ಹುಬ್ಬಳ್ಳಿ: ಆಗಸದಲ್ಲಿ ಮೋಡ ಮುಸುಕಿ, ಗುಡುಗಿತೆಂದರೆ ದೇಶಪಾಂಡೆನಗರದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡುತ್ತದೆ. ಕಾರಣ: ಎರಡು ವಾರದ ಹಿಂದೆ ಎರಡು ಬಾರಿ ಸುರಿದ ಭಾರಿ ಮಳೆಗೆ ಉಕ್ಕಿ ಹರಿದ ಇಲ್ಲಿನ ರಾಜನಾಲೆಯ ಕೊಚ್ಚೆ ಸೃಷ್ಟಿಸಿದ ಅವಾಂತರ.
ಹುಬ್ಬಳ್ಳಿ ಧಾರವಾಡ ಪಾಲಿಕೆಯ ವಾರ್ಡ್ ಸಂಖ್ಯೆ– 57ರಲ್ಲಿ ಕಾಮಾಕ್ಷಿ ಗುಡಿಯಿಂದ ಶಾರದಾ ಹೋಟೆಲ್‌ವರೆಗೆ ಕನಿಷ್ಠ 4 ಅಡಿ ಎತ್ತರದವರೆಗೆ ಮಲಿನ ನೀರು ನಿಂತು ಇಳಿದ ಪರಿಣಾಮ 10 ದಿನಗಳ ನಂತರವೂ ಈ ಪ್ರದೇಶದಲ್ಲಿ ಕೊಚ್ಚೆಯ ದುರ್ವಾಸನೆ ಇನ್ನೂ ಮಾಸಿಲ್ಲ.
ಸವಣೂರು ಬಿಲ್ಡಿಂಗ್, ದೇಶಪಾಂಡೆನಗರ, ಕಾಟನ್ ಮಾರ್ಕೆಟ್, ಹೊಸೂರ ಭಾಗದ ಹೋಟೆಲ್, ಅಂಗಡಿ, ಮನೆ, ಕಾಂಪ್ಲೆಕ್ಸ್, ಅಪಾರ್ಟ್‌ಮೆಂಟ್‌ಗಳಲ್ಲಿ 4 ರಿಂದ 5 ಅಡಿ ಕೊಚ್ಚೆ ನಿಂತು ಅಂದಿನ ಕೆಟ್ಟ ಅನುಭವ ಈ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿದೆ. ನಾಲಾ ಪಕ್ಕದಲ್ಲೇ ಇರುವ ರೋಟರಿ ಇಂಗ್ಲಿಷ್ ಮಾಧ್ಯಮ ಶಾಲೆಯ ಆವರಣಕ್ಕೆ ನಾಲೆಯ ಮಲಿನ ನೀರು ನುಗ್ಗಿ 4 ಅಡಿಯಷ್ಟು ನಿಂತಿದ್ದರಿಂದ ಕಪಾಟು, ವಾರ್ಡ್‌ರೋಬ್‌ನ ತಳಭಾಗದಲ್ಲಿ ಇಟ್ಟಿದ್ದ ಮಾಹಿತಿ ಕಡತಗಳು, ಪುಸ್ತಕಗಳು ನೀರಲ್ಲಿ ನೆನೆದು ಹಾಳಾಗಿವೆ.
ಇಷ್ಟೆಲ್ಲ ಅವಾಂತರಕ್ಕೆ ಇಲ್ಲಿನ ರಾಜನಾಲಾದ ಅವೈಜ್ಞಾನಿಕ ನಿರ್ಮಾಣವೇ ಕಾರಣ ಎಂಬುದು ವಾರ್ಡ್ ಸದಸ್ಯೆ ಮೀನಾಕ್ಷಿ ವಂಟಮೂರಿ ಮತ್ತು ನಿವಾಸಿಗಳ ಆರೋಪ.
