ADVERTISEMENT

ಹುಬ್ಬಳ್ಳಿ | ರಕ್ಷಾಬಂಧನ: ರಂಗಿನ ರಾಖಿ ಮೆರುಗು

ದುರ್ಗದಬೈಲ್‌, ಹಳೇ ಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ರಾಖಿ ಖರೀದಿಸಿದ ಮಹಿಳೆಯರು

ಗೌರಮ್ಮ ಕಟ್ಟಿಮನಿ
Published 18 ಆಗಸ್ಟ್ 2024, 5:12 IST
Last Updated 18 ಆಗಸ್ಟ್ 2024, 5:12 IST
ಹುಬ್ಬಳ್ಳಿಯ ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಮಹಿಳೆಯರು ರಾಖಿ ಖರೀದಿಸಿದರು
ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿಯ ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಮಹಿಳೆಯರು ರಾಖಿ ಖರೀದಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ಹುಬ್ಬಳ್ಳಿ: ಅಯೋಧ್ಯೆಯ ಶ್ರೀರಾಮ ಮಂದಿರ, ಕೊಳಲು ಉದುವ ಕೃಷ್ಣ, ಗಣಪ, ಕಣ್ಣು ಕುಕ್ಕುವ ಸ್ಟೋನ್‌ಗಳು, ರುದ್ರಾಕ್ಷಿ, ನವಿಲುಗರಿ, ಮುತ್ತಿನಲ್ಲಿ ಪೋಣಿಸಿದ ರಾಖಿಗಳು ಮಾರುಕಟ್ಟೆಯಲ್ಲಿ ಅಂದ ಹೆಚ್ಚಿಸಿಕೊಂಡಿವೆ. ಸರಳ, ಸುಂದರ ಹಾಗೂ ಸಾಮಾಜಿಕ ಜಾಲತಾಣಗಳಾದ ಇನ್‌ಸ್ಟ್ರಾಗ್ರಾಮ, ವಾಟ್ಸ್‌ಆ್ಯಪ್‌, ಫೇಸ್ಬುಕ್‌ ಚಿಹ್ನೆ ಇರುವ ರಾಖಿಗಳು ಆಕರ್ಷಿಸುತ್ತಿವೆ.

ಹುಬ್ಬಳ್ಳಿಯ ದುರ್ಗದಬೈಲ್‌, ಜನತಾ ಬಜಾರ್‌ ಮತ್ತು ಹಳೇಹುಬ್ಬಳ್ಳಿ ಮಾರುಕಟ್ಟೆಗಳಲ್ಲಿ ತರಹೇವಾರಿ ರಾಖಿಗಳು ಮಾರಾಟಕ್ಕಿದ್ದು, ಮಹಿಳೆಯರು, ಸಹೋದರಿಯರು ತಮ್ಮ ನೆಚ್ಚಿನ ಸಹೋದರರಿಗೆ ರಾಖಿ ಖರೀದಿಸುವ ದೃಶ್ಯ ಕಂಡಿತು.

ಅಯೋಧ್ಯೆಯ ರಾಮ ಮಂದಿರ, ರಾಮ ಚಿತ್ರವಿರುವ ಮತ್ತು ರಾಮ ಎಂದು ಬರೆದಿರುವ ರಾಖಿ ಈ ಬಾರಿ ಹೆಚ್ಚು ಆಕರ್ಷಿಸುತ್ತಿವೆ. ಈ ರಾಖಿಗಳಿಗೆ ಹೆಚ್ಚು ಬೇಡಿಕೆಯಿದೆ.

ADVERTISEMENT

‘ರಾಖಿಗಳ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಪಡಿಸಲಾಗಿದೆ. ಕನಿಷ್ಠ ₹ 5ರಿಂದ ಗರಿಷ್ಠ ₹ 150ರವರೆಗಿನ ರಾಖಿಗಳು ಲಭ್ಯ ಇವೆ. ಸ್ಪಂಜಿನ ಮೇಲೆ ಚಿತ್ತಾರವಿರುವ ಹಳೇ ಮಾದರಿಗಳ ರಾಖಿಗಳ ಬೇಡಿಕೆ ಈಗ ಕೊಂಚ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಹೊಸ ವಿನ್ಯಾಸದ ರಾಖಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಜನರನ್ನು ಆಕರ್ಷಿಸುತ್ತಿವೆ. ಹಬ್ಬಕ್ಕೂ ಮುನ್ನ ಎರಡು ದಿನ ವ್ಯಾಪಾರ ಜೋರು ಇರುತ್ತದೆ’ ಎಂದು ದುರ್ಗದ ಬೈಲ್‌ನ ರಾಖಿ ಮಳಗಿಯ ವ್ಯಾಪಾರಿ ಶಾನವಾಜ್‌ ಐ.ಅಬ್ದುಲ್ಲನವರ್ ಹೇಳಿದರು.

