ADVERTISEMENT

ಹುಬ್ಬಳ್ಳಿ | ಕೈ ಕೊಟ್ಟ ಮಳೆ: ಹಿಂಗಾರು ಉತ್ಪಾದನೆ ಕುಸಿತ ಆತಂಕ

ತೇವಾಂಶ ಕೊರತೆಯಿಂದ ಇಳುವರಿಯೂ ಕುಂಠಿತ

ಗಣೇಶ ವೈದ್ಯ
Published 20 ಏಪ್ರಿಲ್ 2024, 6:05 IST
Last Updated 20 ಏಪ್ರಿಲ್ 2024, 6:05 IST
ಕಡಲೆ ಬೆಳೆ ಸ್ವಚ್ಛಗೊಳಿಸಿದ ರೈತ –ಸಂಗ್ರಹ ಚಿತ್ರ
ಕಡಲೆ ಬೆಳೆ ಸ್ವಚ್ಛಗೊಳಿಸಿದ ರೈತ –ಸಂಗ್ರಹ ಚಿತ್ರ   

ಹುಬ್ಬಳ್ಳಿ: ಮಳೆ ಕೊರತೆಯಿಂದ ಮುಂಗಾರು ಬೆಳೆಯಿಲ್ಲದೆ ತಲೆಮೇಲೆ ಕೈ ಹೊತ್ತಿದ್ದ ರೈತ ಸಮುದಾಯಕ್ಕೆ ಹಿಂಗಾರು ಬೆಳೆ ಮೇಲೆ ಅತೀವ ನಿರೀಕ್ಷೆ ಇತ್ತು. ಆದರೆ ಮುಂದುವರಿದ ಮಳೆಯ ಕೊರತೆಯಿಂದಾಗಿ ಹಿಂಗಾರು ಕೂಡ ಅಷ್ಟಕ್ಕಷ್ಟೇ ಎಂಬಂತಾಗಿದೆ.

ಹಿಂಗಾರು ಹಂಗಾಮಿನಲ್ಲಿಯೂ ಧಾರವಾಡ ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳ ಬಿತ್ತನೆ ಪ್ರಮಾಣ ಗಣನೀಯವಾಗಿ ತಗ್ಗಿದೆ. ಪರಿಣಾಮವಾಗಿ ಒಟ್ಟು ಉತ್ಪಾದನಾ ಪ್ರಮಾಣವೂ ಕುಸಿಯುವ ಅಂದಾಜು ಮಾಡಲಾಗಿದೆ. ಅಷ್ಟೇ ಅಲ್ಲದೆ, ಭೂಮಿಯಲ್ಲಿನ ತೇವಾಂಶ ಕಡಿಮೆ ಇದ್ದ ಕಾರಣ ಪ್ರತಿ ಹೆಕ್ಟೇರ್‌ಗೆ ಸರಾಸರಿ ಇಳುವರಿಯೂ ಕಡಿಮೆಯಾಗುವ ಲೆಕ್ಕಾಚಾರ ಕೃಷಿ ಇಲಾಖೆಯದ್ದು.

ಜೋಳ, ಗೋಧಿ, ಕಡಲೆ, ಕುಸುಬೆ, ಮೆಕ್ಕೆಜೋಳ, ಸೋಯಾಬೀನ್ ಇವು ಜಿಲ್ಲೆಯ ಪ್ರಮುಖ ಹಿಂಗಾರು ಬೆಳೆಗಳು. ಇವುಗಳಲ್ಲಿ 2022–23ನೇ ಸಾಲಿಗೆ ಹೋಲಿಸಿದರೆ 2023–24ನೇ ಸಾಲಿಗೆ ಕಡಲೆ ಹೊರತುಪಡಿಸಿ ಉಳಿದೆಲ್ಲ ಬೆಳೆಗಳ ಬಿತ್ತನೆ ಕ್ಷೇತ್ರದಲ್ಲಿ ಗಣನೀಯ ಕುಸಿತ ಕಂಡಿತ್ತು. ಕಡಲೆ ಕ್ಷೇತ್ರದಲ್ಲಿ ಕೇವಲ 102 ಹೆಕ್ಟೇರ್ ಕುಸಿತ ಕಂಡಿದ್ದರೂ ಬರೋಬ್ಬರಿ 1.65 ಲಕ್ಷ ಕ್ವಿಂಟಲ್ ಉತ್ಪಾದನೆ ಕುಸಿತ ಅಂದಾಜಿಸಲಾಗಿದೆ. ಮೆಕ್ಕೆಜೋಳ ಬಿತ್ತನೆ ಕ್ಷೇತ್ರದಲ್ಲಿ ಮಾತ್ರ ಕೊಂಚ ಹೆಚ್ಚಳವೂ ಆಗಿದೆ. ಹಾಗಿದ್ದೂ ಮೆಕ್ಕೆಜೋಳ ಉತ್ಪಾದನೆಯಲ್ಲಿ ಕುಸಿತ ನಿರೀಕ್ಷಿಸಲಾಗಿದೆ.

