ಹುಬ್ಬಳ್ಳಿ: ನಗರದಲ್ಲಿ ಗುರುವಾರ ದಿನವಿಡೀ ತುಂತುರು ಮಳೆಯಾಯಿತು. ಬೆಳಿಗ್ಗೆಯಿಂದಲೇ ಮೋಡಗಳು ಆಗಸದಲ್ಲಿ ದಟ್ಟೈಸಿದ್ದವು. ದಿನ ಪೂರ್ತಿ ಸೂರ್ಯನ ಸುಳಿವಿರದ ಕಾರಣ ನಗರದಲ್ಲಿ ಶೀತದ ವಾತಾವರಣ ನಿರ್ಮಾಣವಾಗಿತ್ತು.
ನಗರದ ಬಹುತೇಕ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳು ಮಳೆಯಿಂದ ಜಲಾವೃತವಾಗಿದ್ದವು. ನೀರು, ಕೆಸರುಮಯವಾಗಿರುವ ರಸ್ತೆಗಳಲ್ಲಿ ಜನ, ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.
ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಕಾರವಾರ ರಸ್ತೆಯ ‘ಬಾಗವಾನ್ ಚಟ್ನಿ’ ಕಾಂಪ್ಲೆಕ್ಸ್‌ನ (ಕಾಂಗ್ರೆಸ್ ಕಚೇರಿ ಇರುವ ಕಾಂಪ್ಲೆಕ್ಸ್) ನೆಲಮಹಡಿಯಲ್ಲಿರುವ 60ಕ್ಕೂ ಹೆಚ್ಚು ಮಳಿಗೆಗಳಿಗೆ ನೀರು ನುಗ್ಗಿದ್ದು, ವ್ಯಾಪಾರ, ವಹಿವಾಟಿಗೆ ತೊಂದರೆಯಾಗಿದೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಂಪ್ಲೆಕ್ಸ್‌ನಲ್ಲಿರುವ ಟೀ ಅಂಗಡಿ ಮಾಲೀಕ ಕಿರಣ ಕಾಟವೆ, ಮಳೆ ಬಂದರೆ ರಸ್ತೆ ನೀರು ಹಾಗೂ ಸಮೀಪದ ಕಾಲುವೆ ನೀರು ಕಾಂಪ್ಲೆಕ್ಸ್‌ಗೆ ನುಗ್ಗುತ್ತದೆ. ನೀರು ಹೊರಹಾಕಲು ಮೂರು ದಿನಗಳಿಂದ ಯತ್ನಿಸುತ್ತಿದ್ದೇವೆ. ಪೂರ್ಣ ಹೊರಹಾಕಲು ಸಾಧ್ಯವಾಗಿಲ್ಲ. ಪಾಲಿಕೆ ಸಿಬ್ಬಂದಿ ಇತ್ತ ಸುಳಿಯುತ್ತಿಲ್ಲ. ನಮ್ಮ ಕಷ್ಟ ಆಲಿಸುತ್ತಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.