‘ರಾಜನಾಲಾ ಕಟ್ಟಿಕೊಳ್ಳುವಂತಾಗುವಲ್ಲಿ ಸಾರ್ವಜನಿಕರ ಪಾತ್ರವೂ ಇದೆ. ಸಿಕ್ಕಿದ್ದನ್ನು ಮೂಟೆ ಕಟ್ಟಿ ನಾಲಾಕ್ಕೆ ಎಸೆಯುವುದರಿಂದ ನಾಲೆ ಪೂರ್ತಿ ಕಸಗಳಿಂದ ತುಂಬಿತುಳುಕುವಂತಾಗಿದೆ. ಆದ್ದರಿಂದ ಸಾರ್ವಜನಿಕರೂ ಕೂಡ ಕಸವನ್ನು ನಾಲೆಗೆ ಎಸೆಯದೇ ಪಾಲಿಕೆ ವಾಹನಕ್ಕೆ ನೀಡಬೇಕು’ ಎಂಬ ಮೀನಾಕ್ಷಿ ವಂಟಮೂರಿ ಸಲಹೆ ನೀಡಿದರು.
‘50 ವರ್ಷಗಳ ಹಿಂದೆ ನಿರ್ಮಿಸಲಾದ ಈ ನಾಲಾ ವ್ಯಾಪ್ತಿ ಅಂದು ದೇಶಪಾಂಡೆನಗರ ಹಾಗೂ ವಿಶ್ವೇಶ್ವರನಗರಕ್ಕೆ ಸೀಮಿತವಾಗಿತ್ತು. ವರ್ಷ ಕಳೆದಂತೆ ಬಡಾವಣೆಗಳು ಬೆಳೆದು, 30 ಬಡಾವಣೆಗಳು ನಿರ್ಮಾಣವಾಗಿವೆ. ಕಸಕಡ್ಡಿ, ಪ್ಲಾಸ್ಟಿಕ್‌ಗಳಿಂದ ತುಂಬಿಕೊಂಡ ನಾಲಾದಲ್ಲಿ ಕೊಚ್ಚೆ ನೀರು ಹರಿಯದಂತಾಗಿ ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ಮಳೆ ಬಂದರಂತೂ ನಾಲಾದಲ್ಲಿ ಹರಿಯಬೇಕಿದ್ದ ನೀರು ಉಕ್ಕೇರಿ ವಾಪಸ್ ಬಡಾವಣೆಗಳಲೆಲ್ಲ ವ್ಯಾಪಿಸುತ್ತಿದೆ’ ಎಂದು ನಿವಾಸಿ ಅನಂತ ಗಾಣಿಗೇರ್ ತಿಳಿಸಿದರು.
ಆರಂಭದಲ್ಲಿ 10 ಅಡಿ ಆಳವಿದ್ದ ರಾಜನಾಲಾವನ್ನು ಪಾಲಿಕೆಯವರು ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಪ್ಲಾಸ್ಟಿಕ್, ಕಸ,ಹೂಳಿನಿಂದ ತುಂಬಿಕೊಂಡು ನಾಲಾದ ತಳ ನೆಲಮಟ್ಟಕ್ಕೇರಿದೆ. ಅದರಲ್ಲೂ ಸೇತುವೆಯನ್ನು ಅವೈಜ್ಞಾನಿಕ ರೀತಿ ನಿರ್ಮಿಸಿದ್ದರಿಂದ ಜೊತೆಗೆ ಬಿಎಸ್‌ಎನ್‌ಎಲ್‌ನ 16 ಪೈಪ್‌ಗಳನ್ನು ಅಳವಡಿಸಿದ್ದರಿಂದ ನೀರು ಹರಿಯಲು ಅವಕಾಶವೇ ಇಲ್ಲದಂತಾಗಿದೆ ಎಂದು ನಿವಾಸಿಗಳು ಹೇಳಿದರು.