ADVERTISEMENT

ಜೋಳ ಬಿತ್ತನೆ ಕ್ಷೇತ್ರದಲ್ಲಿ 8,985 ಹೆಕ್ಟೇರ್ ಕುಸಿತ ಕಂಡಿದ್ದು, 1.5 ಲಕ್ಷ ಕ್ವಿಂಟಲ್ ಉತ್ಪಾದನೆ ಕಡಿಮೆ ಆಗುವ ಭೀತಿ ಇದೆ. ಕಳೆದ ಸಾಲಿನಲ್ಲಿ ಪ್ರತಿ ಹೆಕ್ಟೇರ್‌ಗೆ ಸರಾಸರಿ 10 ಕ್ವಿಂಟಲ್ ಜೋಳ ಉತ್ಪಾದನೆ ಆಗಿದ್ದರೆ ಈ ಬಾರಿ ಅದು 7.5 ಕ್ವಿಂಟಲ್‌ಗೆ ತಗ್ಗುವ ಸಾಧ್ಯತೆ ಇದೆ.

ಗೋಧಿ ಬಿತ್ತನೆ ಕ್ಷೇತ್ರದಲ್ಲಿ 8,006 ಹೆಕ್ಟೇರ್ ಕುಸಿತ ಉಂಟಾಗಿದ್ದು, 91,840 ಕ್ವಿಂಟಲ್ ಉತ್ಪಾದನೆ ಕುಂಠಿತವಾಗಲಿದೆ. ಪ್ರತಿ ಹೆಕ್ಟೇರ್‌ಗೆ ಇದ್ದ 8.20 ಕ್ವಿಂಟಲ್ ಸರಾಸರಿ ಇಳುವರಿ ಪ್ರಮಾಣವು ಈ ಬಾರಿ 6 ಕ್ವಿಂಟಲ್‌ಗೆ ಕುಸಿಯುವ ಸಾಧ್ಯತೆಯೂ ಇದೆ.

ಕುಸುಬೆ ಕ್ಷೇತ್ರ 1,602 ಹೆಕ್ಟೇರ್‌ಗಳಷ್ಟು ತಗ್ಗಿದ್ದು, ಉತ್ಪಾದನೆಯಲ್ಲಿ 21,334 ಕ್ವಿಂಟಲ್ ಕಡಿಮೆ ಆಗಲಿದೆ. ಅಂತೆಯೇ ಸೋಯಾಬೀನ್ ಕ್ಷೇತ್ರದಲ್ಲಿ 828 ಹೆಕ್ಟೇರ್ ಕುಸಿತ ಉಂಟಾಗಿದ್ದು, 17,943 ಕ್ವಿಂಟಲ್ ಉತ್ಪಾದನೆ ತಗ್ಗುವ ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ ಈ ಪ್ರಮುಖ ಆರು ಬೆಳೆಗಳು ಕಳೆದ ಸಾಲಿನಲ್ಲಿ ಒಟ್ಟಾರೆ 2.07 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಉಂಟಾಗಿದ್ದರೆ ಈ ಪ್ರಮಾಣ 2023–24ನೇ ಸಾಲಿಗೆ 1.83 ಲಕ್ಷ ಹೆಕ್ಟೇರ್‌ಗಳಿಗೆ ಕುಸಿತ ಕಂಡಿದೆ. ಅಂತೆಯೇ, ಕಳೆದ ಸಾಲಿನಲ್ಲಿ 16.98 ಲಕ್ಷ ಕ್ವಿಂಟಲ್ ಒಟ್ಟು ಧಾನ್ಯ ಉತ್ಪಾದನೆ ಕಂಡಿದ್ದರೆ ಈ ಬಾರಿ ಅದು, 12.51 ಲಕ್ಷ ಕ್ವಿಂಟಲ್‌ಗೆ ಕುಸಿಯುವ ಆತಂಕವೂ ಎದುರಾಗಿದೆ.

‘ಅಕ್ಟೋಬರ್–ನವೆಂಬರ್‌ನಲ್ಲಿ ಮಳೆ ಕಡಿಮೆ ಆದ ಕಾರಣ ಕೆಲವು ಬೆಳೆಗಳಿಗೆ ತೇವಾಂಶ ಇಲ್ಲದೆ ಇಳುವರಿ ಕುಸಿತ ಆಗಿದೆ. ರಾಜ್ಯದಾದ್ಯಂತ ಹಿಂಗಾರು ಬೆಳೆ ಬಿತ್ತನೆ ಕ್ಷೇತ್ರದಲ್ಲಿ ಕುಸಿತ ಉಂಟಾಗಿದೆ. ಇದು ಮುಂದಿನ ದಿನಗಳಲ್ಲಿ ಧಾನ್ಯಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಲೂಬಹುದು’ ಎಂದು ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಭಿಪ್ರಾಯಪಡುತ್ತಾರೆ.

ಕಪ್ಪು ಹೊಲದಲ್ಲಿ ಕಡಲೆ ಇಳುವರಿ ಹೆಚ್ಚಾಗಿದೆ. ಆದರೆ ಮುಂಗಾರು ಬೆಳೆ ಹರಗಿ ಹಿಂಗಾರು ಬಿತ್ತನೆ ಮಾಡಿದ ಕೆಂಪು ಮಣ್ಣಿನ ಹೊಲದಲ್ಲಿ ಫಸಲು ಚೆನ್ನಾಗಿ ಬಂದಿಲ್ಲ
-ಬಸವರಾಜ ಯೋಗಪ್ಪನವರ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.