ADVERTISEMENT

ಧಾರವಾಡ ಆಕಾಶವಾಣಿ: ಓದುವ ಅಭಿರುಚಿಗೆ ‘ಪುಸ್ತಕ ಪ್ರೀತಿ’

ಧಾರವಾಡ ಆಕಾಶವಾಣಿಯಿಂದ ಬೆಳಿಗ್ಗೆ 7.50ರಿಂದ ಕಾರ್ಯಕ್ರಮ ಪ್ರಸಾರ

ಕಲಾವತಿ ಬೈಚಬಾಳ
Published 14 ಫೆಬ್ರುವರಿ 2021, 16:40 IST
Last Updated 14 ಫೆಬ್ರುವರಿ 2021, 16:40 IST
ಪುಸ್ತಕ ಪ್ರೀತಿ ಕಾರ್ಯಕ್ರಮದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಇದ್ದಾರೆ
ಪುಸ್ತಕ ಪ್ರೀತಿ ಕಾರ್ಯಕ್ರಮದಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿದರು. ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಇದ್ದಾರೆ   

ಹುಬ್ಬಳ್ಳಿ: ಸಾಹಿತ್ಯ ಹಾಗೂ ಪುಸ್ತಕ ಪ್ರೇಮಿಗಳ ಓದುವ ಅಭಿರುಚಿಗೆ ಹಿರಿ–ಕಿರಿಯ ಸಾಹಿತಿಗಳ ಕೃತಿಗಳನ್ನು ಪರಿಚಯಿಸುವ ವಿಶೇಷ ಸರಣಿ ಕಾರ್ಯಕ್ರಮವನ್ನು ಧಾರವಾಡ ಆಕಾಶವಾಣಿ ಕೇಂದ್ರ ಮೊದಲ ಬಾರಿಗೆ ಪ್ರಸಾರ ಮಾಡುತ್ತಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆ, ಧಾರವಾಡ ಆಕಾಶವಾಣಿ ಹಾಗೂ ಹುಬ್ಬಳ್ಳಿ–ಧಾರವಾಡದ ನಗರ ಕೇಂದ್ರ ಗ್ರಂಥಾಲಯದ ಸಹಯೋಗದಲ್ಲಿ ಧಾರವಾಡ ಆಕಾಶವಾಣಿ ಹಾಗೂ ವಿವಿಧ ಭಾರತಿಯಲ್ಲಿ ಪ್ರತಿ ಭಾನುವಾರ ಹಾಗೂ ಗುರುವಾರ ‘ಪುಸ್ತಕ ಪ್ರೀತಿ’ ಬಿತ್ತರವಾಗುತ್ತಿದೆ.

ಜ.14ರಿಂದ ಬೆಳಿಗ್ಗೆ 7.50ರಿಂದ 15 ನಿಮಿಷಗಳ ಕಾಲ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಆಗಸ್ಟ್‌ 8ರ ವರೆಗೆ ನಡೆಯಲಿದೆ. ಓದುವ ಸಂಸ್ಕೃತಿ, ನಾ ಮೆಚ್ಚಿಕೊಂಡ ಪುಸ್ತಕ, ಇತ್ತೀಚೆಗೆ ಬಿಡುಗಡೆಗೊಂಡಿರುವ ಪುಸ್ತಕಗಳ ಕುರಿತು ವಿದ್ವಾಂಸರು, ಲೇಖಕರು, ಹೊಸ ಬರಹಗಾರರು ಮಾಹಿತಿ ನೀಡುತ್ತಾರೆ.

ADVERTISEMENT

‘ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಲಂಕೇಶ್, ಬಸವರಾಜ ಕಟ್ಟೀಮನಿ, ರಹಮತ್ ತರೀಕೆರೆ, ವೈದೇಹಿ, ಶಶಿ ತರೀಕೆರೆ ಅವರ ‘ಡುಮಿಂಗ’, ಶಾಂತಿ ಕೆ.ಅಪ್ಪಣ್ಣ ಅವರ ‘ಮೂರು ಚಿಲ್ಲರೆ’, ಕಿರೇಸೂರ ಗಿರಿಯಪ್ಪ ಅವರ ‘ಗಜಲ್’ ಶರಣಬಸಪ್ಪ ಗುಡದಿನ್ನಿ ಅವರ ಕತೆ ಸೇರಿದಂತೆ ಅನೇಕ ಕೃತಿಗಳು ಅವಲೋಕನಗೊಂಡಿವೆ. ಪಾಶ್ಚಾತ್ಯ ಸಾಹಿತ್ಯ ಕೃತಿಗಳ ಮಹತ್ವವನ್ನು ಹಲವರು ತಿಳಿಸಿದ್ದಾರೆ’ ಎಂದು ಧಾರವಾಡ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ತಿಳಿಸಿದರು.

‘ಮನಸ್ಸಿಗೆ ಮುದ ನೀಡುವ ಲೋಕವನ್ನು ವಿಭಿನ್ನ ಆಯಾಮಗಳಲ್ಲಿ ಕಂಡು ಅವುಗಳಿಗೆ ಅಕ್ಷರ ರೂಪ ನೀಡಿ, ಓದುಗರಿಗೆ ನೀಡಿದ ಹಲವರ ಕೃತಿಗಳನ್ನು ಆಕಾಶವಾಣಿ ಪರಿಚಯಿಸುತ್ತಿದೆ’ ಎಂದು ಸಾಹಿತ್ಯ ಪ್ರೇಮಿ ಮೌನೇಶ ಹೇಳಿದರು.

‘ಏಕ ಕಾಲಕ್ಕೆ ಪ್ರಸಾರಕ್ಕೆ ಪ್ರಸ್ತಾವ’

ಓದುಗರನ್ನು ಗ್ರಂಥಾಲಯದತ್ತ ಸೆಳೆಯಲು ‘ಪುಸ್ತಕ ಪ್ರೀತಿ’ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಆಕಾಶವಾಣಿ ನಿಲಯಗಳಿಂದ ಏಕಕಾಲಕ್ಕೆ ಪ್ರಸಾರ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ ಕುಮಾರ್ ಎಸ್.ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.