ಹುಬ್ಬಳ್ಳಿ: ಕೇಂದ್ರ ರಸ್ತೆ ನಿಧಿ (ಸಿಆರ್‌ಎಫ್) ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಹೊರಡಿಸಿರುವ ಆದೇಶವನ್ನು ಸಚಿವ ರೇವಣ್ಣ ಹಿಂದಕ್ಕೆ ಪಡೆಯದಿದ್ದರೆ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಶಾಸಕ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿ ಎಚ್ಚರಿಕೆ ನೀಡಿದರು.
ಅಂಚಟಗೇರಿಯಿಂದ ಹುಬ್ಬಳ್ಳಿ ವರ್ತುಲ ರಸ್ತೆ ವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸುವ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ‘ಸಿಆರ್‌ಎಫ್‌ನಲ್ಲಿ ಒಟ್ಟು ₹543 ಕೋಟಿಯನ್ನು ಕೇಂದ್ರ ಸರ್ಕಾರ ಜಿಲ್ಲೆಗೆ ಮಂಜೂರು ಮಾಡಿದೆ. ಅದರೆ ಕೇವಲ ₹100 ಮೊತ್ತಕ್ಕೆ ಮಾತ್ರ ಟೆಂಡರ್ ಕರೆಯಲಾಗಿದೆ. ಎಲ್ಲ ಕಾಮಗಾರಿಗಳನ್ನು ನಿಲ್ಲಿಸುವಂತೆ ಲೋಕೋಪಯೋಗಿ ಇಲಾಖೆ ಸುತ್ತೋಲೆ ಹೊರಡಿಸಿದೆ. ಇದನ್ನು ಈ ಕೂಡಲೇ ಹಿಂದಕ್ಕೆ ಪಡೆದು ಕಾಮಗಾರಿಗಳಿಗೆ ಚಾಲನೆ ನೀಡದಿದ್ದರೆ ಹುಬ್ಬಳ್ಳಿಯಿಂದ ಧಾರವಾಡದ ವರೆಗೆ ಪಾದಯಾತ್ರೆ ನಡೆಸಬೇಕಾಗುತ್ತದೆ. ಅದಕ್ಕೂ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
‘ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ತಡೆಯೊಡ್ಡುತ್ತಿರುವ ರಾಜ್ಯ ಸರ್ಕಾರ ಹುಬ್ಬಳ್ಳಿ– ಧಾರವಾಡದ ಬಗ್ಗೆ ಮಲತಾಯಿ ಧೋರಣೆ ತೋರುತ್ತಿದೆ. ಸಿಆರ್‌ಎಫ್ ಕಾಮಗಾರಿಗಳಿಗೆ ಅನುಮತಿ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ, ಪ್ರಯೋಜನಾ ಆಗಲಿಲ್ಲ. ನೀಲಿಜಿನ್ ರಸ್ತೆಗೆ ₹25 ಕೋಟಿ ಮಂಜೂರಾದರೂ ಕಾಮಗಾರಿ ಆರಂಭಿಸಲು ಮನಸ್ಸು ಮಾಡದೆ ನೆಪ ಹೇಳುತ್ತಿದ್ದಾರೆ. ದಿನದ 24 ಗಂಟೆಯೂ ನೀರು ಪೂರೈಸುವ ಯೋಜನೆಗೆ ಕೈಬಿಟ್ಟಿಲ್ಲ ಎಂದು ಸರ್ಕಾರ ಹೇಳುತ್ತಿದೆ, ಆದರೆ ಹಣ ಎಲ್ಲಿದೆ’ ಎಂದು ಅವರು ಪ್ರಶ್ನಿಸಿದರು.
‘ಒತ್ತುವರಿ ಸಮಸ್ಯೆಯ ಪರಿಣಾಮ ಹಲವು ಕಾಮಗಾರಿಗಳು ಅಪೂರ್ಣಗೊಂಡಿವೆ. ಅಭಿವೃದ್ಧಿ ವಿಷಯ ಬಂದಾಗ ಎಲ್ಲ ಧರ್ಮದವರು ಸಹಕಾರ ನೀಡಬೇಕು. ಭೂ ದಾಖಲೆ ವಿಭಾಗದ ಅಧಿಕಾರಿಗಳು ಸಹ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡಬೇಕು’ ಎಂದರು.
ಮೇಯರ್ ಸುಧೀರ್ ಸರಾಫ, ಉಪ ಮೇಯರ್ ಮೇನಕ ಹುರುಳಿ, ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.