ADVERTISEMENT

ಕಲಘಟಗಿ | ಹಳೆಯ ನಾಣ್ಯ, ನೋಟುಗಳಲ್ಲಿ ಮೂಡಿದ ರಾಮಮಂದಿರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 4:32 IST
Last Updated 18 ಜನವರಿ 2024, 4:32 IST
ಹಳೆಯ ನಾಣ್ಯ ಹಾಗೂ ನೋಟುಗಳಲ್ಲಿ ರಾಮ ಮಂದಿರದ ಚಿತ್ರ ಬಿಡಿಸಿರುವದು
ಹಳೆಯ ನಾಣ್ಯ ಹಾಗೂ ನೋಟುಗಳಲ್ಲಿ ರಾಮ ಮಂದಿರದ ಚಿತ್ರ ಬಿಡಿಸಿರುವದು   

ಕಲಘಟಗಿ: ಅಯೋಧ್ಯೆಯಲ್ಲಿ ನಿರ್ಮಾಣಗೊಂಡ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕ್ಷಣಗಣನೆ ಶುರುವಾದ ಬೆನ್ನಲೇ ಇಲ್ಲೊಬ್ಬ ಯುವಕ ತಾನು ಸಂಗ್ರಹಿಸಿದ ಹಳೆಯ ನಾಣ್ಯ ಹಾಗೂ ನೋಟುಗಳಲ್ಲಿ ರಾಮ ಮಂದಿರದ ಚಿತ್ರ ಬಿಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಲಘಟಗಿ ಪಟ್ಟಣದ ಬಸವೇಶ್ವರ ನಗರದ ಸಮಾಜ ಸೇವಕ ಹಾಗೂ ಹಳೆಯ ನಾಣ್ಯ ಸಂಗ್ರಹಕಾರ ಸುನೀಲ ಕಮ್ಮಾರ ಅವರೇ ತಮ್ಮ ಮನೆಯಲ್ಲಿ ಈಗ ದೇಶ ವಿದೇಶದ ನೋಟು ನಾಣ್ಯಗಳಲ್ಲಿ ರಾಮ ಮಂದಿರ ಚಿತ್ರಿಸಿದ್ದು ವಿಶೇಷವಾಗಿದೆ.

ರಾಮ ಮಂದಿರಕ್ಕೆ 18 ದೇಶಗಳ 950 ಹಳೆಯ ನಾಣ್ಯ ಹಾಗೂ 45 ನೋಟುಗಳನ್ನು ಬಳಸಿದ್ದು ಮತ್ತು ರಾಮ ಲಕ್ಷ್ಮಣರ ನಾಣ್ಯಗಳು ಕೂಡಾ ಸಂಗ್ರಹಿಸಿದ್ದು ಮಂದಿರಕ್ಕೆ ಮತ್ತಷ್ಟು ಕಳೆ ಬಂದಿದೆ. ರಾಮ ಮಂದಿರದ ದೇವಸ್ಥಾನದ ಮೇಲೆ ಜೈ ಶ್ರೀರಾಮ ಎಂದು ನಾಣ್ಯಗಳಲ್ಲಿ ಬಿಡಿಸಲಾಗಿದೆ.

ADVERTISEMENT

ನಾಣ್ಯಗಳಲ್ಲಿ ರಾಮ ಮಂದಿರದ 6 ದೇವಸ್ಥಾನಗಳು ಅದರ ಮೇಲೆ ಗೋಪುರ, ಬಾಗಿಲು, ಕಂಬಗಳು ವಿವಿಧ ನಾಣ್ಯಗಳಲ್ಲಿ ವಿಭಿನ್ನವಾಗಿ ಮೂಡಿ ಬಂದಿವೆ. ನೋಟುಗಳಲ್ಲಿ ಕುದುರೆಗಳು ಕಾಣಬಹುದಾಗಿದೆ. ಈಸ್ಟ್ ಇಂಡಿಯಾ ಕಂಪನಿ, ಚೋಳರ, ವಿಜಯನಗರ, ಮೈಸೂರ, ವಿಯಟ್ನಾಂ, ನೆದರ್ಲ್ಯಾಂಡ್, ಮಲೇಷಿಯಾ, ಕುವೈತ್, ಅರಬ್, ಬ್ರಿಟನ್, ಶ್ರೀಲಂಕಾ, ಚೀನಾ, ನೇಪಾಳ ಹಾಗೂ ವಿವಿಧ ದೇಶದ ನಾಣ್ಯ ಹಾಗೂ ನೋಟು ಸಂಗ್ರಹದ ಬಳಕೆ ಮಾಡಲಾಗಿದೆ ಎಂದರು.

ಪಂಚರ್‌ ಅಂಗಡಿ ಇಟ್ಟುಕೊಂಡು ಜೀವನ ನಿರ್ವಹಣೆ ಮಾಡುತ್ತಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ನಾಣ್ಯ ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡಿದ್ದಾರೆ.

‌‌ಧನ್ಯತಾ ಭಾವ

‘ದೇಶದ ಜನತೆ ಶ್ರೀರಾಮನ ದೇವಸ್ಥಾನ ಉದ್ಘಾಟನೆ ಕಡೆ ಕಾತುರದಿಂದ ಕಾಯುತ್ತಿರುವ ಸಮಯದಲ್ಲಿ ನಾನು ಕೂಡಾ ಹಳೆಯ ನಾಣ್ಯ 15 ವರ್ಷಗಳಿಂದ ಸಂಗ್ರಹಿಸುತ್ತ ಬಂದಿದ್ದು ಈಗ ನಮ್ಮ ಮನೆಯಲ್ಲಿ ಸತತ 7 ಗಂಟೆ ಕಾಲ ನಿರಂತರ ಪ್ರಯತ್ನ ಮಾಡಿ ದೇಶ ವಿದೇಶದ ಹಳೆಯ ನಾಣ್ಯ ನೋಟು ಬಳಸಿ ಶ್ರೀರಾಮಮಂದಿರ ಪ್ರತಿಕೃತಿ ಮೂಡಿಸುವ ಮೂಲಕ ಸೇವೆ ಸಲ್ಲಿಸಿದ್ದೇನೆ’ ಎಂದು ಸುನೀಲ ಕಮ್ಮಾರ ಧನ್ಯತೆಯಿಂದ ಹೇಳಿದರು. 

ಸುನೀಲ ಕಮ್ಮಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.