’15ವರ್ಷಗಳಿಂದ ರಾಖಿ ಹಬ್ಬಕ್ಕೆ ಎಂಟು ದಿನ ಮೊದಲು ಇಲ್ಲಿ ಮಳಿಗೆ ಹಾಕುತ್ತಿದ್ದೇನೆ. ಕೋವಿಡ್‌ ನಂತರ ವ್ಯಾಪಾರ ನಿಧಾನ ಚೇತರಿಸಿಕೊಳ್ಳುತ್ತಿದೆ. ಚೀನಾ ಮತ್ತು ಭಾರತದಿಂದ ರಾಖಿಗಳನ್ನು ತರಿಸುತ್ತೇವೆ‘ ಎಂದು ಅವರು ತಿಳಿಸಿದರು.

’ಕಳೆದ ವರ್ಷಕ್ಕಿಂತ ಈ ವರ್ಷ ವ್ಯಾಪಾರ ಚೆನ್ನಾಗಿದೆ. ಕನಿಷ್ಠ ₹10ರಿಂದ ಗರಿಷ್ಠ 250ರವರೆಗೆ ರಾಖಿಗಳನ್ನು ಮಾರುತ್ತಿದ್ದೇನೆ. ಹೊಸ ಹೊಸ ವಿನ್ಯಾಸಗಳಿದ್ದು, ಜನರು ಖರೀದಿಗೆ ಆಸಕ್ತಿ ತೋರುತ್ತಿದ್ದಾರೆ. ಮಕ್ಕಳಿಗಾಗಿ ಕಾರ್ಟೂನ್‌, ಲೈಟಿಂಗ್‌ ಹಾಗೂ ಸ್ಪಿನ್ನರ್‌ ಮಾದರಿಯ ರಾಖಿಗಳು ಲಭ್ಯವಿದ್ದು, ಹೆಚ್ಚು ಬೇಡಿಕೆ ಇವೆ. ₹40ರಿಂದ ₹120ರವರೆಗೆ ಇವುಗಳ ದರವಿದೆ‘ ಎಂದು ಹಳೇ ಹುಬ್ಬಳ್ಳಿಯ ರೇಣುಕಾ ಫ್ಯಾನ್ಸಿ ಸ್ಟೋರ್‌ ಮಾಲೀಕ ಮಂಜುನಾಥ ಆಲಗೂರ ಹೇಳಿದರು.

’ಬಡ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತಹ ಕಡಿಮೆ ದರದ ಹಾಗೂ ಸುಂದರ ರಾಖಿಗಳನ್ನು ಮಾರುತ್ತಿದ್ದೇವೆ. ಬಿಸಿಲು ಹಾಗೂ ಮಳೆ ನಡುವೆಯೂ ಜನ ಖರೀದಿಸುತ್ತಿದ್ದಾರೆ’ ಎಂದು ಜನತಾ ಬಜಾರ್ ವ್ಯಾಪಾರಿ ರಮೇಶ ತಿಳಿಸಿದರು.

ಹುಬ್ಬಳ್ಳಿಯ ದುರ್ಗದಬೈಲ್‌ ಮಾರುಕಟ್ಟೆಯಲ್ಲಿ ಮಹಿಳೆಯರು ರಾಖಿ ಖರೀದಿಸಿದರು ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹೊಸ ವಿನ್ಯಾಸದ ರಾಖಿಗಳು ಹೆಚ್ಚಿವೆ, ವರ್ಷಕ್ಕೊಂದು ಬಾರಿ ರಾಖಿ ಕಟ್ಟುವುದರಿಂದ ದರ ಕೊಂಚ ದುಬಾರಿಯಾದರೂ ಸುಂದರ ರಾಖಿಯನ್ನೆ ಖರೀದಿಸಿದ್ದೇನೆ
ಪ್ರಿಯಾ ಎಂ., ಗ್ರಾಹಕಿ

ಸಂದೇಶ ಸಿಹಿ ಮತ್ತು ರಾಖಿ...

ಕಾಲ ಬದಲಾದಂತೆ ಜನರು ಬದಲಾಗುತ್ತಿದ್ದಾರೆ. ಅದರ ಛಾಪು ಹಬ್ಬಗಳಲ್ಲೂ ಕಾಣುತ್ತಿದೆ. ದೂರದೂರಿನಲ್ಲಿರುವ ಸಹೋದರನಿಗೆ ರಾಖಿ ಜೊತೆಗೆ ಪ್ರೀತಿಯ ಸಂದೇಶ ಅಕ್ಕಿಕಾಳು ಕುಂಕುಮ ಹಾಗೂ ಸಿಹಿ ಇರುವ ಗ್ರೀಟಿಂಗ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಜನರನ್ನು ಸೆಳೆಯುತ್ತಿವೆ. ಕೇವಲ ದೂರದೂರಿನಲ್ಲಿರುವ ಸಹೋದರರಿಗೆ ಮಾತ್ರವಲ್ಲ ಹತ್ತಿರದಲ್ಲಿರುವ ಸಹೋದರರಿಗೂ ಜನ ಇವುಗಳನ್ನು ಖರೀದಿಸುತ್ತಿದ್ದಾರೆ. ಎಲ್ಲವೂ ಪ್ರತ್ಯೇಕವಾಗಿ ಖರೀದಿಸುವ ಬದಲು ಇವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಇವು ನೋಡಲು ಆಕರ್ಷಕವಾಗಿವೆ. ₹100ರಿಂದ ₹250 ಇವುಗಳ ದರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.