
ಪಟ್ಟಣದಲ್ಲಿರುವ ಎಲ್ಲ ಶೌಚಾಲಯಗಳನ್ನು ಈಗಾಗಲೇ ದುರಸ್ಳಿತಸಲಾಗಿದೆ. ಅವುಗಳ ಉಸ್ತುವಾರಿಗೆ ಸಿಬ್ಬಂದಿ ನೇಮಕ ಪ್ರಕ್ರಿಯೆ ನಡೆದಿದೆ. ಸಾರ್ವಜನಿಕರು ಇಲ್ಲಿ ಸ್ವಚ್ಛತೆ ಕಾಪಾಡಬೇಕು
ವೈ.ಜಿ.ಗದ್ದಿಗೌಡರ ಮುಖ್ಯಾಧಿಕಾರಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.