ಇದಕ್ಕೆ ತಾಜಾ ಪುಷ್ಟಿಯೆಂಬಂತೆ ಸೇತುವೆ ಮೇಲೆ ನಿಂತು ಬೀಸಾಡಿ ಹೋಗಿರುವ ಆಸ್ಪತ್ರೆಯೊಂದರ ತ್ಯಾಜ್ಯಗಳು, ಬಳಸಿದ ಸಿರಿಂಜ್‌ಗಳು ನಾಲಾ ಮೇಲಿನ ಬಿಎಸ್‌ಎನ್‌ಎಲ್ ಪೈಪ್‌ಗಳ ಮೇಲಿರುವುದು ಕಂಡುಬಂತು.
ರಾಜನಾಲಾ ಮೇಲೆ ನಿರ್ಮಿಸಲಾದ ಸೇತುವೆ ಇನ್ನಷ್ಟು ಎತ್ತರಿಸಿ ನಾಲಾ ಪ್ರತಿವರ್ಷ ಸ್ವಚ್ಛಗೊಳಿಸುವ ಕಾರ್ಯ ನಡೆಯಬೇಕು. ಆಗ ಮಾತ್ರ ನೀರು ಸರಾಗವಾಗಿ ಹರಿದು ಸಮಸ್ಯೆಗೆ ಮುಕ್ತಿ ಸಿಗಲಿದೆ.–ಮೀನಾಕ್ಷಿ ವಂಟಮೂರಿ, ವಾರ್ಡ್ ನಂ 52ರ ಸದಸ್ಯೆ
ಹುಬ್ಬಳ್ಳಿ–ಧಾರವಾಡ ಮಹಾನಗರ ವ್ಯಾಪ್ತಿಯಲ್ಲಿ ರಾಜನಾಲೆಗಳ ನಿರ್ವಹಣೆ ಕೆಲಸವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಾಗುವುದು.–ಈಶ್ವರ ಉಳ್ಳಾಗಡ್ಡಿ, ಆಯುಕ್ತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
‘ವೈದ್ಯಕೀಯ ತ್ಯಾಜ್ಯ ಅಪಾಯಕಾರಿ’
‘ವೈದ್ಯಕೀಯ ತಾಜ್ಯವನ್ನು ನೀರಿಗೆ ಅಥವಾ ಮಣ್ಣಿಗೆ ಸೇರಿಸುವುದರಿಂದ ಅದು ಅಂತರ್ಜಲವನ್ನು ಸೇರಿ ಕೊಳವೆಬಾವಿಗಳ ಮೂಲಕ ಮನುಷ್ಯರು ಹಾಗೂ ಪ್ರಾಣಿಗಳ ದೇಹ ಸೇರುವ ಸಾಧ್ಯತೆಯಿದೆ. ಇದರಿಂದ ಅಪಾಯವಾಗುವ ಸಾಧ್ಯತೆಯಿದೆ. ಕಾನೂನು ಪ್ರಕಾರ ವೈದ್ಯಕೀಯ ತ್ಯಾಜ್ಯವನ್ನು ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿಯಾಗಿ ಬೀಸಾಕುವುದು ನೀರಿಗೆ ಸೇರಿಸುವುದು ಅಪರಾಧ’ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
‘ವೈದ್ಯಕೀಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸುಡದೆ ನೀರಿಗೆ ಮಣ್ಣಿಗೆ ಹಾಕಿದ್ದು ಗೊತ್ತಾದರೆ ರಿಯೋ ಗ್ರೀನ್ ಎನರ್ಜಿ ಮತ್ತು ಮಾಲಿನ್ಯ ಮಂಡಳಿಗೆ ವರದಿ ನೀಡಲಾಗುವುದು. ತ್ಯಾಜ್ಯ ಹಾಕಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆಸ್ಪತ್ರೆಯ ಪರವಾನಗಿ ರದ್ಧುಪಡಿಸಲಾಗುವುದು’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಎಂ.ಮಲ್ಲಿಕಾರ್ಜುನ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.